ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಎಲ್‌ಎಕ್ಸ್‌; ವಂಚನೆಗೀಡಾಗಿದವನೇ ಆರಂಭಿಸಿದ್ದ ವಂಚನೆ!

ಕಾರು ಮಾರಾಟದ ಸೋಗಿನಲ್ಲಿ ವಂಚನೆ; ಆರೋಪಿ ಬಂಧನ
Last Updated 30 ಆಗಸ್ಟ್ 2020, 16:24 IST
ಅಕ್ಷರ ಗಾತ್ರ

ಬೆಂಗಳೂರು: ಕಡಿಮೆ ಬೆಲೆಗೆ ಕಾರು ಮಾರಾಟವಿರುವುದಾಗಿ ಹೇಳಿ ಓಎಲ್ಎಕ್ಸ್ ಜಾಲತಾಣದಲ್ಲಿ ಸುಳ್ಳು ಜಾಹೀರಾತು ನೀಡಿ ಜನರನ್ನು ವಂಚಿಸುತ್ತಿದ್ದ ಆರೋಪದಡಿ ಎನ್‌. ಮಂಜುನಾಥ್ (28) ಎಂಬಾತನನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ.

‘ಕನಕಪುರ ತಾಲ್ಲೂಕಿನ ಕಡಿವೇಕೆರೆಯ ಮಂಜುನಾಥ್, ಬೆಂಗಳೂರಿನ ತಾತಗುಣಿಯ ಕಾವೇರಿ ನಗರದಲ್ಲಿ ವಾಸವಿದ್ದ. ನಂದೀಶ್ ರೆಡ್ಡಿ, ಬಾಬು, ಭರತ್, ಶಿವಾಜಿ ರಾವ್ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ. ಚಿನ್ನಾಭರಣ, ಕಾರು, ದ್ವಿಚಕ್ರ ವಾಹನ ಸೇರಿದಂತೆ ₹ 19 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಎಸ್ಸೆಸ್ಸೆಲ್ಸಿಯವರೆಗೆ ಓದಿದ್ದ ಮಂಜುನಾಥ್, ಕಾರ್ಯಕ್ರಮಗಳಲ್ಲಿ ಹೂವಿನ ಅಲಂಕಾರ ಮಾಡುವ ಕೆಲಸ ಮಾಡುತ್ತಿದ್ದ. ಲಾಕ್‌ಡೌನ್‌ನಿಂದಾಗಿ ವ್ಯಾಪಾರ ಸ್ಥಗಿತವಾಗಿ, ಆರ್ಥಿಕ ತೊಂದರೆ ಉಂಟಾಗಿತ್ತು. ಇದೇ ಸಂದರ್ಭದಲ್ಲೇ ಮೊಬೈಲ್ ಖರೀದಿಸಲೆಂದು ಓಎಲ್‌ಎಕ್ಸ್‌ ಜಾಲತಾಣದಲ್ಲಿ ಹುಡುಕಾಟ ನಡೆಸಿದ್ದ. ಮೊಬೈಲ್ ಮಾರಾಟದ ಜಾಹೀರಾತು ನೋಡಿ ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿದ್ದ. ಮುಂಗಡವಾಗಿ ₹ 5 ಸಾವಿರ ಪಡೆದಿದ್ದ ಅಪರಿಚಿತ, ನಂತರ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದ. ಅದರಿಂದ ಸಿಟ್ಟಾದ ಆರೋಪಿ, ವಂಚನೆಯಿಂದ ಹೋದ ಹಣವನ್ನು ವಂಚನೆಯಿಂದಲೇ ಪಡೆಯಲು ಯೋಚಿಸಿದ್ದ. ತಾನೇ ಸುಳ್ಳು ಜಾಹೀರಾತುಗಳನ್ನು ನೀಡಿ ಕೃತ್ಯ ಎಸಗಲಾರಂಭಿಸಿದ್ದ’ ಎಂದೂ ತಿಳಿಸಿದರು.

ಕಾರು ಮಾಲೀಕರು, ಕೆಲಸ ಹುಡುಕುವರ ದಾಖಲೆ ಸಂಗ್ರಹ; ‘ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಗೆ ಹೋಗುತ್ತಿದ್ದ ಆರೋಪಿ, ಕಾರು ಖರೀದಿಸುವ ಸೋಗಿನಲ್ಲಿ ಮಾತನಾಡುತ್ತಿದ್ದ. ಕಾರು ಹಾಗೂ ದಾಖಲೆಗಳ ಫೋಟೊ ತೆಗೆದುಕೊಳ್ಳುತ್ತಿದ್ದ. ಅದನ್ನೇ ಓಎಲ್‌ಎಕ್ಸ್‌ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಿದ್ದ’ ಎಂದೂ ಪೊಲೀಸರು ಹೇಳಿದರು.

‘ಕೆಲಸ ಕೊಡಿಸುವ ಆಮಿಷವೊಡ್ಡಿ ಯುವಕರ ದಾಖಲೆಗಳನ್ನು ಸಂಗ್ರಹಿಸುತ್ತಿದ್ದ ಆರೋಪಿ, ಅವುಗಳನ್ನೇ ಬಳಸಿಕೊಂಡು ಸಿಮ್ ಕಾರ್ಡ್ ಖರೀದಿಸಿದ್ದ. ಅಂಥ ನಂಬರ್‌ಗಳನ್ನೇ ಜಾಹೀರಾತಿನಲ್ಲಿ ನೀಡುತ್ತಿದ್ದ. ತನ್ನನ್ನು ಸಂಪರ್ಕಿಸುತ್ತಿದ್ದ ಗ್ರಾಹಕರ ಜೊತೆ ನಯವಾಗಿ ಮಾತನಾಡಿ ಹಣ ಪಡೆದು ನಾಪತ್ತೆಯಾಗುತ್ತಿದ್ದ. ವಂಚಿಸಿದ ಹಣದಲ್ಲೇ ಆರೋಪಿ, ಕಾರು, ದ್ವಿಚಕ್ರ ವಾಹನ, ಫ್ರಿಡ್ಜ್, ಟಿ.ವಿ ಖರೀದಿಸಿದ್ದ’ ಎಂದೂ ವಿವರಿಸಿದರು.

‘ಚಿಕ್ಕಲ್ಲಸಂದ್ರದ ಹನುಮಗಿರಿ ನಿವಾಸಿ ಧನುಷ್ ಎಂಬುವರಿಗೆ ಆರೋಪಿ ವಂಚಿಸಿದ್ದ. ಆ ಬಗ್ಗೆ ದಾಖಲಾದ ದೂರಿನ ತನಿಖೆ ಕೈಗೊಂಡಾಗ ಆರೋಪಿ ಸಿಕ್ಕಿಬಿದ್ದ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT