ಗುರುವಾರ , ಮೇ 13, 2021
22 °C

ಸಾರ್ವತ್ರಿಕ ತೇರ್ಗಡೆ: ‘ಕ್ಯಾಮ್ಸ್‌’ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘2020–21ನೇ ಸಾಲಿನಲ್ಲಿ 1ರಿಂದ 9ರವರೆಗಿನ ತರಗತಿಗಳಿಗೆ ದಾಖಲಾತಿ ಆಗದೇ ಇರುವ ವಿದ್ಯಾರ್ಥಿ ಗಳನ್ನೂ ಸಾರ್ವತ್ರಿಕವಾಗಿ ತೇರ್ಗಡೆ ಮಾಡುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಕರ್ನಾಟಕ ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌) ವಿರೋಧ ವ್ಯಕ್ತಪಡಿಸಿದೆ.

ಅಲ್ಲದೆ, 6ರಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಸಂಕಲನಾತ್ಮಕ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು ಎಂದೂ ಬೇಡಿಕೆ ಇಟ್ಟಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರಿಗೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಪತ್ರ ಬರೆದಿದ್ದಾರೆ.

‘2020–21ನೇ ಸಾಲಿನಲ್ಲಿ ಅನೇಕ ವಿದ್ಯಾರ್ಥಿಗಳು ಶಾಲೆಗಳಲ್ಲಿ ದಾಖಲಾತಿ ಮಾಡಿಕೊಳ್ಳದೆ ಹೊರಗೆ ಉಳಿದಿದ್ದಾರೆ. ಆ ಮೂಲಕ, ನಿರಂತರ ಕಲಿಕಾ ವ್ಯವಸ್ಥೆಯಲ್ಲಿ ಅವರು ಭಾಗಿ ಆಗಿಲ್ಲ. ಹಲವು ಪೋಷಕರು ತಮ್ಮ ಮಕ್ಕಳನ್ನು ಕೋವಿಡ್‌ ಕಾರಣದಿಂದ ಮನೆಯಲ್ಲೇ ಇರಿಸಿಕೊಂಡಿರುವ ಬಗ್ಗೆ ಲಿಖಿತವಾಗಿ ತಿಳಿಸಿದ್ದಾರೆ. ಅನೇಕರು ಶುಲ್ಕ ಕಟ್ಟಲು ಕಷ್ಟವಾಗುತ್ತದೆ ಎಂದು ಮಕ್ಕಳನ್ನು ದಾಖಲಾತಿ ಮಾಡಿಕೊಂಡಿಲ್ಲ. ಕೆಲವರು ನೇರ ತರಗತಿ ನಡೆಯುತ್ತಿಲ್ಲ ಎಂದು ಶುಲ್ಕ ಕಟ್ಟಿಲ್ಲ. ಸರ್ಕಾರ ಶೇ 30ರಷ್ಟು ಶುಲ್ಕ ವಿನಾಯಿತಿ ನೀಡಿದ್ದರೂ ಸಾರ್ವತ್ರಿಕವಾಗಿ ಪಾಸ್‌ ಮಾಡುತ್ತದೆ ಎಂಬ ಕಾರಣಕ್ಕೆ ಶುಲ್ಕ ಕಟ್ಟದವರೂ ಇದ್ದಾರೆ’ ಎಂದೂ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

‘ಆಯಾ ಶಾಲೆಗಳಲ್ಲಿ ಕನಿಷ್ಠ ಶುಲ್ಕ ಕಟ್ಟಿ ನಿರಂತರ ಶಿಕ್ಷಣದಲ್ಲಿ ಭಾಗವಹಿಸದ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿ ನೀಡಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿರುವ ಅವರು, ‘ಅಂಥ ಮಕ್ಕಳನ್ನು ಕಳೆದ ತರಗತಿಯಲ್ಲಿಯೇ ಅನಿವಾರ್ಯವಾಗಿ ಇರಿಸಬೇಕಾಗುತ್ತದೆ. ಮುಂದಿನ ತರಗತಿಗೆ ಕಡ್ಡಾಯ ಬಡ್ತಿ ಕಷ್ಟ ಸಾಧ್ಯ’ ಎಂದಿದ್ದಾರೆ.

’ಸರ್ಕಾರ ತಮ್ಮ ಹಂತದಲ್ಲಿ ಈ ವಿದ್ಯಾರ್ಥಿಗಳಿಗೆ ಬಡ್ತಿ ನೀಡದೆ, ಸರ್ಕಾರ ಸೂಚಿಸಿದಂತೆ ಕನಿಷ್ಠ ಶುಲ್ಕ ಪಾವತಿಸಿದ ಮತ್ತು ಕನಿಷ್ಠ ಕಲಿಕೆಯಲ್ಲಿ ಭಾಗವಹಿಸಿದವರಿಗೆ ಆನ್‌ಲೈನ್‌ ಮೂಲಕ ಸಂಕಲನಾತ್ಮಕ ಪರೀಕ್ಷೆ ನಡೆಸಿ ಮುಂದಿನ ತರಗತಿಗೆ ಬಡ್ತಿ ನೀಡಲು ಅವಕಾಶ ನೀಡಬೇಕು’ ಎಂದೂ ಒಕ್ಕೂಟ ಆಗ್ರಹಿಸಿದೆ.

‘ಸರ್ಕಾರದ ತೀರ್ಮಾನ ಕಾನೂನುಬದ್ಧ’

‘1ರಿಂದ 9ನೇ ತರಗತಿವರೆಗಿನ ಮಕ್ಕಳನ್ನು ಯಾವುದೇ ಆನ್‌ಲೈನ್‌, ಆಫ್‌ಲೈನ್ ಪರೀಕ್ಷೆ ಇಲ್ಲದೆ ಮೌಲ್ಯಾಂಕನದ ಮೂಲಕ ಮುಂದಿನ ತರಗತಿಗೆ ತೇರ್ಗಡೆ ಮಾಡುವ ಸರ್ಕಾರದ ತೀರ್ಮಾನ‌ ಶಿಕ್ಷಣ ಹಕ್ಕು ಕಾಯ್ದೆಯ ಮೂಲ ಆಶಯಕ್ಕೆ ಪೂರಕವಾಗಿದೆ. ಈ ತೀರ್ಮಾನ ಕಾನೂನು ಬದ್ಧವಾಗಿದೆ’ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ ಹೇಳಿದ್ದಾರೆ.

‘ಮುಂದಿನ ಶೈಕ್ಷಣಿಕ ವರ್ಷಕ್ಕೆ, ಕಲಿಕಾ ವಿಶ್ಲೇಷಣೆಗಳ ಆಧಾರದಲ್ಲಿ ಶಿಕ್ಷಣ ಇಲಾಖೆ ಕಾರ್ಯಯೋಜನೆಯೊಂದನ್ನು ತಯಾರಿಸಿ, ಶಿಕ್ಷಕರು ಮಾಡಿಕೊಳ್ಳಬೇಕಾದ ಸಿದ್ಧತೆ ಹಾಗು ವ್ಯವಸ್ಥೆಗಳನ್ನು ಆನ್‌ಲೈನ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ರಜೆ ಅವಧಿಯಲ್ಲಿ ತರಬೇತಿ ನೀಡಿದರೆ ಶಾಲೆಗಳು ಆರಂಭವಾದ ತಕ್ಷಣ ಕಾರ್ಯಸನ್ನದ್ಧರಾಗಲು ಸಹಾಯವಾಗಲಿದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.