ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌| ಲಾಕ್‌ಡೌನ್‌ಗೆ ವಿರೋಧ: ಕಠಿಣ ನಿಯಮಗಳ ಜಾರಿಗೆ ಜನಪ್ರತಿನಿಧಿಗಳ ಒತ್ತಾಯ

Last Updated 19 ಏಪ್ರಿಲ್ 2021, 21:01 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕಠಿಣ ನಿಯಮಾವಳಿಗಳನ್ನು ಜಾರಿ ಮಾಡಬೇಕು. ಆದರೆ ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ಮಾಡುವುದು ಬೇಡ ಎಂಬ ಅಭಿಪ್ರಾಯ ಬೆಂಗಳೂರು ಶಾಸಕರು ಮತ್ತು ಸಂಸದರ ಸಭೆಯಲ್ಲಿ ವ್ಯಕ್ತವಾಯಿತು.

ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ ಸದಸ್ಯರು ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ಬೇಡ, ಇದರಿಂದ ಬಡವರು, ಕೂಲಿ ಕಾರ್ಮಿಕರ ಜೀವನ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಹೇಳಿದರು.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ, ‘ಇವತ್ತಿನ ಸಭೆಯಲ್ಲಿ ಎಲ್ಲ ಶಾಸಕರು ಮತ್ತು ಸಂಸದರಿಂದಲೂ ಸಲಹೆ ಪಡೆದಿದ್ದೇವೆ. ವಿರೋಧಪಕ್ಷಗಳ ಶಾಸಕರು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಲಾಕ್‌ಡೌನ್‌ ವಿಧಿಸುವುದು ಬೇಡ ಎಂದು ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದರು’ ಎಂದರು.

ಮಾಲ್‌, ಚಿತ್ರಮಂದಿರ, ಕಲ್ಯಾಣ ಮಂಟಪ, ಬಾರ್‌, ಜಿಮ್‌, ಸಭೆ ಸಮಾರಂಭ ಇತ್ಯಾದಿಗಳ ಮೇಲೆ ಇನ್ನಷ್ಟು ಕಠಿಣ ನಿರ್ಬಂಧ ವಿಧಿಸಲು ಸಲಹೆ ವ್ಯಕ್ತವಾಯಿತು.

ಸಭೆಯಲ್ಲಿ ಪ್ರಸ್ತಾಪವಾದ ಪ್ರಮುಖ ಅಂಶಗಳು

* ವೈದ್ಯಕೀಯ ಆಮ್ಲಜನಕದ (ಆಕ್ಸಿಜನ್) ಅಗತ್ಯ ಇರುವವರನ್ನು ಮಾತ್ರ ಆಸ್ಪತ್ರೆಗೆ ಸೇರಿಸಲು ವ್ಯವಸ್ಥೆ. ಕೋವಿಡ್‌ ಸೋಂಕಿತರನ್ನು ಮೊದಲಿಗೆ ಕೋವಿಡ್‌ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗುವುದು. ಅಲ್ಲೇ ಆರೈಕೆ ನೀಡಲಾಗುವುದು. ಉಸಿರಾಟದ ಸಮಸ್ಯೆ ಬಂದರೆ ಮಾತ್ರ ಆಸ್ಪತ್ರೆಗೆ ಸೇರಿಸಲಾಗುವುದು.

* ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ದೊಡ್ಡ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಇಲ್ಲ. ಸಿಲಿಂಡರ್‌ ಅವಲಂಬಿಸಿರುವ ಸಣ್ಣ ಆಸ್ಪತ್ರೆಗಳಲ್ಲಿ ಕೊರತೆ ಇದೆ. ಇನ್ನು ಮುಂದೆ ಪ್ರತಿದಿನ ಮೂರು ಹೊತ್ತು ಸಿಲಿಂಡರ್‌ ಪೂರೈಕೆ ಮಾಡಲಾಗುವುದು. ಈಗ ಒಂದು ಬಾರಿ ಮಾತ್ರ ಪೂರೈಕೆ ಮಾಡಲಾಗುತ್ತಿದೆ.

* ರೆಮ್‌ಡಿಸಿವಿರ್‌ ಇಂಜೆಕ್ಷನ್‌ಗಳ ಕೊರತೆ ಇಲ್ಲ. 20 ಸಾವಿರ ದಾಸ್ತಾನು ಇದೆ. ಇದರ ಅವಶ್ಯಕತೆ ಇಲ್ಲದವರೂ ಖರೀದಿಸಿ ಇಟ್ಟುಕೊಳ್ಳುತ್ತಿರುವುದರಿಂದ ಸಮಸ್ಯೆ ಆಗಿದೆ. ಸರ್ಕಾರದ ಆಸ್ಪತ್ರೆಗಳಲ್ಲಿ ರೆಮ್‌ಡಿಸಿವಿರ್‌ ದಾಸ್ತಾನು ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರತೆ ಇದೆ. ಕೆಲವು ಖಾಸಗಿ ಆಸ್ಪತ್ರೆಗಳು ಅಕ್ರಮವಾಗಿ ಮಾರಾಟ ಮಾಡಿದ್ದರಿಂದ ಸಮಸ್ಯೆ ಆಗಿದೆ. ಈಗ ಕಟ್ಟುನಿಟ್ಟಿನ ನಿಗಾ ಇಟ್ಟು ಪೂರೈಕೆ ಮಾಡಲಾಗುವುದು.

ಬಯಲು ಪ್ರದೇಶದಲ್ಲಿ ಶವ ದಹನಕ್ಕೆ ವ್ಯವಸ್ಥೆ

ಸಾವಿನ ಪ್ರಮಾಣ ಹೆಚ್ಚಾದರೆ ಬಯಲು ಪ್ರದೇಶದಲ್ಲಿ ಕಟ್ಟಿಗೆಗಳ ಮೂಲಕ ಶವಗಳ ದಹನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಆರ್.ಅಶೋಕ ಹೇಳಿದರು.

ಕೋವಿಡ್‌ನಿಂದ ಮೃತಪಟ್ಟವರ ಶವಗಳನ್ನು ಏಕಕಾಲಕ್ಕೆ ಆಸ್ಪತ್ರೆಗಳು ಬಿಡುಗಡೆ ಮಾಡುತ್ತಿರುವುದರಿಂದ ವಿದ್ಯುತ್‌ ಚಿತಾಗಾರಗಳಲ್ಲಿ ಒತ್ತಡ ಉಂಟಾಗಿದೆ. ಏಕ ಕಾಲಕ್ಕೆ ಬಿಡುಗಡೆ ಮಾಡುವುದಕ್ಕೆ ಬದಲು, ಬೆಳಗ್ಗಿನಿಂದ ಶವಗಳನ್ನು ಅಂತ್ಯ ಸಂಸ್ಕಾರಕ್ಕೆ ಬಿಡುಗಡೆ ಮಾಡಲು ಆಸ್ಪತ್ರೆಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಸದಸ್ಯರ ಮಧ್ಯೆ ಮಾತಿನ ಚಕಮಕಿ:

ಸಭೆಯಲ್ಲಿ ಕಾಂಗ್ರೆಸ್‌ನ ಕೃಷ್ಣ ಭೈರೇಗೌಡ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಧ್ಯೆ ಮಾತಿನ ಚಕಮಕಿ ನಡೆಯಿತು.

‘ಒಂದು ವರ್ಷದಿಂದ ಸರ್ಕಾರ ಲೂಟಿ ಮಾಡಿದ್ದೇ ಸಾಧನೆ’ ಎಂದು ಕೃಷ್ಣ ಭೈರೇಗೌಡ ಸರ್ಕಾರದ ವಿರುದ್ಧ ಹರಿಹಾಯ್ದರು. ‘ಇಲ್ಲಿ ರಾಜಕೀಯ ಮಾಡುವುದು ಬೇಡ, ನಮಗೆ ಜನರ ಜೀವನ ಉಳಿಸುವುದು ಮುಖ್ಯ’ ಎಂದು ಸುಧಾಕರ್‌ ತಿರುಗೇಟು ನೀಡಿದರು.

‘ಕಾಲ ಮಿಂಚಿದ ಮೇಲೆ ನಮ್ಮನ್ನು ಸಭೆಗೆ ಕರೆಸಿದ್ದೀರಿ’ ಎಂದು ಕೃಷ್ಣ ಭೈರೇಗೌಡ ಹೇಳಿದರು. ಸಂಸದ ಡಿ.ಕೆ.ಸುರೇಶ್‌ ಮಾತನಾಡಿ, ‘ಸತ್ತವರ ಅಂತ್ಯಕ್ರಿಯೆಯಲ್ಲೂ ಸುಲಿಗೆ ನಡೆಯುತ್ತಿದೆ. ಆಂಬುಲೆನ್ಸ್‌ನವರೂ ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು.

‘ಈ ಸರ್ಕಾರಕ್ಕೆ ತಾಯಿ ಹೃದಯವಿಲ್ಲ’ ಎಂದೂ ಕಾಂಗ್ರೆಸ್‌ ಸದಸ್ಯರು ಹರಿಹಾಯ್ದರು. ಕಂದಾಯ ಸಚಿವ ಆರ್‌.ಅಶೋಕ ಸದಸ್ಯರನ್ನು ಸಮಾಧಾನಪಡಿಸಿದರು.

ರಾಮಲಿಂಗಾರೆಡ್ಡಿ ಹೇಳಿದ್ದು:‘ಆಹಾರ ಮತ್ತು ಔಷಧಿಯನ್ನು ನ್ಯಾಯಯುತವಾಗಿ ವಿತರಿಸಿ. ರಾಜ್ಯದಲ್ಲಿ ಹಾಸಿಗೆ ಸಮಸ್ಯೆ ಇದೆ ತೀವ್ರ ನಿಗಾ ಘಟಕದಲ್ಲಿ ಸ್ಥಳಾವಕಾಶ ಇಲ್ಲ. ಆಮ್ಲಜನಕ ಇಲ್ಲ. ಒಟ್ಟಾರೆ ಭಯದ ಸ್ಥಿತಿ ಇದೆ. ಸಾರ್ವಜನಿಕ ಹಿತ ದೃಷ್ಟಿಯಿಂದ 25 ಸಾವಿರ ಹಾಸಿಗೆ ವ್ಯವಸ್ಥೆ ಮಾಡಿ. ಮನೆಯಲ್ಲಿ ಪ್ರತ್ಯೇಕ ವಾಸಕ್ಕೆ ಒಳಗಾಗಬೇಕಾದವರೂ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಇದನ್ನು ತಡೆಯಬೇಕು. ಸೆಕ್ಷನ್‌ 144 ಜಾರಿ ಮಾಡುವುದು ಉತ್ತಮ. ಲಾಕ್ ಡೌನ್ ಗಿಂತಲೂ ದಂಡಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 144 ಜಾರಿ ಮಾಡಿ ಗುಂಪು ಸೇರುವುದನ್ನು ತಡೆಯುವುದು ಉತ್ತಮ’.

ಜಮೀನ್‌ ಅಹಮದ್ ಖಾನ್:ಚಾಮರಾಜಪೇಟೆ ಮಸೀದಿಯಲ್ಲಿ 20 ಸಾವಿರ ಜನರಿಗೆ ಅವಕಾಶ ಇದ್ದರೂ ರಮ್ಜಾನ್‌ನಲ್ಲಿ ಅದರ ಕಾಲು ಭಾಗ ಅಂದರೆ 5 ಸಾವಿರ ಜನರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕೋವಿಡ್‌ ಆರೈಕೆ ಕೇಂದ್ರ ಸ್ಥಾಪಿಸಬೇಕು. ಸತ್ತವರನ್ನು ಅವರ ಕುಟುಂಬದ ಜಮೀನುಗಳಲ್ಲಿ ಅಂತ್ಯ ಸಂಸ್ಕಾರ ಮಾಡಲು ಅವಕಾಶ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT