ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಂದುವೆಚ್ಚದ ಪ್ರಸ್ತಾವ: ಪ್ರತಿಪಕ್ಷಗಳ ಆಕ್ಷೇಪ

ಪೂರಕ ಅಂದಾಜುಗಳಿಗೆ ಒಪ್ಪಿಗೆ ನೀಡಿದ ವಿಧಾನ ಪರಿಷತ್‌
Last Updated 10 ಡಿಸೆಂಬರ್ 2020, 20:27 IST
ಅಕ್ಷರ ಗಾತ್ರ

ಬೆಂಗಳೂರು: ಇಡೀ ರಾಜ್ಯ ಆರ್ಥಿಕ ಸಂಕಷ್ಟದಲ್ಲಿರುವಾಗ ಹೊಸ ನಿಗಮಗಳ ಸ್ಥಾಪನೆ, ತಿರುಪತಿಯಲ್ಲಿ ದುಬಾರಿ ವೆಚ್ಚದ ಅತಿಥಿ ಗೃಹಗಳ ನಿರ್ಮಾಣ, ನಿಗಮ, ಮಂಡಳಿಗಳಿಗೆ ಸಾಲು ಸಾಲು ನೇಮಕಾತಿ ಮಾಡುವ ಮೂಲಕ ರಾಜ್ಯ ಸರ್ಕಾರ ದುಂದುವೆಚ್ಚ ಮಾಡುತ್ತಿದೆ ಎಂದು ಪ್ರತಿಪಕ್ಷಗಳ ಸದಸ್ಯರು ಗುರುವಾರ ವಿಧಾನ ಪರಿಷತ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪರವಾಗಿ ₹ 3,320.40 ಕೋಟಿ ಮೊತ್ತದ ಪೂರಕ ಅಂದಾಜುಗಳ ಪ್ರಸ್ತಾವವುಳ್ಳ ಧನ ವಿನಿಯೋಗ ಮಸೂದೆ ಮಂಡಿಸಿದರು. ಈ ಕುರಿತು ಚರ್ಚೆಯಲ್ಲಿ ಪಾಲ್ಗೊಂಡ ಬಹುತೇಕ ಸದಸ್ಯರು, ರಾಜಸ್ವ ಸಂಗ್ರಹದಲ್ಲಿ ಇಳಿಕೆಯಾಗಿದ್ದರೂ ಅನಗತ್ಯವಾಗಿ ದುಬಾರಿ ವೆಚ್ಚದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ದೂರಿದರು.

ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಮಾತನಾಡಿ, ‘ಕೋವಿಡ್‌ ಅವಧಿಯಲ್ಲಿ ಜನರನ್ನು ಕೈ ಹಿಡಿಯಬೇಕಿದ್ದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಕೋವಿಡ್‌ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ದುಂದುವೆಚ್ಚದ ಪ್ರಸ್ತಾವಗಳಿಗೆ ಈಗ ಸದನದ ಅನುಮತಿ ಕೋರಲಾಗಿದೆ. ಆದರೆ, ಹಣವಿಲ್ಲ ಎಂಬ ನೆಪ ಹೇಳಿ ಸಾಮಾಜಿಕ ಪಿಂಚಣಿಗಳನ್ನೂ ಸ್ಥಗಿತಗೊಳಿಸಲಾಗಿದೆ‘ ಎಂದು ಟೀಕಿಸಿದರು.

ಜೆಡಿಎಸ್‌ ನಾಯಕ ಬಸವರಾಜ ಹೊರಟ್ಟಿ ಮಾತನಾಡಿ, ‘ರಾಜಕೀಯ ಅನುಕೂಲಕ್ಕಾಗಿ ಒಂದು ಸಮುದಾಯಕ್ಕೆ ನಿಗಮ ಮಾಡಿದಿರಿ. ಅದರ ಬೆನ್ನಲ್ಲೇ ಹತ್ತಾರು ಸಮುದಾಯಗಳಿಂದ ಬೇಡಿಕೆ ಬಂದಿದೆ. ಹೀಗೆ ಮುಂದುವರಿದರೆ ಗತಿ ಏನು? ಅಧಿಕಾರಕ್ಕೆ ಬಂದವರೆಲ್ಲರೂ ಪ್ರಚಾರಕ್ಕಾಗಿ ಪುಕ್ಕಟೆ ಅಕ್ಕಿ ಕೊಡುವುದು, ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸುವುದು, ನಿಗಮ, ಮಂಡಳಿ ಸ್ಥಾಪಿಸುವುದನ್ನೇ ಮಾಡಿದರೆ ಉಳಿದ ಕೆಲಸಗಳಿಗೆ ಹಣ ಎಲ್ಲಿಂದ ತರುತ್ತೀರಿ‘ ಎಂದು ಪ್ರಶ್ನಿಸಿದರು.

‘₹ 220 ಕೋಟಿ ವೆಚ್ಚದಲ್ಲಿ ತಿರುಪತಿಯಲ್ಲಿ ಅತಿಥಿ ಗೃಹ ನಿರ್ಮಿಸಲಾಗುತ್ತಿದೆ. ಈಗ ರಾಜ್ಯದಿಂದ ತಿರುಪತಿಗೆ ಹೋಗುವವರಿಗೆ ಈಗ ಅತಿಥಿ ಗೃಹದ ಅಗತ್ಯ ಹೆಚ್ಚೇನೂ ಇಲ್ಲ. ಇಂತಹ ಯೋಜನೆಗಳನ್ನು ಕೈಬಿಟ್ಟು, ಅನಿವಾರ್ಯ ಕಾಮಗಾರಿಗಳಗೆ ಬಳಸಿಕೊಳ್ಳಬೇಕು‘ ಎಂದು ಜೆಡಿಎಸ್‌ನ ತಿಪ್ಪೇಸ್ವಾಮಿ ಸಲಹೆ ನೀಡಿದರು.

ಮಾರ್ಗಗಳ ಹರಾಜಿಗೆ ಸಲಹೆ

ಕಾಂಗ್ರೆಸ್‌ ಸದಸ್ಯ ಸಿ.ಎಂ. ಇಬ್ರಾಹಿಂ ಮಾತನಾಡಿ, ‘ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳಲ್ಲಿ 18,000 ಬಸ್‌ಗಳಿದ್ದರೂ ಅವು ನಷ್ಟದಲ್ಲಿವೆ. ಸರ್ಕಾರಿ ಸ್ವಾಮ್ಯದಲ್ಲಿರುವ ಮಾರ್ಗಗಳನ್ನು ಹರಾಜು ಮಾಡಿದರೆ ವರ್ಷಕ್ಕೆ ₹ 3,000 ಕೋಟಿ ವರಮಾನ ಬರಲಿದೆ. ಯೋಜನಾ ಮಂಡಳಿಯಿಂದಲೂ ಈ ಕುರಿತು ಶಿಫಾರಸು ಮಾಡಲಾಗಿದೆ. ಅದನ್ನು ಪರಿಗಣಿಸಿ‘ ಎಂದರು.

ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಹಾಗೂ ಅನುದಾನಿತ, ಖಾಸಗಿ ಶಾಲೆಗಳ ಶಿಕ್ಷಕರ ನೆರವಿಗೆ ಬರುವಂತೆ ಜೆಡಿಎಸ್‌ನ ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ ಸೇರಿದಂತೆ ಹಲವರು ಒತ್ತಾಯಿಸಿದರು. ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಬಾಕಿ ಇರುವ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಹಲವು ಸದಸ್ಯರು ಆಗ್ರಹಿಸಿದರು.

ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಹಾಗೂ ಶುಲ್ಕ ಮರುಭರಿಕೆ ಅನುದಾನ ಕಡಿತಗೊಳಿಸಿರುವುದಕ್ಕೆ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಮತ್ತು ನಸೀರ್‌ ಅಹಮದ್‌ ಆಕ್ಷೇಪ ವ್ಯಕ್ತಪಡಿಸಿದರು.

ಮಿತಿಯೊಳಗೆ ನಿರ್ವಹಣೆ: ಬೊಮ್ಮಾಯಿ

‘ರಾಜ್ಯ ಸರ್ಕಾರ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಿತಿಯೊಳಗೆ ಕೆಲಸ ಮಾಡುತ್ತಿದೆ. ಪ್ರಸಕ್ತ ವರ್ಷ ಜಿಎಸ್‌ಟಿ ಮೂಲದಿಂದ ₹ 23,000 ಕೋಟಿಯಷ್ಟು ವರಮಾನ ಕಡಿಮೆಯಾಗಲಿದೆ. ಹೆಚ್ಚುವರಿ ಸಾಲ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ‘ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಉತ್ತರಿಸಿದರು.

ಸಾಮಾಜಿಕ ಪಿಂಚಣಿ ಸ್ಥಗಿತಗೊಂಡಿಲ್ಲ. ತಾಂತ್ರಿಕ ಕಾರಣಗಳಿಂದ ಬಾಕಿ ಇರುವ ಪ್ರಕರಣಗಳಲ್ಲಿ ತ್ವರಿತವಾಗಿ ಹಣ ಬಿಡುಗಡೆ ಮಾಡಲಾಗುವುದು. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

ತಮಿಳುನಾಡು ಮಾದರಿ: ‘ಪ್ರತಿ ವರ್ಷ ನಿವೃತ್ತಿಯಾಗುವ ಸಂಖ್ಯೆಯಷ್ಟು ಶಿಕ್ಷಕರನ್ನು ಅದೇ ವರ್ಷ ನೇಮಕಾತಿ ಮಾಡಲು ತಮಿಳುನಾಡು ಮಾದರಿ ಅನುಸರಿಸುವ ಪ್ರಸ್ತಾವ ಸರ್ಕಾರದ ಮುಂದಿದೆ. ಶೀಘ್ರದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಸಚಿವರು ಉತ್ತರ ನೀಡಿದ ಬಳಿಕ ಧ್ವನಿಮತದೊಂದಿಗೆ ಪೂರಕ ಅಂದಾಜುಗಳಿಗೆ ಸದನ ಒಪ್ಪಿಗೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT