ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವಾರಿಯರ್‌ಗಳಿಗೆ 2ನೇ‌ ಲಸಿಕೆಗೆ ಶುಲ್ಕ: ವಿರೋಧ

Last Updated 2 ಮಾರ್ಚ್ 2021, 19:46 IST
ಅಕ್ಷರ ಗಾತ್ರ

ಕಲಬುರ್ಗಿ: ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್‌ಗಳಿಗೆ ಮೊದಲ ಹಂತದಲ್ಲಿ ಉಚಿತವಾಗಿ ಕೋವಿಡ್ ಲಸಿಕೆಯನ್ನು ಆಯಾ ಆಸ್ಪತ್ರೆಯಲ್ಲಿಯೇ ಕೊಡಲಾಗಿತ್ತು. ಈಗ ಎರಡನೇ ಹಂತದಲ್ಲಿ ಆಯಾ ಆಸ್ಪತ್ರೆಯಲ್ಲೇ ಲಸಿಕೆ ಪಡೆಯಲು ₹ 250 ಶುಲ್ಕ ನಿಗದಿ ಪಡಿಸಲಾಗಿದ್ದು, ಈ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲು ಸರ್ಕಾರ ಶುಲ್ಕ ನಿಗದಿ ಮಾಡಿರುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಕೆಪಿಸಿಸಿ ವೈದ್ಯರ ಘಟಕವು ಮಂಗಳವಾರ ಕಲಬುರ್ಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

‘ಕೋವಿಡ್ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯರ ಸೇವೆಯನ್ನು ಜಿಲ್ಲಾಡಳಿತ ಬಳಸಿಕೊಂಡಿದೆ. ಮೊದಲ ಲಸಿಕೆಯನ್ನು ಉಚಿತವಾಗಿ ನೀಡಿ ಈಗ ಎರಡನೇ ಲಸಿಕೆಗೆ ಶುಲ್ಕ ಕೊಡಿ ಎನ್ನುತ್ತಿರುವುದು ಏಕೆ’ ಎಂದು ಕೆಪಿಸಿಸಿ ವೈದ್ಯರ ಘಟಕದ ರಾಜ್ಯ ಉಪಾಧ್ಯಕ್ಷ ಡಾ. ಕಿರಣ ದೇಶಮುಖ ಪ್ರಶ್ನಿಸಿದ್ದಾರೆ.

‘ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್‌ಗಳು, ಡಿ ಗ್ರೂಪ್ ಸಿಬ್ಬಂದಿ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಸೇರಿ 1900 ಜನರಿಗೆ ಲಸಿಕೆ ನೀಡಬೇಕು. ಮೊದಲು ಇಲ್ಲಿಯೇ ಲಸಿಕೆ ನೀಡಿದ್ದರು. ಈಗ ಉಚಿತವಾಗಿ ಬೇಕೆಂದರೆ ಜಿಲ್ಲಾಸ್ಪತ್ರೆಗೆ ಬನ್ನಿ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಇದೇ ಷರತ್ತನ್ನು ಮುಂಚೆ ಏಕೆ ವಿಧಿಸಲಿಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ.

ಲಸಿಕೆಗೆ ಶುಲ್ಕ ವಿಧಿಸುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಕೆಪಿಸಿಸಿ ವಕ್ತಾರ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ, ‘ಪಿ.ಎಂ. ಕೇರ್ಸ್‌ ನಿಧಿಗೆ ಜನರ ಹಣ ಧಾರೆ ಎರೆದರೂ ಸರ್ಕಾರ ಲಸಿಕೆಯನ್ನು ಉಚಿತವಾಗಿ ನೀಡುತ್ತಿಲ್ಲವೇಕೆ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT