ಗುರುವಾರ , ಅಕ್ಟೋಬರ್ 22, 2020
21 °C
‘ಕೈ’ ನಾಯಕರ ಸಭೆಯಲ್ಲಿ ಕೇಂದ್ರ– ರಾಜ್ಯ ಸರ್ಕಾರ ಕಾರ್ಯವೈಖರಿಗೆ ಆಕ್ರೋಶ

ತಳಮಟ್ಟದಿಂದ ಪಕ್ಷ ಸಂಘಟಿಸಿ– ಸುರ್ಜೇವಾಲಾ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ತಳಮಟ್ಟದಿಂದ ಪಕ್ಷದ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ ನಾಯಕರಾಗಿ ಗುರುತಿಸಿಕೊಳ್ಳಲು, ಹುದ್ದೆ, ಸ್ಥಾನಮಾನ ಪಡೆಯಲು ಸಾಧ್ಯ’ ಎಂದು ಪಕ್ಷದ ಕಾರ್ಯಕರ್ತರಿಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಕಿವಿಮಾತು ಹೇಳಿದರು.

ಕೆಪಿಸಿಸಿ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ತತ್ವಾಧಾರಿತ ‘ಮಾಸ್’‌ ಪಕ್ಷ. ತಳಹಂತದಲ್ಲಿ ಪಕ್ಷವನ್ನು ಪುನರ್‌ ಸಂಘಟಿಸಬೇಕು. ಅದಕ್ಕೆ ನಾಯಕರು, ಕಾರ್ಯಕರ್ತರು ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಕಾರ್ಯವೈಖರಿಯನ್ನು ಸುರ್ಜೇವಾಲಾ ತೀವ್ರವಾಗಿ ಟೀಕಿಸಿದರು. ‘ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾದ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ದೇಶವನ್ನು ಬಂಡವಾಳಶಾಹಿಗಳಿಗೆ ನೀಡಲು ಮುಂದಾಗಿದೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಅವರ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದೆ’ ಎಂದು ಆರೋಪಿಸಿದರು.

‘ಯಡಿಯೂರಪ್ಪ, ಅವರ ಮಕ್ಕಳು, ಮೊಮ್ಮಕ್ಕಳು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ. ಈ ಬಗ್ಗೆ ಪಕ್ಷ ಧ್ವನಿ ಎತ್ತಬೇಕು. ಇದನ್ನು ಜನರ ಬಳಿಗೆ ಕೊಂಡೊಯ್ಯಬೇಕು. ನಿರಂತರವಾಗಿ ಹೋರಾಟ ರೂಪಿಸಬೇಕು’ ಎಂದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ,‘ಬಿಜೆಪಿ ಸರ್ಕಾರ ಭ್ರಷ್ಟಾಚಾರ, ಜನವಿರೋಧಿ ನೀತಿ ಅನುಸರಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ ಬಗ್ಗೆ ಜನರು ಈಗ ಮರುಕಪಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಜನರೇ ನಿರ್ಧರಿಸಿದ್ದಾರೆ’ ಎಂದರು.

‘ಎಲ್ಲರೂ ಒಗ್ಗೂಡಿ ಪಕ್ಷವನ್ನು ಮುನ್ನಡೆಸಬೇಕಿದೆ. ಹಾಗಾದಾಗ ಮಾತ್ರ ಪಕ್ಷದ ಬೆಳವಣಿಗೆ ಸಾಧ್ಯ. ಪ್ರಸ್ತುತ ಸರ್ಕಾರ ಅಸಮರ್ಪಕ ಕಾಯ್ದೆಗಳನ್ನು ತಂದಿದೆ. ಇದರ ಬಗ್ಗೆ ಹೋರಾಟ ಅನಿವಾರ್ಯವಾಗಿದೆ. ರೈತರ ಜೊತೆ ಕಾರ್ಮಿಕರ ಬಗ್ಗೆಯೂ ಧ್ವನಿ ಎತ್ತಬೇಕು’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ‘ಗ್ರಾಮ ಪಂಚಾಯತ್ ಚುನಾವಣೆ ಬರುತ್ತಿದೆ. ನಾವು ಪ್ರತಿ ಹಳ್ಳಿ,‌ ಮನೆ ಮನೆಗೂ ಹೋಗಬೇಕು. ಎಲ್ಲರೂ ಕೊಟ್ಟಿರುವ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ‌ ನಿಭಾಯಿಸಬೇಕು. ಕೆಪಿಸಿಸಿ ಪದಾಧಿಕಾರಿಗಳೆಂದು ಹೇಳಿಕೊಂಡು ಓಡಾಡಿದರೆ ಆಗುವುದಿಲ್ಲ. ಕಾರ್ಯಕರ್ತರ ಜೊತೆ ಕೆಲಸ ಮಾಡಬೇಕು. ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಪಡೆಯಬೇಕೆಂದರೂ ಬೂತ್ ಮಟ್ಟದಲ್ಲಿ ಕೆಲಸ ಮಾಡಿರಬೇಕು’ ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.

ಈ ರಾಜ್ಯದಲ್ಲಿ (ಕರ್ನಾಟಕದಲ್ಲಿ ) ಎರಡು ರೀತಿಯ ತೆರಿಗೆ ವ್ಯವಸ್ಥೆ ಇದೆ. ಒಂದು ಜಿಎಸ್‌ಟಿ, ಇನ್ನೊಂದು ವಿಎಸ್‌ಟಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲಾ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಕುಟುಂಬ ನಡೆಸಿದ ಭ್ರಷ್ಟಚಾರದ ವಿರುದ್ಧ ಕೋರ್ಟ್‌ ಮೆಟ್ಟಿಲೇರುತ್ತೇವೆ. ಈ ಸರ್ಕಾರ ಸತ್ತ ಹೆಣಗಳ ಮೇಲೆ ಹಣ ಲೂಟಿ ಮಾಡುತ್ತಿದೆ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

‘ಬಂದ್‌ಗೆ ಕೆಪಿಸಿಸಿ ಬೆಂಬಲ’

‘ಮೋದಿ ಹಾಗೂ ಯಡಿಯೂರಪ್ಪ ಸರ್ಕಾರ ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿಗಳ ಮೂಲಕ ರೈತರನ್ನು ಕೆಲವು ಉದ್ಯಮಿಗಳ ಜೀತದಾಳುಗಳನ್ನಾಗಿ ಮಾಡಲು ಹೊರಟಿದೆ. ಹೀಗಾಗಿ, ರೈತ ಸಂಘಟನೆಗಳು ಕರೆ ನೀಡಿರುವ ಬಂದ್‌ಗೆ ಕೆಪಿಸಿಸಿ ಸಂಪೂರ್ಣ ಬೆಂಬಲ ನೀಡಲಿದೆ. ಕಾಂಗ್ರೆಸ್ ಎಂದಿಗೂ ರೈತರ ಪರ. ಮುಂದೆಯೂ ರೈತರ ಹಕ್ಕಿಗಾಗಿ ಹೋರಾಡುತ್ತೇವೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು