ಗುರುವಾರ , ಜೂನ್ 24, 2021
23 °C

ಟ್ರಯಾಜ್‌ ಕೇಂದ್ರಗಳಲ್ಲೂ ಆಮ್ಲಜನಕ ಸಾಂದ್ರಕ: ಸಿಎಂ ಬಿ.ಎಸ್‌. ಯಡಿಯೂರಪ್ಪ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ರೋಗಿಗಳ ಚಿಕಿತ್ಸೆಗಾಗಿ ಆರಂಭಿಸುತ್ತಿರುವ ಸರದಿ ನಿರ್ಧಾರ (ಟ್ರಯಾಜ್‌) ಕೇಂದ್ರಗಳಲ್ಲೂ ಆಮ್ಲಜನಕ ಸಾಂದ್ರಕಗಳನ್ನು ಬಳಸಿ ತುರ್ತು ಅಗತ್ಯ ಇರುವವರಿಗೆ ಚಿಕಿತ್ಸೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ಕೆಂಗೇರಿ ಉಪ ನಗರದಲ್ಲಿನ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಆರಂಭಿಸಿರುವ ಟ್ರಯಾಜ್‌ ಕೇಂದ್ರವನ್ನು ಸೋಮವಾರ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ‘ಟ್ರಯಾಜ್‌ ಕೇಂದ್ರಗಳಿಗೆ ಬರುವ ಕೋವಿಡ್‌ ರೋಗಿಗಳ ಆರೋಗ್ಯದ ಸ್ಥಿತಿಯನ್ನು ಅಲ್ಲಿರುವ ವೈದ್ಯರು ಮೌಲ್ಯಮಾಪನ ನಡೆಸುತ್ತಾರೆ. ತುರ್ತು ಅಗತ್ಯ ಇರುವವರಿಗೆ ಅಲ್ಲಿಯೇ ಆಮ್ಲಜನಕದ ಪೂರೈಕೆ ಮಾಡಲಾಗುವುದು’ ಎಂದರು.

ಈ ಕೇಂದ್ರಗಳಲ್ಲಿ ದಿನದ 24 ಗಂಟೆಯೂ ವೈದ್ಯರು ಲಭ್ಯರಿರುತ್ತಾರೆ. ಅವರು ತಜ್ಞ ವೈದ್ಯರ ಜತೆ ಸಂಪರ್ಕದಲ್ಲಿದ್ದು, ಅಗತ್ಯ ಸಲಹೆಗಳನ್ನು ಪಡೆಯುತ್ತಿರುತ್ತಾರೆ. ವೈದ್ಯಕೀಯ ಉಪಕರಣಗಳು ಮತ್ತು ಔಷಧಿಗಳನ್ನೂ ಟ್ರಯಾಜ್‌ ಕೇಂದ್ರಗಳಿಗೆ ಪೂರೈಸಲಾಗುವುದು ಎಂದು ಹೇಳಿದರು.

ಟ್ರಯಾಜ್‌ ಕೇಂದ್ರಗಳಿಗೆ ಹೊಂದಿಕೊಂಡಂತೆ ಆಂಬುಲೆನ್ಸ್‌ ಇರಿಸಲಾಗುವುದು. ಅಲ್ಲಿಗೆ ಬರುವ ರೋಗಿಗಳನ್ನು ಪರೀಕ್ಷಿಸುವ ವೈದ್ಯರು, ಆಸ್ಪತ್ರೆಗೆ ದಾಖಲಿಸುವುದು, ಕೋವಿಡ್‌ ಆರೈಕೆ ಕೇಂದ್ರಕ್ಕೆ ಕಳಿಸುವುದು ಅಥವಾ ಮನೆಯಲ್ಲೇ ಪ್ರತ್ಯೇಕವಾಸದಲ್ಲಿ ಇರಿಸುವ ಕುರಿತು ತೀರ್ಮಾನಿಸುತ್ತಾರೆ. ಬಳಿಕ ಅಲ್ಲಿಂದಲೇ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗುವುದು. ಮನೆಯಲ್ಲೇ ಪ್ರತ್ಯೇಕವಾಸದಲ್ಲಿ ಇರುವವರಿಗೆ ಟ್ರಯಾಜ್‌ ಕೇಂದ್ರಗಳ ಮೂಲಕವೇ ಔಷಧಿ ತಲುಪಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು