ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್‌ ಗಲಾಟೆ ಆರಂಭಿಸಿದ್ದು ಬಿಜೆಪಿ: ಡಿಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷರ ಹಿಂದೆ ಬೆಂಬಲಿಗರ ದಂಡು, ಫೋಟೊ ತಗೆಸಿಕೊಳ್ಳಲು ಜಿದ್ದು
Last Updated 17 ಡಿಸೆಂಬರ್ 2020, 16:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಧಾನ ಪರಿಷತ್‌ನಲ್ಲಿ ನಡೆದ ಗಲಾಟೆ ಮೊದಲು ಆರಂಭಿಸಿದ್ದು ಬಿಜೆಪಿ ನಾಯಕರು. ಯಾವಾಗಲೂ ಅಧಿಕಾರಕ್ಕೆ ಆಸೆಪಡುವ ಬಿಜೆಪಿಯವರಿಂದ ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ದೊಡ್ಡ ಕಳಂಕ ಅಂಟಿಕೊಂಡಿತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದರು.

ಗುರುವಾರ ರಾತ್ರಿ ಧಾರವಾಡಕ್ಕೆ ತೆರಳುವ ಮೊದಲು ಇಲ್ಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಬಿಜೆಪಿಯವರು ಸಭಾಪತಿಗೆ ಪರಿಷತ್‌ ಒಳಗೆ ಬರಲು ಅವಕಾಶ ಕೊಡದೆ ಉಪಸಭಾಪತಿಯನ್ನು ಕುರ್ಚಿಯ ಮೇಲೆ ಕೂಡಿಸಿದ್ದು ಪ್ರಜಾಪ್ರಭುತ್ವ ವಿರೋಧಿ ಕೆಲಸ. ಕಾನೂನು ಹೋರಾಟ, ನೋಟಿಸ್‌, ಚರ್ಚೆ ಹೀಗೆ ಹಲವಾರು ದಾರಿಗಳಿದ್ದರೂ ಇವೆಲ್ಲವನ್ನು ಬಿಟ್ಟು ಬಿಜೆಪಿ ಗಲಾಟೆ ಮಾಡಿದ್ದು ಕಳಂಕ ತರುವಂಥದ್ದು’ ಎಂದರು.

‘ಜನವಿರೋಧಿ ಮಸೂದೆಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಇದನ್ನು ತಪ್ಪಿಸುವ ಸಲುವಾಗಿ ಬಿಜೆಪಿ ನಾಯಕರು ಗಲಾಟೆ ಮಾಡಿದ್ದಾರೆ. ನಮಗೆ ಸಂಖ್ಯಾಬಲ ಇಲ್ಲ ಎನ್ನುವುದು ಗೊತ್ತಿದ್ದೂ ತರಾತುರಿಯಲ್ಲಿ ಉಪಸಭಾಪತಿಯನ್ನು ಕುರ್ಚಿಯ ಮೇಲೆ ಕೂಡಿಸಿದ್ದು ಏಕೆ? ಸಭಾಪತಿಗೆ ಒಳಗೆ ಬರಲು ಅವಕಾಶ ಕೊಡದ ಕಾರಣ ನಮ್ಮವರೂ ಗಲಾಟೆ ಮಾಡಿದರು. ಕಾಂಗ್ರೆಸ್‌ ಯಾವಾಗಲೂ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ. ಪ್ರತಾಪಚಂದ್ರ ಶೆಟ್ಟಿ ಪಕ್ಷದ ಸೂಕ್ಷ್ಮ ವ್ಯಕ್ತಿತ್ವದ ನಾಯಕರು. ಅವರು ಎಂದೂ ಅಧಿಕಾರ ಬಯಸಿದವರಲ್ಲ’ ಎಂದರು.

ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ರಾಜ್ಯದಲ್ಲಿ ಈಗಾಗಲೇ ಈ ಕಾಯ್ದೆ ಜಾರಿಯಲ್ಲಿದೆ. ಬಿಜೆಪಿ ಒಂದು ವರ್ಗಕ್ಕೆ ಸೀಮಿತವಾಗಿ ಕೆಲಸ ಮಾಡುತ್ತಿದೆ. ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ’ ಎಂದರು.

ಒಂದೇ ವಿಮಾನದಲ್ಲಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಡಿ.ಕೆ. ಶಿವಕುಮಾರ್‌ ಮತ್ತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಅವರು ಬೆಂಗಳೂರಿನಲ್ಲಿ ಒಂದೇ ವಿಮಾನದಲ್ಲಿ ಇಲ್ಲಿಗೆ ಬಂದರು. ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುವಾಗ ಜೋಶಿ ಹೊರಹೋದರು.

ಶಿವಕುಮಾರ್‌ ಅವರನ್ನು ಸ್ವಾಗತಿಸಲು, ಫೊಟೊ ಕ್ಲಿಕ್ಕಿಸಿಕೊಳ್ಳಲು ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಶಿವಕುಮಾರ್‌ ಗುರುವಾರ ರಾತ್ರಿ ಧಾರವಾಡದಲ್ಲಿ ವಾಸ್ತವ್ಯ ಹೂಡಿ ಶುಕ್ರವಾರ ಬೆಳಿಗ್ಗೆ ಹಾವೇರಿಗೆ ಹೊರಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT