ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರೂ ಷರತ್ತು ಹಾಕುವಂತಿಲ್ಲ; ಪಕ್ಷದ ನಿರ್ಧಾರವೇ ಅಂತಿಮ: ಡಿ.ಕೆ. ಶಿವಕುಮಾರ್

Last Updated 18 ಡಿಸೆಂಬರ್ 2022, 9:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪಕ್ಷದ ತೀರ್ಮಾನವೇ ಅಂತಿಮವಾಗಿದ್ದು, ಯಾರೂ ಷರತ್ತು ಹಾಕುವಂತಿಲ್ಲ. ನಾನು ಪಕ್ಷದ ಅಧ್ಯಕ್ಷನಾಗಿದ್ದರೂ ಎಲ್ಲಾ ವಿಷಯಗಳನ್ನು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಪಕ್ಷದ ಕಾರ್ಯಾಧ್ಯಕ್ಷರು ಸೇರಿದಂತೆ ವಿವಿಧ ಪದಾಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ, ‘ಬಸ್ ಯಾತ್ರೆಗೆ ಸಿದ್ದರಾಮಯ್ಯ ಅವರು ಕೆಲ ಷರತ್ತು ಹಾಕಿದ್ದಾರಂತಲ್ಲ’ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

‘ಬಸ್ ಯಾತ್ರೆಗೂ ಮುಂಚೆ ಡಿ. 30ರಂದು ಕೃಷ್ಣಾ ನದಿ ನೀರು ಹಂಚಿಕೆ ವಿಚಾರದ ಕುರಿತು ವಿಜಯಪುರದಲ್ಲಿ ಸಭೆ ಹಾಗೂ ಕಾರ್ಯಕ್ರಮ ರೂಪಿಸಲಾಗಿದೆ. ಮಹದಾಯಿ ವಿಚಾರ ಕುರಿತು ಜ. 2ರಂದು ಹುಬ್ಬಳ್ಳಿಯಲ್ಲಿ ಹಾಗೂ ಜ. 8ರಂದು ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚಿತ್ರದುರ್ಗದಲ್ಲಿ ಸಭೆ ನಡೆಸಲಾಗುವುದು’ ಎಂದರು.

‘ಗೆಲ್ಲುವುದಷ್ಟೇ ನಮಗೆ ಮುಖ್ಯ. ಅಂತಹವರಿಗೆ ಮಾತ್ರ ಟಿಕೆಟ್ ಕೊಡುತ್ತೇವೆ. ಈ ಬಗ್ಗೆ ಎಐಸಿಸಿ ತೀರ್ಮಾನ ಕೈಗೊಳ್ಳುತ್ತದೆ. ಹಲವರು ಕಷ್ಟಕಾಲದಲ್ಲಿ ಗೆದ್ದು, ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಅವರ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡಲಾಗುವುದು’ ಎಂದು ಹೇಳಿದರು.

ಬೆಳಗಾವಿಯಲ್ಲಿ ಸಭೆ: ‘ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಅವರ ನೇತೃತ್ವದಲ್ಲಿ ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸಂಜೆ 6ಕ್ಕೆ ಕೆಪಿಸಿಸಿ ಚುನಾವಣಾ ಸಮಿತಿಯ ಮೊದಲ ಸಭೆ ನಡೆಯಲಿದೆ. ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳ ಅರ್ಜಿಗಳನ್ನು ಹೇಗೆ ಆಯ್ಕೆ ಪ್ರಕ್ರಿಯೆ ಮಾಡಬೇಕು ಎಂದು ಸಮಿತಿ ನಿರ್ಧರಿಸಲಿದೆ’ ಎಂದು ತಿಳಿಸಿದರು.

‘ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಹಾಗೂ ಪದಾಧಿಕಾರಿಗಳಿಗೂ ಆಕಾಂಕ್ಷಿಗಳ ಅರ್ಜಿಗಳನ್ನು ಕಳಿಸಿ, ಅಭಿಪ್ರಾಯ ‍ಪಡೆಯಲಾಗುವುದು. ರಾಜ್ಯದಲ್ಲಿ 78 ಲಕ್ಷ ಮಂದಿ ಪಕ್ಷದ ಸದಸ್ಯತ್ವ ಪಡೆದಿದ್ದು, ಇವ ಅಭಿಪ್ರಾಯ ಪಡೆಯುವ ಬಗ್ಗೆಯೂ ಎಐಸಿಸಿ ಚಿಂತನೆ ನಡೆಸಿದೆ’ ಎಂದರು.

ಹೇಳಿಕೆಗೆ ಬದ್ಧ: ‘ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಕುರಿತ ನನ್ನ ಹೇಳಿಕೆ ಬಗ್ಗೆ ಯಾರೆಷ್ಟೇ ವಿವಾದ ಮಾಡಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಭಯೋತ್ಪಾದನಾ ಚಟುವಟಿಕೆಗಳಿಂದಾಗಿ ಕಾಂಗ್ರೆಸ್ ತನ್ನ ಮೇರು ನಾಯಕರನ್ನು ಕಳೆದುಕೊಂಡಿದೆ. ಪಕ್ಷವು ಪ್ರತಿ ಹಂತದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ವಿರೋಧಿಸಿಕೊಂಡು, ಅವರನ್ನು ದಮನ ಮಾಡಿಕೊಂಡು ಬಂದಿದೆ. ಅಗತ್ಯವಿರುವೆಡೆ ರಾಜ್ಯ ಸರ್ಕಾರವನ್ನೇ ವಜಾ ಮಾಡಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಕುಕ್ಕರ್ ಬಾಂಬ್ ಸ್ಫೊಟ ಕೃತ್ಯವನ್ನು ನಾವು ಸಹ ಖಂಡಿಸಿದ್ದೇವೆ. ಘಟನೆ ನಡೆದಾಗ ಸುದ್ದಿಗೋಷ್ಠಿ ನಡೆಸಿದ್ದ ಮಂಗಳೂರು ಪೊಲೀಸ್ ಕಮಿಷನರ್, ಆರೋಪಿಗೆ ಪ್ರಜ್ಞೆ ಬಂದಿಲ್ಲ. ಆತನ ವಿಚಾರಣೆ ನಡೆಸದೆ ನಾವು ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ, ಡಿಜಿಪಿ ಅಂತಿಮ ತೀರ್ಮಾನಕ್ಕೆ ಬಂದವರಂತೆ ಹೇಳಿಕೆ ನೀಡಿದರು. ಬಿಜೆಪಿಯವರು ಮತ ಕಳ್ಳತನಕ್ಕಾಗಿ ತಮ್ಮ ಪಕ್ಷದ ಏಜೆಂಟರಿಗೆ 8,600 ಜನರಿಗೆ ಬೋಗಸ್ ಬಿಎಲ್‌ಒಗಳು ಎಂದು ಹೇಳಿ, ಗುರುತಿನ ಚೀಟಿ ಕೊಟ್ಟು ಪಟ್ಟಿಯಲ್ಲಿ ಹಲವರ ಹೆಸರು ಕೈಬಿಟ್ಟಿತ್ತು. ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿರುವಾಗಲೇ, ಸ್ಫೋಟದ ವಿಷಯವನ್ನು ದೊಡ್ಡದು ಮಾಡಿದ್ದು, ಮತದಾರರ ಪಟ್ಟಿ ಪ್ರಕರಣವನ್ನು ಬೇರೆಡೆಗೆ ಸೆಳೆಯಲು ಯತ್ನಿಸಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT