ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹5 ಕೋಟಿ ಆಮಿಷ: ವಿಚಾರಣೆ ಶುರು

‘ಆಪರೇಷನ್ ಕಮಲ’: ಎಚ್‌ಡಿಕೆ, ಅಶ್ವತ್ಥನಾರಾಯಣ ಸೇರಿ ಐವರ ವಿರುದ್ಧ ವಿಚಾರಣೆ
Last Updated 3 ಜನವರಿ 2021, 2:29 IST
ಅಕ್ಷರ ಗಾತ್ರ

ಬೆಂಗಳೂರು: ಕೋಲಾರದ ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸ ಗೌಡ ಅವರನ್ನು ಬಿಜೆಪಿಗೆ ಸೆಳೆಯಲು ₹ 30 ಕೋಟಿ ಆಮಿಷ ಒಡ್ಡಿ, ₹ 5 ಕೋಟಿ ನಗದು ತಲುಪಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಹಾಗೂ ಬಿಜೆಪಿ ಸಚಿವರು, ಶಾಸಕರ ವಿರುದ್ಧ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ದೂರನ್ನು ಜನ ಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಶೇಷ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದೆ.

ಈಗಿನ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಶಾಸಕ ಕೆ.ಶ್ರೀನಿವಾಸಗೌಡ, ಹಿಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಬಿಜೆಪಿ ಶಾಸಕ ಎಸ್‌.ಆರ್‌. ವಿಶ್ವನಾಥ್‌, ಮತ್ತು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ವಿರುದ್ಧ ವಿಚಾರಣಾ ಪ್ರಕ್ರಿಯೆ ಆರಂಭಿಸಲು ಡಿಸೆಂಬರ್‌ 29ರಂದು ನ್ಯಾಯಾಲಯ ಆದೇಶ ಹೊರಡಿಸಿದೆ. ಜನವರಿ 12ರಂದು ದೂರುದಾರರ ಪ್ರಮಾಣೀಕೃತ ಹೇಳಿಕೆ ದಾಖಲಿಸಲು ನಿಗದಿಪಡಿಸಲಾಗಿದೆ.

‘ಬಿಜೆಪಿ ಸೇರಿದರೆ ₹ 30 ಕೋಟಿ ನೀಡುವುದಾಗಿ ವಿಶ್ವನಾಥ್‌, ಅಶ್ವತ್ಥನಾರಾಯಣ ಮತ್ತು ಯೋಗೇಶ್ವರ್‌ ಹೇಳಿದ್ದರು. ₹ 5 ಕೋಟಿ ಮುಂಗಡ ನೀಡಿದ್ದರು. ಎರಡು ತಿಂಗಳು ನನ್ನ ಮನೆಯಲ್ಲೇ ಆ ಹಣ ಇತ್ತು. ಬಳಿಕ ಮೂವರಿಗೂ ವಾಪಸ್‌ ತಲುಪಿಸಿದ್ದೆ’ ಎಂದು 2019ರ ಫೆಬ್ರುವರಿ 10ರಂದು ಶ್ರೀನಿವಾಸ ಗೌಡ ಕೋಲಾರದಲ್ಲಿ ಬಹಿರಂಗ ಸಭೆಯಲ್ಲಿ ಹೇಳಿಕೆ ನೀಡಿದ್ದರು.

ಈ ಕುರಿತು ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ಅಬ್ರಹಾಂ ದೂರು ನೀಡಿದ್ದರೂ ಎಸಿಬಿ ಅಧಿಕಾರಿಗಳು ತನಿಖೆ ನಡೆಸಿರಲಿಲ್ಲ. ನಂತರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಅಬ್ರಹಾಂ ಸಲ್ಲಿಸಿದ್ದರು.

‘ವಿಶ್ವನಾಥ್‌, ಅಶ್ವತ್ಥನಾರಾಯಣ ಮತ್ತು ಯೋಗೇಶ್ವರ್‌ ಅವರು ‘ಆಪರೇಷನ್‌ ಕಮಲ’ ಕಾರ್ಯಾಚರಣೆ ಭಾಗವಾಗಿ ಶ್ರೀನಿವಾಸ ಗೌಡರಿಗೆ ₹ 5 ಕೋಟಿ ನೀಡಿದ್ದರು. ಅವರು ಆ ಹಣವನ್ನು ಬಳಸಿಕೊಂಡಿದ್ದರು. ಜೆಡಿಎಸ್‌ನಲ್ಲೇ ಶಾಸಕರನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ₹ 5 ಕೋಟಿ ವ್ಯವಸ್ಥೆ ಮಾಡಿದ್ದರು. ಅದನ್ನು ಬಿಜೆಪಿ ಮುಖಂಡರಿಗೆ ಹಿಂದಿರುಗಿಸಲಾಗಿದೆ. ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರವೇ ನಡೆದಿದೆ’ ಎಂದು ಅಬ್ರಹಾಂ ದೂರಿನಲ್ಲಿ ಆರೋಪಿಸಿದ್ದರು.

ಖಾಸಗಿ ದೂರನ್ನು ವಿಚಾರಣೆಗೆ ಅಂಗೀಕರಿಸುವುದಾಗಿ ತೀರ್ಮಾನ ಪ್ರಕಟಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಟಿ.ಎನ್‌. ಇನವಳ್ಳಿ, ಪ್ರಮಾಣೀಕೃತ ಹೇಳಿಕೆ ದಾಖಲಿಸಲು ದಿನ ನಿಗದಿಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT