ಭಾನುವಾರ, ಮಾರ್ಚ್ 26, 2023
23 °C
ನಿದ್ದೆಯಿಲ್ಲದೇ ಕಂಗಾಲದ ಜನರಲ್ಲಿ ಹೆಚ್ಚಿದ ಆತಂಕ

ಭೂಮಿಯ ಒಳಗಿಂದ ನಿಗೂಢ ಸದ್ದು! ಚಿಂಚೋಳಿಯ ಗಡಿಕೇಶ್ವಾರದಲ್ಲಿ ತೀವ್ರ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತಾಲ್ಲೂಕಿನ ಗಡಿಕೇಶ್ವಾರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ಬೆಳಿಗ್ಗೆ 1.09 ನಿಮಿಷಕ್ಕೆ ಭೂಮಿಯಿಂದ ಸದ್ದು ಕೇಳಿ ಬಂದ ಕಾರಣ ಜನರು ರಸ್ತೆಯಲ್ಲೇ ರಾತ್ರಿ ಕಳೆದರು.

‘ತಾಲ್ಲೂಕಿನ ಗಡಿಕೇಶ್ವಾರ, ಕುಪನೂರ, ಕೆರೋಳ್ಳಿ, ಭಂಟನಳ್ಳಿ, ಬೆನಕನಳ್ಳಿ, ರಾಯಕೋಡ ಮೊದಲಾದ ಗ್ರಾಮಗಳಲ್ಲಿ ರಾತ್ರಿ ಮೂರು ಬಾರಿ ಭೂಮಿಯಿಂದ ಸದ್ದು ಕೇಳಿಸಿದೆ’ ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ತಾಲ್ಲೂಕು ಘಟಕದ ಮುಖಂಡ ರೇವಣಸಿದ್ದಪ್ಪ ಅಣಕಲ್ ತಿಳಿಸಿದರು.

‘ಮೊದಲಿಗೆ ಜೋರು ಸದ್ದು ಕೇಳಿ ಬಂದಾಗ, ನೆಲವೆಲ್ಲ ನಡುಗಿದಂತಾಯಿತು. ಹೆದರಿ ಮನೆಗಳಿಂದ ಹೊರ ಬಂದು ರಸ್ತೆಯಲ್ಲಿ ನಿಂತೆವು. ಆಗ ಮತ್ತೆ ಎರಡು ಬಾರಿ ಅಲ್ಪ ಪ್ರಮಾಣದ ಸದ್ದು ಭೂಮಿಯಿಂದ ಕೇಳಿಸಿತು’ ಎಂದು ಅವರು ವಿವರಿಸಿದರು.

‘ಕುಪನೂರ ಗ್ರಾಮದಲ್ಲೂ ಇದೇ ರೀತಿ ಸದ್ದು ಕೇಳಿ ಬಂದಿದ್ದರಿಂದ ಹೆದರಿಕೆಯಾಗಿದೆ. ಇದಕ್ಕೆ ಕಾರಣ ಏನು ಎನ್ನುವುದನ್ನು ನಿಖರವಾಗಿ ಪತ್ತೆ ಮಾಡಿ, ಭಯ ನಿವಾರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಗದೇವಯ್ಯ ಸ್ವಾಮಿ ಒತ್ತಾಯಿಸಿದರು.

ಭೂಕಂಪನಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರನ್ನು ಭೇಟಿಯಾದರು. ಗ್ರಾಮದ ಮುಖಂಡರಾದ ಮಂಗಳಮೂರ್ತಿ, ಮಲ್ಲಿಕಾರ್ಜುನ ಕಲ್ಯಾಣಶೆಟ್ಟಿ, ಶಿವಾನಂದ ರೆಮ್ಮಣಿ, ಶರಣಪ್ಪ ಕೋರವಾರ, ಮೃತ್ಯುಂಜಯ ಸೇಡಂ, ವಿಶ್ವನಾಥ ಬಳಿ, ವೀರೇಶ ರೆಮ್ಮಣಿ, ನಾಗರಾಜ ಚಕ್ರವರ್ತಿ, ಪಂಚಾಕ್ಷರಿ ಪತ್ರಿ, ರವಿಕುಮಾರ ಬಳಿ, ಮಲ್ಲಿಕಾರ್ಜುನ ನಿಪ್ಪಾಣಿ, ಮಹಾಂತಗೌಡ ಪಾಟೀಲ, ಸಂತೋಷ ಬಳಿ, ಶರಣಪ್ಪ ಕುಂಬಾರ, ಬಸವರಾಜ ಪಸಾರ ಇದ್ದರು.
ಗ್ರಾಮಕ್ಕೆ ಭೇಟಿ ನೀಡುವೆ: ನಿರಾಣಿ

ಜಿಲ್ಲಾ ಉಸ್ತುವಾರಿ ಸಚಿವ ರಾಜಕುಮಾರ ಪಾಟೀಲ ತೆಲ್ಕೂರ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರನ್ನು ಭೇಟಿಯಾದರು. ಭೂಕಂಪನದ ಸದ್ದಿನಿಂದ ಆಗಿರುವ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸಿದರು. ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವಂತೆ ಅವರು ಕೋರಿದರು.

ಗ್ರಾಮಸ್ಥರ ನಿಯೋಗದ ಮನವಿಗೆ ಸ್ಪಂದಿಸಿದ ಸಚಿವ ಮುರುಗೇಶ ನಿರಾಣಿ ಅವರು, ‘ಖುದ್ದು ನಾನೇ ಗ್ರಾಮಕ್ಕೆ ಬಂದು ಪರಿಶೀಲಿಸುವೆ. ಉನ್ನತ ವಿಜ್ಞಾನಿಗಳನ್ನು ಕರೆ ತರುವೆ. ಸಾಧ್ಯವಾದರೆ ವಾಸ್ತವ್ಯ ಮಾಡುವೆ, ಭಯ ಪಡಬಾರದು’ ಎಂದರು.

***

ಸರ್ಕಾರ ಭೂವಿಜ್ಞಾನಿಗಳನ್ನು ಅವಲಂಬಿಸಿದೆ. ವಾಸ್ತವಿಕತೆ ಅರಿಯಲು ಭೂವಿಜ್ಞಾನಿಗಳು ಗ್ರಾಮದಲ್ಲಿಯೇ 2 ವಾರಗಳ ಕಾಲ ವಾಸ್ತವ್ಯ ಹೂಡಬೇಕು

– ಮಂಗಳಮೂರ್ತಿ, ಬಿಜೆಪಿ ಮುಖಂಡರು, ಗಡಿಕೇಶ್ವಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು