ಸೋಮವಾರ, ನವೆಂಬರ್ 30, 2020
20 °C
‘ಒಂದು ಅಧಿಸೂಚನೆ, ಒಂದು ಪಿಂಚಣಿ ಯೋಜನೆ’ ಜಾರಿಗೆ ಒತ್ತಾಯ

ಅಧ್ಯಾಪಕರ ಪಿಂಚಣಿಯಲ್ಲಿ ತಾರತಮ್ಯ

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

ಬೆಂಗಳೂರು: ಒಂದೇ ಅಧಿಸೂಚನೆ ಅನ್ವಯ ನೇಮಕಗೊಂಡಿದ್ದರೂ ನೇಮಕಾತಿ ಆದೇಶ ನೀಡುವುದು ವಿಳಂಬವಾಗಿದ್ದಕ್ಕೆ ಸುಮಾರು 150 ಅಧ್ಯಾಪಕರು ಪಿಂಚಣಿ ಮತ್ತಿತರ ಸೌಲಭ್ಯದಿಂದ ವಂಚಿತರಾಗಿದ್ದಾರೆ.

‘ಒಂದು ಅಧಿಸೂಚನೆ, ಒಂದು ಪಿಂಚಣಿ ಯೋಜನೆ’ ಜಾರಿಗೆ ತರಬೇಕು ಎಂದು ನಿವೃತ್ತ ಅಧ್ಯಾಪಕರು ಒತ್ತಾಯಿಸಿದ್ದಾರೆ.

‘1993–94ರಲ್ಲಿ ಖಾಸಗಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಕಾಯಂಗೊಳಿಸುವಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿತು. 2004–05ರಲ್ಲಿ ರಾಜ್ಯಸರ್ಕಾರದ ಉನ್ನತ ಶಿಕ್ಷಣ ಕಾರ್ಯದರ್ಶಿ ಮತ್ತು ಕಾಲೇಜು ಶಿಕ್ಷಣ ಆಯುಕ್ತರು ಈ ಆದೇಶವನ್ನು ಜಾರಿಗೊಳಿಸಿದರು. ಇದರನ್ವಯ, ಸುಮಾರು 800 ಮಂದಿಗೆ 2006ರ ಮಾರ್ಚ್‌ 31ರ ಮೊದಲು ನೇಮಕಾತಿ ಆದೇಶ ದೊರೆಯಿತು. ಉಳಿದ ಸುಮಾರು 150 ಉಪನ್ಯಾಸಕರಿಗೆ 2006 ಏಪ್ರಿಲ್‌ ನಂತರ 2007–08ರವರೆಗೆ ಹಂತ–ಹಂತವಾಗಿ ನೇಮಕಾತಿ ಆದೇಶ ಪತ್ರ ನೀಡಲಾಯಿತು’ ಎಂದು ಹೆಸರು ಬಹಿರಂಗಪಡಿಸಲು ಒಪ್ಪದ ನಿವೃತ್ತ ಅಧ್ಯಾಪಕರೊಬ್ಬರು ಹೇಳಿದರು.

‘ರಾಜ್ಯಸರ್ಕಾರವು 2006ರ ಏಪ್ರಿಲ್‌ನಿಂದ ನೂತನ ಪಿಂಚಣಿ ಯೋಜನೆ ಜಾರಿಗೆ ತಂದಿತು. ಇದರನ್ವಯ, 2006ರ ಏಪ್ರಿಲ್‌ ನಂತರ ನೇಮಕವಾದವರಿಗೆ ಪಿಂಚಣಿ ಸೌಲಭ್ಯ ಸಿಗುವುದಿಲ್ಲ. ಅಧಿಕಾರಿಗಳ ವಿಳಂಬ ಧೋರಣೆಯಿಂದ ನಾವು ಈ ಸೌಲಭ್ಯದಿಂದ ವಂಚಿತರಾಗಬೇಕಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.

‘ನಮಗಿಂತ ಮೊದಲು ನೇಮಕಾತಿ ಆದೇಶ ಪಡೆದವರು ಈಗ ತಿಂಗಳಿಗೆ ₹50 ಸಾವಿರದಿಂದ ₹60 ಸಾವಿರದವರೆಗೆ ಪಿಂಚಣಿ ಪಡೆಯುತ್ತಿದ್ದಾರೆ. ಗ್ರಾಚುಯಿಟಿಯನ್ನೂ ಪಡೆಯುತ್ತಿದ್ದಾರೆ. ಪಿಂಚಣಿ ಸೌಲಭ್ಯ ಇದ್ದರೆ ಮಾತ್ರ ಗ್ರಾಚುಯಿಟಿ ಬರುತ್ತದೆ ಎಂಬ ನಿಯಮ ಇರುವುದರಿಂದ ನಮಗೆ ಈ ಎರಡೂ ಸೌಲಭ್ಯ ಇಲ್ಲದಂತಾಗಿದೆ’ ಎಂದು ಮತ್ತೊಬ್ಬ ಅಧ್ಯಾಪಕರು ಹೇಳಿದರು.

‘ಪಿಂಚಣಿ ಪ್ರತಿಯೊಬ್ಬ ನೌಕರನ ಬದುಕಿನ ಹಕ್ಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಆದರೆ, ಇಂದು ಈ ಹಕ್ಕಿನಿಂದ ನಾವು ವಂಚಿತರಾಗಿದ್ದೇವೆ’ ಎಂದು ಅವರು ಹೇಳಿದರು. 

‘ಅರೆ ವೈದ್ಯಕೀಯ ಸೇವೆ ಸಲ್ಲಿಸಿದವರಿಗೆ ಹಿಂದಿನ ಸೇವೆಯನ್ನೇ ಆಧರಿಸಿ, ಹಳೆಯ ಪಿಂಚಣಿ ಸೌಲಭ್ಯವನ್ನೇ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಉಪನ್ಯಾಸಕರಿಗೂ ಈ ನಿಯಮ ಅನ್ವಯಿಸಬೇಕು’ ಎಂದು ಅವರು ಒತ್ತಾಯಿಸಿದರು.

ಸೇವಾ ಸಕ್ರಮಾತಿಯಲ್ಲೂ ತಾರತಮ್ಯ

‘ಪದವಿ ಕಾಲೇಜುಗಳಲ್ಲಿ ಕಾರ್ಯಭಾರದ ಕೊರತೆ ಇದ್ದುದರಿಂದ ಕೆಲವು ಉಪನ್ಯಾಸಕರನ್ನು ಪದವಿಪೂರ್ವ ಕಾಲೇಜುಗಳಿಗೆ ನಿಯೋಜಿಸಲಾಗಿತ್ತು. ನಾವು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದ್ದರೂ, ಪದವಿಪೂರ್ವ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ ಎಂಬ ಕಾರಣಕ್ಕೆ ಈ ಅವಧಿಯನ್ನು ಹೊರತುಪಡಿಸಿ ಬಡ್ತಿಗೆ ಪರಿಗಣಿಸುತ್ತಿರುವುದರಿಂದ ಎಷ್ಟೋ ಜನರಿಗೆ ಒಮ್ಮೆಯೂ ಬಡ್ತಿ ಸಿಗದಂತಾಗಿದೆ’ ಎಂದು ಖಾಸಗಿ ಕಾಲೇಜಿನ
ಪ್ರಾಂಶುಪಾಲರೊಬ್ಬರು ಹೇಳಿದರು.

‘ಸೇವಾ ಸಕ್ರಮಾತಿ ಹೊಂದಿದ ದಿನದಿಂದಲೇ ಸೇವೆಯನ್ನು ಪರಿಗಣಿಸಿ ಬಡ್ತಿ ನೀಡುವ ವ್ಯವಸ್ಥೆ ಮಾಡಬೇಕು’ ಎಂದೂ ಅವರು ಒತ್ತಾಯಿಸಿದರು.

***

ತಾರತಮ್ಯ ಆಗಿರುವ ಬಗ್ಗೆ ಸದ್ಯ ನನ್ನ ಬಳಿ ಮಾಹಿತಿ ಇಲ್ಲ. ಮಾಹಿತಿ ತರಿಸಿಕೊಂಡು ಪರಿಶೀಲಿಸಿದ ನಂತರ ಪ್ರತಿಕ್ರಿಯಿಸುತ್ತೇನೆ
- ಪಿ. ಪ್ರದೀಪ್ ಆಯುಕ್ತ, ಕಾಲೇಜು ಶಿಕ್ಷಣ ಇಲಾಖೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು