ಶನಿವಾರ, ಜನವರಿ 28, 2023
24 °C

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಿಂದ ಕೋವಿಡ್ ಲಸಿಕೆಗೆ ನೀರಸ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಕೆಯ ಒಟ್ಟು ಡೋಸ್‌ಗಳ ವಿತರಣೆ 12 ಕೋಟಿ ದಾಟಿದೆ. ಒಂದು ವರ್ಷದ ಒಂದು ತಿಂಗಳಲ್ಲಿ 10 ಕೋಟಿ ಡೋಸ್‌ಗಳಷ್ಟು ಲಸಿಕೆ ವಿತರಿಸಿದರೆ, ಮುಂದಿನ ಆರು ತಿಂಗಳು ಕೇವಲ ಎರಡು ಕೋಟಿ ಡೋಸ್‌ಗಳಷ್ಟು ಲಸಿಕೆ ನೀಡಲಾಗಿದೆ. 

ಕೋವಿಡ್ ಪ್ರಕರಣಗಳ ಸಂಖ್ಯೆಕಳೆದ ಏಪ್ರಿಲ್‌ನಿಂದ ಇಳಿಕೆ ಕಂಡಿದ್ದ ರಿಂದ ಲಸಿಕೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದಲ್ಲಿ 2021ರ ಜ. 16ರಿಂದ ಕೋವಿಡ್ ಲಸಿಕೆ ವಿತರಣೆ ಪ್ರಾರಂಭವಾಗಿದೆ. ಈವರೆಗೆ 5.51 ಕೋಟಿಗೂ ಹೆಚ್ಚು ಮಂದಿ
ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಅನ್ಯ ರಾಜ್ಯಗಳಿಂದ ಉದ್ಯೋಗ ಸೇರಿ ವಿವಿಧ ಕಾರಣಗಳಿಗೆ ವಲಸೆ ಬಂದವರಿಗೂ ಇಲ್ಲಿ ಲಸಿಕೆ ಒದಗಿಸಲಾಗಿದೆ. ಇದರಿಂದಾಗಿ ಮೊದಲ ಡೋಸ್ ಪಡೆದವರಿಗಿಂತ ಎರಡನೇ ಡೋಸ್ ಪಡೆದವರ ಸಂಖ್ಯೆ (5.51 ಕೋಟಿ) ಅಧಿಕವಿದೆ. ಮೊದಲೆರಡು ಡೋಸ್ ವಿತರಣೆಯಲ್ಲಿ ಶೇ 100ರಷ್ಟು ಗುರಿ ಸಾಧನೆ
ಸಾಕಾರವಾಗಿದೆ.

ರಾಜ್ಯದಲ್ಲಿ ಸದ್ಯ 66 ಖಾಸಗಿ ಸೇರಿ 2,504 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ವಿತರಿಸಲಾಗುತ್ತಿದೆ. 2022ರ ಜ.10ರಿಂದ ಮೂರನೇ ಡೋಸ್ ಲಸಿಕೆ ವಿತರಿಸಲಾಗುತ್ತಿದೆ. ಎರಡು ಡೋಸ್ ಪಡೆದು ಆರು ತಿಂಗಳಾದವರಿಗೆ ಮತ್ತೊಂದು ಡೋಸ್ ಲಸಿಕೆ ನೀಡಲಾ ಗುತ್ತಿದೆ. ಈವರೆಗೆ 97.90 ಲಕ್ಷ ಮಂದಿ ಮೂರನೇ ಡೋಸ್ ಲಸಿಕೆಪಡೆದುಕೊಂಡಿದ್ದಾರೆ. 

 

ಕೋವಿಶೀಲ್ಡ್ ಅಧಿಕ

ರಾಜ್ಯದಲ್ಲಿ ಈವರೆಗೆ ವಿತರಿಸಲಾದ ಲಸಿಕೆಯಲ್ಲಿ ಬಹುತೇಕರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ. 9.56 ಕೋಟಿ ಡೋಸ್‌ಗಳು ಕೋವಿಶೀಲ್ಡ್, 1.98 ಕೋಟಿ ಡೋಸ್‌ಗಳು ಕೋವ್ಯಾಕ್ಸಿನ್ ಹಾಗೂ 43.64 ಲಕ್ಷ ಡೋಸ್‌ಗಳು ಕೋರ್ಬಿವ್ಯಾಕ್ಸ್ ಲಸಿಕೆ ವಿತರಿಸಲಾಗಿದೆ. 

ಆರೋಗ್ಯ ಕಾರ್ಯಕರ್ತರಲ್ಲಿ 7.63 ಲಕ್ಷ ಮಂದಿ ಹಾಗೂ ಕೋವಿಡ್ ಮುಂಚೂಣಿ ಯೋಧರಲ್ಲಿ 9.48 ಲಕ್ಷ ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಇವರಲ್ಲಿ ಕ್ರಮವಾಗಿ 5.28 ಹಾಗೂ 5.89 ಲಕ್ಷ ಮಂದಿ ಮುನ್ನೆಚ್ಚರಿಕೆ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. 18 ರಿಂದ 60 ವರ್ಷದೊಳಗಿನವರಲ್ಲಿ 51.10 ಲಕ್ಷ ಮಂದಿ ಹಾಗೂ 60 ವರ್ಷಗಳು ಮೇಲ್ಪಟ್ಟವರಲ್ಲಿ 35.27 ಲಕ್ಷ ಮಂದಿ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು