ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಹಿಡಿಯದ ಪಿಎಂ ಸ್ವನಿಧಿ ಯೋಜನೆ

ಅರ್ಜಿ ಸಲ್ಲಿಸಿದ ಶೇ 24ರಷ್ಟು ಜನರಿಗೆ ಮಾತ್ರ ಸಾಲ ವಿತರಣೆ
Last Updated 8 ಜನವರಿ 2021, 20:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲಾಕ್‌ಡೌನ್‌ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ನೆರವು ನೀಡಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ) ವಿಶೇಷ ಕಿರುಸಾಲ ಯೋಜನೆಯಡಿ ಅರ್ಜಿ ಸಲ್ಲಿಸಿದ್ದ ಶೇ 24ರಷ್ಟು ವ್ಯಾಪಾರಿಗಳಿಗೆ ಮಾತ್ರ ಸಾಲ ಸೌಲಭ್ಯ ದೊರೆತಿದೆ.

2020ರ ಜುಲೈನಲ್ಲಿ ಯೋಜನೆ ಜಾರಿಗೊಳಿಸಲಾಗಿದ್ದು, ಈ ಯೋಜನೆಯಡಿ ತಲಾ ₹ 10 ಸಾವಿರ ಸಾಲ ನೀಡಲಾಗುತ್ತದೆ. ರಾಜ್ಯದಾದ್ಯಂತ 2,00,910 ಬೀದಿ ಬದಿ ವ್ಯಾಪಾರಿಗಳು ಅರ್ಜಿ ಸಲ್ಲಿಸಿದ್ದು, 84,971 ವ್ಯಾಪಾರಿಗಳಿಗೆ ಮಂಜೂರಾತಿ ದೊರೆತಿದೆ. ದಾಖಲಾತಿ ಸಲ್ಲಿಸಿಲ್ಲ ಎಂದು ಅರ್ಧದಷ್ಟು ಬೀದಿ ಬದಿ ವ್ಯಾಪಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ. 48,584 ಮಂದಿಗೆ ಸಾಲ ದೊರತಿದೆ.

ಆಧಾರ್‌ ಕಾರ್ಡ್‌, ಬೀದಿ ವ್ಯಾಪಾರಸ್ಥರ ಗುರುತಿನ ಚೀಟಿ, ಪಾಸ್‌ಬುಕ್‌, ಕುಟುಂಬ ಸದಸ್ಯರ ಫೋಟೊದೊಂದಿಗೆ ಪಿಎಂ ಸ್ವನಿಧಿ ಆ್ಯಪ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದವರಿಗೆ ಕರ್ನಾಟಕ ಒನ್‌ ಕಚೇರಿ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಒಂದು ವರ್ಷದಲ್ಲಿ ಸಾಲ ಮರುಪಾವತಿಸಿದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಶೇ 7ರಷ್ಟು ಬಡ್ಡಿ ಸಹಾಯಧನವನ್ನು ಜಮಾ ಮಾಡಲಾಗುತ್ತದೆ.

ರಾಜ್ಯದಲ್ಲಿರುವ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ಅರ್ಜಿ ಸಲ್ಲಿಸಬಹುದಾಗಿತ್ತು. ₹10 ಸಾವಿರ ಆರ್ಥಿಕ ನೆರವು ದೊರೆಯಬಹುದೆಂದು ಅರ್ಜಿ ಸಲ್ಲಿಸಿ, ಸಾಲ ಪಡೆಯುವುದಕ್ಕಾಗಿ ಸ್ಥಳೀಯ ಸಂಸ್ಥೆಗಳ ಕಚೇರಿಗೆ ಅಲೆದಾಡುತ್ತಿದ್ದಾರೆ.

ಗುರುತಿನ ಚೀಟಿ ಸಮಸ್ಯೆ: ಬೀದಿ ಬದಿ ವ್ಯಾಪಾರಿಗಳ ಪಟ್ಟಣ ಸಮಿತಿ ವತಿಯಿಂದ ಗುರುತಿನ ಚೀಟಿ ಪಡೆದಿರಬೇಕು. ಆದರೆ, ಬಹಳಷ್ಟು ಕಡೆಗಳಲ್ಲಿ ಗುರುತಿನ ಚೀಟಿ ವಿತರಣೆಯಾಗಿಲ್ಲ.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ 9,527 ಮಂದಿ ಅರ್ಜಿ ಸಲ್ಲಿಸಿದ್ದಾರೆ. 6,175 ಮಂದಿಗೆ ಸಮಿತಿ ವತಿಯಿಂದ ಗುರುತಿನ ಚೀಟಿ ವಿತರಿಸಲಾಗಿದೆ. ರಾಜ್ಯ ಸರ್ಕಾರದ ಹೊಸ ಸುತ್ತೋಲೆ ಪ್ರಕಾರ ಜನಸಂಖ್ಯೆಯ ಶೇ 1 ರಷ್ಟು ಬೀದಿ ಬದಿ ವ್ಯಾಪಾರಿಗಳಿರುತ್ತಾರೆ. ಅವರನ್ನು ಸರಿಯಾಗಿ ಗುರುತಿಸಲು ಸೂಚಿಸಲಾಗಿದೆ. ಈಗ ಹುಬ್ಬಳ್ಳಿ–ಧಾರವಾಡ ಪಾಲಿಕೆಯಲ್ಲಿ ಮತ್ತಷ್ಟು ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸುವ ಕೆಲಸ ನಡೆದಿದೆ.

* ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ತಾಂತ್ರಿಕ ಕಾರಣದಿಂದ ಅರ್ಜಿಗಳು ಬಾಕಿ ಉಳಿದಿವೆ. ಶೀಘ್ರವೇ ಅವರಿಗೆ ಸಾಲ ಸೌಲಭ್ಯ ದೊರೆಯಲಿದೆ.

-ರಮೇಶ ನೂಲ್ವಿ, ಪಾಲಿಕೆ ಸಮುದಾಯ ವ್ಯವಹಾರಗಳ ಸಮಿತಿ ಅಧಿಕಾರಿ, ಹು–ಧಾ ಪಾಲಿಕೆ


* ಅರ್ಜಿ ಸಲ್ಲಿಸಿದ ಎಲ್ಲರಿಗೂ ಸಾಲಸೌಲಭ್ಯ ನೀಡಬೇಕು. ಆ ಮೂಲಕ ಬೀದಿ ವ್ಯಾಪಾರಿಗಳಿಗೆ ನೆರವಾಗಬೇಕು.

-ರಿಯಾಜ್‌ ದಲಾಲೈ, ಸದಸ್ಯ, ಬೀದಿ ಬದಿ ವ್ಯಾಪಾರಿಗಳ ಪಟ್ಟಣ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT