ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿ ಹಾಗೂ ವಿಮರ್ಶಕ ಕೆ.ವಿ. ತಿರುಮಲೇಶ್ ನಿಧನ

Last Updated 30 ಜನವರಿ 2023, 4:52 IST
ಅಕ್ಷರ ಗಾತ್ರ

ಬೆಂಗಳೂರು: ಕವಿ ಹಾಗೂ ವಿಮರ್ಶಕ ಕೆ.ವಿ. ತಿರುಮಲೇಶ್ (80) ಅವರು ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ನಿಧನ ಹೊಂದಿದರು.

ಹೈದರಾಬಾದ್‌ನ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ‌ ಮಾಡಿ ನಿವೃತ್ತರಾಗಿದ್ದರು.

ಸದ್ಯ ಹೈದರಾಬಾದಿನಲ್ಲಿ‌ ವಾಸವಿದ್ದರು. ಕೇರಳದ ಕಾಸರಗೋಡಿನ ಕಾರಡ್ಕ‌ ಗ್ರಾಮದಲ್ಲಿ ತಿರುಮಲೇಶ್ ಜನಿಸಿದ್ದರು.

ಅಕ್ಷಯ ಕಾವ್ಯ, ಅರಬ್ಬಿ, ಪಾಪಿಯೂ, ಮುಖವಾಡಗಳು, ವಠಾರ ಸೇರಿ ಹಲವು ಕವನ ಸಂಕಲನ ಹೊರತಂದಿದ್ದರು. ಆರೋಪ, ಅನೇಕ, ಮುಸುಗು ಕಾದಂಬರಿ ಬರೆದಿದ್ದರು. ಬೇಂದ್ರೆಯವರ ಕಾವ್ಯಶೈಲಿ, ಸಮ್ಮುಖ, ಉಲ್ಲೇಖ, ಕಾವ್ಯಕಾರಣ ವಿಮರ್ಶಾ ಕೃತಿ ರಚಿಸಿದ್ದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿದ್ದವು.

ಕವಿ, ಕತೆಗಾರ, ವಿಮರ್ಶಕ ಕೆ.ವಿ.ತಿರುಮಲೇಶ್ ಅವರ ಕುರಿತು ಸಾಹಿತಿ, ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆಯವರು ಫೇಸ್‌ಬುಕ್‌ನಲ್ಲಿ ಬರೆದಿರುವ ಸಾಲುಗಳು–

ಭಾಷೆಯ ಕುರಿತಾಗಿ ಅತ್ಯಂತ ಸೂಕ್ಷ್ಮವಾಗಿ ಮತ್ತು ನವಿರಾಗಿ ಯೋಚಿಸಿ ಬರೆಯುತ್ತಿದ್ದ ಕೆಲವೇ ಕೆಲವರಲ್ಲಿ ಕೆ.ವಿ.ತಿರುಮಲೇಶ್ ಕೂಡಾ ಒಬ್ಬರು. ಅವರು ಕವಿ, ಕತೆಗಾರ, ಅನುವಾದಕ, ಭಾಷಾ ವಿಜ್ಞಾನಿ, ಮತ್ತು ವಿಮರ್ಶಕ. ಅವರು ಕಾಸರಗೋಡಿನಲ್ಲಿದ್ದಾಗ ನಮಗೆಲ್ಲ ಬಹಳ ಹತ್ತಿರದವರಾಗಿದ್ದರು.

ತಿರುಮಲೇಶ್‌ ಹುಟ್ಟಿದ ಸ್ಥಳ ಕಾರಡ್ಕ ( ಸಪ್ಟಂಬರ 12, 1940) . ಇದೇ ಊರಿನಲ್ಲಿ ಹುಟ್ಟಿದ ಇನ್ನೊಬ್ಬ ಕವಿ ವೇಣುಗೋಪಾಲ ಕಾಸರಗೋಡು ಬಹಳ ಬೇಗ ತೀರಿಕೊಂಡರು. ಕಾರಡ್ಕದ ಕಾರಣಿಕ ಪುರುಷರು ಎಂದು ನಾನು ಅವರಿಗೆ ಹೇಳುತ್ತಿದ್ದೆ. ನವ್ಯಸಾಹಿತ್ಯ ಕಾಲದಲ್ಲಿ ಕಾಸರಗೋಡು ಬಹಳ ಕಾರಣಗಳಿಂದ ಸುದ್ದಿಯಲ್ಲಿತ್ತು. ತಿರುಮಲೇಶ್‌, ವೇಣುಗೋಪಾಲ ಕಾಸರಗೋಡು, ಎಂ. ಗಂಗಾಧರ ಭಟ್, ಯು ಮಹೇಶ್ವರಿ, ಲಲಿತಾ ಎಸ್‌ ಎನ್‌ ಭಟ್‌, ಮೊದಲಾದವರು ನವ್ಯ ಕಾಲಘಟ್ಟದ ದೊಡ್ಡ ಹೆಸರುಗಳು. ಇವರೆಲ್ಲ ಒಟ್ಟು ಸೇರಿ ಒಮ್ಮೆ ʼ ಕಯ್ಯಾರರು ಇನ್ನು ಬರೆಯಬೇಕಾಗಿಲ್ಲʼ ಎಂದು ಘೋಷಿಸಿ ದೊಡ್ಡ ಗುಲ್ಲೆಬ್ಬಿಸಿದ್ದರು.

ಮುಂದೆ ತಿರುಮಲೇಶ್‌ ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇರಿ ಅಲ್ಲಿಯೇ ನಿವೃತ್ತರಾದರು. ಹೊರನಾಡ ಕನ್ನಡಿಗರಾದ ನಾವು ಆ ಕಾರಣಕ್ಕೇನೇ ಹಲವು ವಿಷಯಗಳ ಬಗ್ಗೆ ಹರಟುತ್ತಿದ್ದೆವು.

ಕಳೆದ ಸುಮಾರು 50 ವರ್ಷಗಳಿಂದ ತಿರುಮಲೇಶ್‌ ಬರೆಯುತ್ತಲೇ ಇದ್ದರು. ‘ಮುಖವಾಡಗಳು’ ಹಾಗೂ ‘ವಠಾರ’ ಕವನ ಸಂಕಲನಗಳ ಮೂಲಕ ಅವರು ನವ್ಯ ಕಾಲಘಟ್ಟದಲ್ಲಿ ಜನಪ್ರಿಯರಾದರು. ಅಕ್ಷಯ ಕಾವ್ಯ, ಮಹಾಪ್ರಸ್ಥಾನ, ಅವಧ, ಪಾಪಿಯೂ , ಆರೋಪ, ಮುಸುಗು, ಕಳ್ಳಿಗಿಡದ ಹೂವು, ಸಮ್ಮುಖ, ಕಾವ್ಯಕಾರಣ ಇವರ ಇತರ ಮುಖ್ಯ ಕೃತಿಗಳು. ಕಲಿಗುಲ ಮತ್ತು ಟೈಬೀರಿಯಸ್‌ ಅವರಿಗೆ ಹೆಸರು ತಂದುಕೊಟ್ಟ ನಾಟಕಗಳು. ಡಾನ್ ಕ್ವಿಕ್ಸಾಟನ ಸಾಹಸಗಳು ಮತ್ತು ಗಂಟೆ ಗೋಪುರ ಅವರ ಒಳ್ಳೆಯ ಅನುವಾದಗಳು.

ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಮತ್ತು ಅಸ್ತಿತ್ವವಾದ ಇವರ ಮುಖ್ಯ ವಿಮರ್ಶಾ ಕೃತಿಗಳು.

ದೊಡ್ಡ ಲೇಖಕನೊಬ್ಬ ತೀರಿಕೊಂಡಾಗ ಸಹಜವಾಗಿ ಒಂದು ಬಗೆಯ ನಿರ್ವಾತ ಉಂಟಾಗುತ್ತದೆ. ಅದನ್ನು ಯಾರಾದರೂ ತುಂಬಿಸುವವರೆಗೆ ನಾವೆಲ್ಲ ಕಾಯಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT