ಭಾನುವಾರ, ಏಪ್ರಿಲ್ 18, 2021
31 °C

ಡ್ರಗ್ಸ್​ ಪ್ರಕರಣ: ಬಿಗ್​ಬಾಸ್​​ ಸ್ಪರ್ಧಿ ಮಸ್ತಾನ್​ ಮನೆ ಮೇಲೆ ದಾಳಿ, ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡ್ರಗ್ಸ್ ಸಾಗಣೆ ಹಾಗೂ ಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಪೂರ್ವ ವಿಭಾಗದ ಪೊಲೀಸರು, ₹ 4 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ‘ಬಿಗ್‌ಬಾಸ್’ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಮಸ್ತಾನ್ ಚಂದ್ರ ಮನೆ ಮೇಲೆ ದಾಳಿ ಮಾಡಿ, ಅವರನ್ನು ವಶಕ್ಕೆ ಪಡೆದಿದ್ದಾರೆ.

‘ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಡಿ ನಾಲ್ವರು ವಿದೇಶಿಗರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಅವರು ನೀಡಿದ್ದ ಮಾಹಿತಿ ಆಧರಿಸಿ ಹಲವೆಡೆ ದಾಳಿ ಮಾಡಿ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಮಸ್ತಾನ್‌ ಚಂದ್ರ ಮನೆ ಮೇಲೂ ದಾಳಿ ಮಾಡಿ, ಕೆಲ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘2,719 ಗ್ರಾಂ ಎಂಡಿಎಂಎ ಮಾತ್ರೆಗಳು, 200 ಗ್ರಾಂ ಕೊಕೇನ್, 1,939 ಎಕ್ಸ್‌ಟೆಸ್ಸಿ ಮಾತ್ರೆಗಳು,  526 ಎಲ್‌ಎಸ್‌ಡಿ ಕಾಗದ ಚೂರುಗಳು, 42.5 ಕೆ.ಜಿ ಗಾಂಜಾವನ್ನು ಆರೋಪಿಗಳಿಂದ ಜಪ್ತಿ ಮಾಡಲಾಗಿದೆ. ಇವುಗಳ ಒಟ್ಟು ಮೌಲ್ಯ ₹ 4 ಕೋಟಿಗೂ ಹೆಚ್ಚು’ ಎಂದೂ ತಿಳಿಸಿದರು.

ವ್ಯವಸ್ಥಿತ ಜಾಲ: ‘ಆರೋಪಿಗಳು ತಮ್ಮದೇ ಜಾಲ ರಚಿಸಿಕೊಂಡು ವ್ಯವಸ್ಥಿತವಾಗಿ ಕೃತ್ಯ ಎಸಗುತ್ತಿದ್ದರು. ಗಣ್ಯ ವ್ಯಕ್ತಿಗಳು, ಉದ್ಯಮಿಗಳು ಹಾಗೂ ಕೆಲ ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು’ ಎಂದು ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ. ಶರಣಪ್ಪ ಹೇಳಿದರು.

‘ನಾಗವಾರ ಬಳಿಯ ಬಿ.ಆರ್. ಆಂಬೇಡ್ಕರ್ ಮೈದಾನ ಸಮೀಪದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಫೆ. 26ರಂದು ಸ್ಥಳಕ್ಕೆ ಹೋಗಿದ್ದ ಕೆ.ಜಿ.ಹಳ್ಳಿ ಠಾಣೆ ಪೊಲೀಸರು, ವಿದೇಶಿ ಪ್ರಜೆಗಳಾದ ಉಗುಚುಕ್ವ ಹ್ಯಾರಿಸನ್ ಅಗಬಂಟಿ ಅಲಿಯಾಸ್ ಜಾನ್ ಪೆಡ್ಲರ್ ಹಾಗೂ ಜಾನ್‌ ನ್ಯಾನ್ಯೂ ಎಂಬುವರನ್ನು ಬಂಧಿಸಿದ್ದರು. ಡ್ರಗ್ಸ್, ವಾಹನ, ಮೊಬೈಲ್‌ಗಳು ಸೇರಿ ₹ 20 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದರು’ ಎಂದರು.

‘ಸಂಜಯನಗರ ನಿವಾಸಿಯಾದ ಮಸ್ತಾನ್ ಚಂದ್ರ ಹಾಗೂ ಕೇಶವ್, ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ
ಜಾನ್‌ ಪೆಡ್ಲರ್ ಜೊತೆ ಒಡನಾಟವಿಟ್ಟುಕೊಂಡಿದ್ದರು.  ಗುರುವಾರ ಬೆಳಿಗ್ಗೆ ದಾಳಿ ನಡೆಸಿ ಪರಿಶೀಲಿಸಲಾಗಿದೆ. ವಿಚಾರಣೆಗಾಗಿ ಮಸ್ತಾನ್ ಹಾಗೂ ಕೇಶವ್‌ನನ್ನು ವಶಕ್ಕೆ ಪಡೆಯಲಾಗಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು