ಭಾನುವಾರ, ಸೆಪ್ಟೆಂಬರ್ 19, 2021
28 °C
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಗೆ ಬೇಡಿಕೆ ರವಾನೆ

ವೇತನ, ಭತ್ಯೆ ಹೆಚ್ಚಳಕ್ಕೆ ಪೊಲೀಸರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮ್ಮ ವೇತನ ಮತ್ತು ಭತ್ಯೆಗಳಲ್ಲಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ರಾಜ್ಯ ಪೊಲೀಸ್‌ ಇಲಾಖೆಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ಗಳು (ಎಎಸ್‌ಐ), ಹೆಡ್‌ ಕಾನ್‌ಸ್ಟೆಬಲ್‌ಗಳು (ಎಚ್‌ಸಿ) ಹಾಗೂ ಕಾನ್‌ಸ್ಟೆಬಲ್‌ಗಳು (ಪಿಸಿ) ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

ಹಲವು ಜಿಲ್ಲೆಗಳ ಎಎಸ್‌ಐ, ಎಚ್‌ಸಿ ಮತ್ತು ಪಿಸಿಗಳ ಹೆಸರಿನಲ್ಲಿ ಜಂಟಿ ಮನವಿಯೊಂದನ್ನು ಮುಖ್ಯಮಂತ್ರಿಯವರಿಗೆ ರವಾನಿಸಿದ್ದು, 12 ಬೇಡಿಕೆಗಳನ್ನು ಅವರ ಮುಂದಿಡಲಾಗಿದೆ. ಈ ಎಲ್ಲ ಬೇಡಿಕೆಗಳನ್ನೂ ಪ್ರಸಕ್ತ ಆರ್ಥಿಕ ವರ್ಷದಲ್ಲೇ ಈಡೇರಿಸುವಂತೆ ಮನವಿ ಮಾಡಲಾಗಿದೆ.

ರಾಘವೇಂದ್ರ ಔರಾದ್ಕರ್‌ ಸಮಿತಿ ಶಿಫಾರಸಿನಂತೆ ಪೊಲೀಸ್‌ ಸಿಬ್ಬಂದಿಯ ಮೂಲ ವೇತನದಲ್ಲಿ ಶೇಕಡ 30ರಿಂದ 35ರಷ್ಟು ಹೆಚ್ಚಳ ಮಾಡಬೇಕ. ಎಲ್ಲರಿಗೂ ತಿಂಗಳಿಗೆ ₹ 3,600 ವಿಶೇಷ ಭತ್ಯೆ ಮಂಜೂರು ಮಾಡಬೇಕು. ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ಸಕ್ರಿಯರಾಗಿರುವ ಎಲ್ಲ ಎಎಸ್‌ಐ, ಎಚ್‌ಸಿ ಮತ್ತು ಪಿಸಿಗಳಿಗೆ 2020ರ ಮಾರ್ಚ್‌ನಿಂದ ತಿಂಗಳಿಗೆ ₹ 5,000 ಕಷ್ಟ ಪರಿಹಾರ ಭತ್ಯೆ ಮಂಜೂರು ಮಾಡಬೇಕು. 2020ರ ಜನವರಿಯಿಂದ ತಡೆ ಹಿಡಿದಿರುವ ತುಟ್ಟಿಭತ್ಯೆಯನ್ನು ಹಿಂಬಾಕಿ ಸಹಿತವಾಗಿ ಪಾವತಿ ಮಾಡಬೇಕು. ಪೊಲೀಸ್‌ ಕಾನ್‌ಸ್ಟೆಬಲ್‌ಗಳಿಗೆ ನೀಡುತ್ತಿರುವ ಪಡಿತರ ಭತ್ಯೆಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆಗಳು ಮನವಿ ಪತ್ರದಲ್ಲಿವೆ.

ಪೊಲೀಸ್‌ ಕಾನ್‌ಸ್ಟೆಬಲ್‌ಗಳಿಂದ ಸಬ್‌ ಇನ್‌ಸ್ಪೆಕ್ಟರ್‌ವರೆಗಿನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ನೀಡುತ್ತಿರುವ ‘ಫೇಶಿಯಲ್‌ ಕಿಟ್‌’ ಭತ್ಯೆಯನ್ನು ಪರಿಷ್ಕರಿಸಬೇಕು. ಸಾರಿಗೆ ಭತ್ಯೆಯನ್ನು ತಿಂಗಳಿಗೆ ₹ 2,000ಕ್ಕೆ ಹೆಚ್ಚಿಸಬೇಕು. ವಾರದ ರಜೆ ಭತ್ಯೆಯನ್ನು ₹ 200ರಿಂದ ₹ 1,000ಕ್ಕೆ ಏರಿಕೆ ಮಾಡಬೇಕು. ಕಾನ್‌ಸ್ಟೆಬಲ್‌ಗಳಿಗೆ ಕಡ್ಡಾಯವಾಗಿ ವಾರದ ರಜೆ ಪಡೆಯಲು ಅವಕಾಶ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಪೊಲೀಸ್‌ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸರ್ಕಾರಿ ರಜಾ ದಿನಗಳ ಬದಲಿಗೆ ನೀಡುವ ಭತ್ಯೆಯನ್ನು ಪರಿಷ್ಕರಣೆ ಮಾಡಬೇಕು. ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಇಬ್ಬರು ಮಕ್ಕಳಿಗೆ ವರ್ಷಕ್ಕೆ ತಲಾ ₹ 25,000ದಂತೆ ಶಿಕ್ಷಣ ಭತ್ಯೆ ಮಂಜೂರು ಮಾಡಬೇಕು. ಈ ಎಲ್ಲ ಬೇಡಿಕೆಗಳನ್ನೂ ಈಡೇರಿಸಲು ಪ್ರಸಕ್ತ ವರ್ಷವೇ ₹ 1,000 ಕೋಟಿ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು