ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಜತೆ ಒಂದು ತಾಸು ಕಳೆದ ನಿರಾಣಿ

ಚಟುವಟಿಕೆಯ ಕೇಂದ್ರವಾದ ಬಿಎಸ್‌ವೈ ನಿವಾಸ
Last Updated 27 ಜುಲೈ 2021, 8:49 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನಿವಾಸ ‘ಕಾವೇರಿ’ ಮಂಗಳವಾರ ಬೆಳಗ್ಗಿನಿಂದಲೇ ಚಟುವಟಿಕೆಯ ಕೇಂದ್ರವಾಗಿತ್ತು. ಮಾಜಿ ಸಚಿವರು, ಶಾಸಕರು ಮತ್ತು ಸ್ವಾಮೀಜಿಗಳು ಬಂದು ಯಡಿಯೂರಪ್ಪ ಜತೆ ಮಾತುಕತೆ ನಡೆಸಿದರು.

ಹಿರಿಯ ಶಾಸಕರಾದ ಆರ್‌.ಅಶೋಕ, ಮುರುಗೇಶ ನಿರಾಣಿ, ಬಸವರಾಜ ಬೊಮ್ಮಾಯಿ, ಎಂ.ಪಿ.ರೇಣುಕಾಚಾರ್ಯ ಮುಂತಾದವರು ಭೇಟಿ ಮಾಡಿದವರಲ್ಲಿ ಪ್ರಮುಖರು.

ಮುರುಗೇಶ್‌ ನಿರಾಣಿ ಸುಮಾರು ಒಂದು ತಾಸು ಮಾತುಕತೆ ನಡೆಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಯಡಿಯೂರಪ್ಪ ಅವರ ಆಪ್ತ ಮೂಲಗಳ ಪ್ರಕಾರ, ನಿರಾಣಿ ಒಂದು ತಾಸು ಇದ್ದದ್ದು ನಿಜ. ಅವರು ಎಲ್ಲರ ಜತೆಗೆ ಸೇರಿಯೇ ಮಾತುಕತೆ ನಡೆಸಿದರು. ಆ ವೇಳೆ ಇತರ ಶಾಸಕರೂ ಇದ್ದರು. ಪ್ರತ್ಯೇಕ ಮಾತುಕತೆ ನಡೆದಿಲ್ಲ.

ಯಡಿಯೂರಪ್ಪ ಅವರ ಜತೆ ಮಾತುಕತೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ನಿರಾಣಿ, ಹೊಸ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ನನ್ನ ಹೆಸರನ್ನು ಚಾಲ್ತಿಗೆ ಬಿಟ್ಟಿರುವುದು ಮಾಧ್ಯಮಗಳು. ಮುಖ್ಯಮಂತ್ರಿ ಹುದ್ದೆಗಾಗಿ ಯಾವುದೇ ಪ್ರಯತ್ನ ನಡೆಸಿಲ್ಲ ಎಂದು ಹೇಳಿದರು.

ಪಕ್ಷದ ಕೆಲವರು ಅಭಿಮಾನದಿಂದ ಮುಖ್ಯಮಂತ್ರಿ ಆಗಬಹುದು ಎನ್ನುತ್ತಾರೆ. ಇನ್ನು ಕೆಲವರು ಆಗಬಾರದು ಎನ್ನುತ್ತಾರೆ. ಇದ್ಯಾವುದಕ್ಕೂ ಹೆಚ್ಚಿನ ಮಹತ್ವವಿಲ್ಲ. ಮುಂದಿನ ಮಂತ್ರಿ ಮಂಡಲದಲ್ಲಿ ಸಚಿವರನ್ನಾಗಿ ಸೇರಿಸಿಕೊಳ್ಳದಿದ್ದರೂ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ನಿರಾಣಿ ಹೇಳಿದರು.

ಪಕ್ಷದ ಶಾಸಕರಲ್ಲಿ ಯಾರನ್ನೇ ಮುಖ್ಯಮಂತ್ರಿ ಮಾಡಿದರೂ ಸಹಕಾರ ನೀಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಪೂರ್ಣ ಬಹುಮತ ತರಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುತ್ತೇವೆ ಎಂದರು.

ಮುಂದಿನ ಮುಖ್ಯಮಂತ್ರಿ ಉತ್ತರ ಕರ್ನಾಟಕದ ಲಿಂಗಾಯತರೇ ಆಗಬೇಕು ಎಂದು ಶಾಸಕ ಉಮೇಶ ಕತ್ತಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ನಿರಾಣಿ, ಅವರ ಹೇಳಿಕೆಯಲ್ಲಿ ತಪ್ಪಿಲ್ಲ. ಆದರೆ ವರಿಷ್ಠರ ತೀರ್ಮಾನವೇ ಅಂತಿಮ. ಅದಕ್ಕೆ ಎಲ್ಲರೂ ತಲೆಬಾಗಬೇಕು ಎಂದರು.

ಆರಾಮವಾಗಿ ಕಳೆದ ಬಿಎಸ್‌ವೈ:ಯಡಿಯೂರಪ್ಪ ಅವರು ಬೆಳಗ್ಗಿನಿಂದ ಉಲ್ಲಾಸಿತರಾಗಿಯೇ ಇದ್ದರು. ಎಂದಿನಂತೆ ಹಲವು ಸುತ್ತು ವಾಕಿಂಗ್‌ ಮಾಡಿದರು. ತಮ್ಮನ್ನು ಭೇಟಿ ಮಾಡಲು ಬಂದ ಎಲ್ಲರ ಜತೆಗೂ ಮುಕ್ತವಾಗಿ ಮಾತನಾಡಿದರು. ಮನೆಯ ಹಸುಗಳನ್ನು ಪ್ರೀತಿಯಿಂದ ನೇವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT