ಶನಿವಾರ, ಅಕ್ಟೋಬರ್ 8, 2022
21 °C
ರಾಜಕೀಯ ಲಾಭಕ್ಕೆ ನಾಯಕರ ಪೈಪೋಟಿ l ಹಳೆ ಮೈಸೂರು ಭಾಗದ ರಾಜಕಾರಣಿಗಳಿಗೆ ಚುನಾವಣಾ ಅಸ್ತ್ರ

ಬೆಂಗಳೂರು–ಮೈಸೂರು ದಶಪಥ ಹೆದ್ದಾರಿಯಲ್ಲಿ ‘ರಾಜಕೀಯ ಸಮರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು–ಮೈಸೂರು ದಶಪಥ ಹೆದ್ದಾರಿ ಈಗ ರಾಜಕೀಯ ಸಮರಕ್ಕೆ ವೇದಿಕೆಯಾಗಿದೆ. ಹೆದ್ದಾರಿ ನಿರ್ಮಾಣದ ಶ್ರೇಯ ಪಡೆದುಕೊಳ್ಳಲು ಹಳೆ ಮೈಸೂರು ಭಾಗದ ರಾಜಕಾರಣಿಗಳ ನಡುವೆ ಭಾರೀ ಪೈಪೋಟಿಯೇ ಏರ್ಪಟ್ಟಿದೆ.

‘ಯೋಜನೆಗೆ ಅನುಮೋದನೆ ನೀಡಿದ್ದು ನಾವೇ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದಶಪಥಕ್ಕೆ ಅನುಮೋದನೆ ನೀಡಲಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡಾ. ಎಚ್.ಸಿ.ಮಹದೇ ವಪ್ಪ ಹೇಳಿಕೊಳ್ಳುತ್ತಿದ್ದಾರೆ. ಆದರೆ, ‘ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಈ ಯೋಜನೆ ಕೇಂದ್ರ ಸರ್ಕಾರದ ಕೊಡುಗೆ’ ಎಂದು ಮೈಸೂರು–ಕೊಡಗು ಸಂಸದ ಪ್ರತಾಪ ಸಿಂಹ ಪ್ರತಿಪಾದಿಸುತ್ತಿದ್ದಾರೆ.

‘ಭೂಸ್ವಾದೀನದ ವಿಚಾರದಲ್ಲಿ ರೈತರನ್ನು ಒಪ್ಪಿಸಿ ಯೋಜನೆಗೆ ಅನುವು ಮಾಡಿಕೊಟ್ಟಿದ್ದು ನಾವು. ಇದರಲ್ಲಿ ಬಿಜೆಪಿ ಪಾತ್ರ ಏನೂ ಇಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳುತ್ತಿದ್ದಾರೆ.

ಹಲವು ವರ್ಷಗಳಿಂದ ಪ್ರಸ್ತಾವದ ಹಂತದಲ್ಲಿದ್ದ ಯೋಜನೆಗೆ 2016ರಲ್ಲಿ ಅನುಮೋದನೆ ದೊರೆಯಿತು. ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ ಬಳಿಕ 2019ರಿಂದ ಕಾಮಗಾರಿ ಆರಂಭವಾಗಿದೆ. ಅನುಮೋದನೆ ದೊರೆತಾಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ
ದಲ್ಲಿತ್ತು. ಎಚ್.ಸಿ.ಮಹದೇವಪ್ಪ ಲೋಕೋಪಯೋಗಿ ಸಚಿವರಾಗಿದ್ದರು. ಕೇಂದ್ರದಲ್ಲಿ 2014ರಿಂದಲೇ ಬಿಜೆಪಿ ಅಧಿಕಾರದಲ್ಲಿದೆ. ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತಕ್ಕೆ ಬರುವ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ರಸ್ತೆ ಅಭಿವೃದ್ಧಿ
ಯನ್ನು ಎನ್‌ಎಚ್‌ಎಐ (ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ನಿರ್ವಹಿಸುತ್ತಿದ್ದು, ಇದು ಕೇಂದ್ರ ಸರ್ಕಾರದ ಅಧೀನ ಸಂಸ್ಥೆ. ರಸ್ತೆಗೆ ಅಗತ್ಯ ಇರುವ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದು ರಾಜ್ಯ ಸರ್ಕಾರದ ಜವಾಬ್ದಾರಿ.

ಹೆದ್ದಾರಿಗಾಗಿ ಸಂಸದರ ಸಮರ: ಇದೆಲ್ಲದರ ನಡುವೆ ಸಂಸದ ಪ್ರತಾಪ ಸಿಂಹ ಅವರು ಮಂಡ್ಯ ಮತ್ತು ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಆಗಾಗ ಪರಿಶೀಲನೆ ಮಾಡುತ್ತಿರುವುದು ಈ ಭಾಗದ ಕಾಂಗ್ರೆಸ್ ಮತ್ತು ಜೆಡಿಎಸ್‌ ನಾಯಕರನ್ನು ಕೆರಳುವಂತೆ ಮಾಡಿದೆ. ಇಡೀ ಹೆದ್ದಾರಿ ನಿರ್ಮಾಣಕ್ಕೆ ತಮ್ಮ ಶ್ರಮವೇ ಹೆಚ್ಚು ಎಂಬುದನ್ನು ತೋರಿಸಿಕೊಳ್ಳಲು ಪ್ರತಾಪ ಸಿಂಹ ಯತ್ನಿಸುತ್ತಿರುವುದು ಬೇರೆ ಪಕ್ಷಗಳ ನಾಯಕರ ಸಿಟ್ಟಿಗೆ ಕಾರಣವಾಗಿದೆ.

ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಕಾಮಗಾರಿ ಪರಿಶೀಲನೆ ನಡೆಸಿದ ಕಾರಣ ಮಂಡ್ಯ ಸಂಸದೆ ಸುಮಲತಾ ಅವರು ಪ್ರತಾಪ ಸಿಂಹ ವಿರುದ್ಧ  ಆಕ್ರೋಶ ಹೊರಹಾಕಿದ್ದರು. ಸುಮಲತಾ ಅವರ ಟೀಕೆಗೆ ಪ್ರತಾಪ ಸಿಂಹ ಕೂಡ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ್ದರು.

ರಾಮನಗರ ಜಿಲ್ಲೆಗೂ ಪ್ರತಾಪ ಸಿಂಹ ಪದೇ ಪದೇ ಭೇಟಿ ನೀಡುತ್ತಿರುವುದು ಅಲ್ಲಿನ ಕಾಂಗ್ರೆಸ್, ಜೆಡಿಎಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ತಿಂಗಳ ಅವಧಿಯಲ್ಲಿಯೇ ನಾಲ್ಕೈದು ಬಾರಿ ಹೆದ್ದಾರಿ ಪರಿಶೀಲನೆ ಮಾಡಿದ್ದಾರೆ.

‘ಮೈಸೂರು–ಬೆಂಗಳೂರು ಹೆದ್ದಾರಿಗೆ ಭೇಟಿ ನೀಡುತ್ತಿದ್ದೇನೆ’ ಎಂದು ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ, ಭೇಟಿ ನೀಡಿದ ಬಳಿಕ ಫೋಟೊ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಾಪ ಸಿಂಹ ಹಂಚಿಕೊಳ್ಳುತ್ತಿರುವುದು ಜೆಡಿಎಸ್‌ ಮತ್ತು ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗಿಸಿದೆ. ಪ್ರತಾಪ ಸಿಂಹ ಹಾಗೂ ಕುಮಾರಸ್ವಾಮಿ, ಡಿ.ಕೆ. ಸುರೇಶ್ ನಡುವೆ ಮಾತಿನ ಸಮರಕ್ಕೂ ಈ ಹೆದ್ದಾರಿ ದಾರಿ ಮಾಡಿಕೊಟ್ಟಿದೆ.

ಚುನಾವಣೆಗೆ ಹೊಸ ಅಸ್ತ್ರ: ಒಂದೇ ಒಂದು ಮಳೆ ಕಾಮಗಾರಿಯ ಗುಣಮಟ್ಟವನ್ನು ಬಯಲು ಮಾಡಿತು. ಈಗ ಬಿಜೆಪಿ ವಿರುದ್ಧ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಕಳಪೆ ಕಾಮಗಾರಿಯ ಆರೋಪ ಹೊರಿಸುತ್ತಿವೆ. ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದರಿಂದ ಸ್ಥಳೀಯರಿಗೆ ಆಗಿರುವ ತೊಂದರೆ ಬಗ್ಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸದನದಲ್ಲಿ, ಮಾಧ್ಯಮಗಳ ಮುಂದೆಯೂ ಸಾಕಷ್ಟು ಬಾರಿ ಅಸಮಾಧಾನ ಹೊರಹಾಕಿದ್ದಾರೆ.

ಕಳಪೆ ಕಾಮಗಾರಿ ನಡೆದಿಲ್ಲ ಎಂದು ಪ್ರತಾಪ ಸಿಂಹ ಸಮರ್ಥನೆ ಮಾಡಿಕೊಳ್ಳುತ್ತಿದ್ದರೆ, ಕಾಮಗಾರಿಯಲ್ಲಿನ ಲೋಪಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.

ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೂ ತಂದಿದ್ದಾರೆ. ಲೋಪವನ್ನು ಸರಿಪಡಿಸುವ ಭರವಸೆಯನ್ನು ಗಡ್ಕರಿ ಅವರು ನೀಡಿದ್ದಾರೆ.

ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದ ರಾಜಕಾರಣಿಗಳಿಗೆ ಬೆಂಗಳೂರು–ಮೈಸೂರು ದಶಪಥ ಚುನಾವಣಾ ಅಸ್ತ್ರವಾಗುವ ಸಾಧ್ಯತೆಗಳಿವೆ. 

ಡಿಬಿಎಲ್‌ಗೆ ದಂಡ ವಿಧಿಸಿದ್ದ ಅಧಿಕಾರಿಗೆ ವರ್ಗಾವಣೆ ಶಿಕ್ಷೆ
ಮಂಡ್ಯ
: ದಶಪಥ ಕಾಮಗಾರಿಗಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ ಆರೋಪಕ್ಕಾಗಿ ದಿಲೀಪ್‌ ಬಿಲ್ಡ್‌ಕಾನ್‌ ಕಂಪನಿಗೆ ₹ 102 ಕೋಟಿ ದಂಡ ವಿಧಿಸಿದ್ದ ಹಿರಿಯ ಭೂವಿಜ್ಞಾನಿಯೊಬ್ಬರು ಕಳೆದೆರಡು ವರ್ಷಗಳಿಂದಲೂ ವರ್ಗಾವಣೆ ಶಿಕ್ಷೆ ಅನುಭವಿಸುತ್ತಿದ್ದಾರೆ.

ಮಂಡ್ಯ ತಾಲ್ಲೂಕು ಕಾಳೇನಹಳ್ಳಿ ಬಳಿ ಡಿಬಿಎಲ್‌ ಕಂಪನಿ 2019 ಕಲ್ಲು ಗಣಿಗಾರಿಕೆ ನಡೆಸಿತ್ತು. ಕೇಂದ್ರದ ಪರಿಸರ ಅನುಮೋದನೆ ಪಡೆಯದೆ ಕಲ್ಲು ಗಣಿಗಾರಿಕೆ ನಡೆಸಿದ್ದ ಕಾರಣಕ್ಕೆ ಆಗಿನ ಹಿರಿಯ ಭೂವಿಜ್ಞಾನಿ ಟಿ.ವಿ.ಪುಷ್ಪಾ ಅವರು ಕಂಪನಿಗೆ ₹102 ಕೋಟಿ ದಂಡ ವಿಧಿಸಿದ್ದರು. ಸರ್ಕಾರಕ್ಕೆ ರಾಜಧನವನ್ನೂ ವಂಚಿಸಿದ್ದ ಆರೋಪದಲ್ಲಿ ಡಿಬಿಎಲ್‌ ಹಿರಿಯ ಅಧಿಕಾರಿಗಳ ವಿರುದ್ಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್‌ ಕೂಡ ದಾಖಲಾಗಿತ್ತು. ಸದ್ಯ ಅಧಿಕಾರಿಗಳು ಜಾಮೀನು ಪಡೆದಿದ್ದಾರೆ.

ದಂಡ ವಿಧಿಸಿದ್ದ ಟಿ.ವಿ.ಪುಷ್ಪಾ ಅವರನ್ನು ಕೋವಿಡ್‌ ಸಂದರ್ಭದಲ್ಲಿ ವಿಜಯಪುರಕ್ಕ ವರ್ಗಾವಣೆ ಮಾಡಲಾಗಿತ್ತು. ನಂತರ ರಾಯಚೂರು ಸೇರಿ ಹಲವೆಡೆ ವರ್ಗಾವಣೆ ಮಾಡಲಾಗಿದೆ. ದಂಡ ವಿಧಿಸಿದ್ದ ಕಾರಣಕ್ಕೆ ಈಗಲೂ ಅವರು ವರ್ಗಾವಣೆ ಶಿಕ್ಷೆ ಅನುಭವಿಸುತ್ತಿದ್ದಾರೆ.

‘ಡಿಬಿಎಲ್‌ ಕಂಪನಿ ₹300 ಕೋಟಿ ರಾಜಧನ ಪಾವತಿಸಬೇಕಾಗಿದೆ. ಆದರೆ, ಇಲ್ಲಿಯವರೆಗೆ ಕೇವಲ ₹ 28 ಕೋಟಿ ಪಾವತಿ ಮಾಡಿ ಉಳಿದಿದ್ದನ್ನು ವಂಚಿಸಿದೆ’ ಎಂದು ಹೆಸರು ಹೇಳಲಿಚ್ಛಿಸದ ನಿವೃತ್ತ ಗಣಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು