ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವರ್ ಬ್ಯಾಂಕ್ ‘ವಂಚಕ’ ಬಂಧನ

Last Updated 8 ಜುಲೈ 2021, 22:04 IST
ಅಕ್ಷರ ಗಾತ್ರ

ತುಮಕೂರು/ಬೆಂಗಳೂರು: ‘ಪವರ್ ಬ್ಯಾಂಕ್’ ಆ್ಯಪ್ ಮೂಲಕ ₹ 290 ಕೋಟಿ ವಂಚಿಸಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅನಸ್ ಅಹ್ಮದ್‌ನನ್ನು ತುಮಕೂರು ಜಿಲ್ಲಾ ಸೆನ್ (ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ) ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ರಾಜ್ಯದ ಸಾವಿರಾರು ಜನರಿಂದ ಹಣ ಸಂಗ್ರಹಿಸಿದ್ದ ಆರೋಪಿ ಹಾಗೂ ಇತರರು, ಏಕಾಏಕಿ ಆ್ಯಪ್‌ ಬಂದ್ ಮಾಡಿದ್ದರು. ₹ 44 ಸಾವಿರ ಕಳೆದುಕೊಂಡಿದ್ದ ಹೂಡಿಕೆದಾರ ನಾಗೇಶ್ ಎಂಬುವರು ಸೆನ್ ಠಾಣೆಗೆ ದೂರು ನೀಡಿದ್ದರು.

‘ನಾಗೇಶ್ ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಳ್ಳಲಾಗಿತ್ತು. ಕೇರಳದ ಅನಸ್‌ ಅಹ್ಮದ್ ಉಳಿದುಕೊಂಡಿದ್ದ ಜಾಗದ ಬಗ್ಗೆ ಮಾಹಿತಿ ಸಿಕ್ಕಿತ್ತು. ಪೊಲೀಸರ ವಿಶೇಷ ತಂಡ ಆರೋಪಿಯನ್ನು ಬಂಧಿಸಿದೆ’ ಎಂದು ಮೂಲಗಳು ಹೇಳಿವೆ.

‘ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಬೇಕಿದೆ’ ಎಂದೂ ತಿಳಿಸಿವೆ.

ಸಿಐಡಿ ಹುಡುಕುತ್ತಿದ್ದ ಆರೋಪಿ: ಪವರ್‌ ಬ್ಯಾಂಕ್ ವಂಚನೆ ಬಗ್ಗೆ ‘ರೇಜೋರ್ ಪೇ’ ಕಂಪನಿ ಪ್ರತಿನಿಧಿ, ಸಿಐಡಿ ಸೈಬರ್ ಕ್ರೈ ವಿಭಾಗಕ್ಕೆ ಕಳೆದ ತಿಂಗಳು ದೂರು ನೀಡಿದ್ದರು. ’13 ನಕಲಿ ಕಂಪನಿಗಳನ್ನು ಸೃಷ್ಟಿಸಿಕೊಂಡಿರುವ ಆರೋಪಿಗಳು, ಪವರ್ ಬ್ಯಾಂಕ್ ಆ್ಯಪ್‌ ಮೂಲಕ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ’ ಎಂದು ದೂರಿನಲ್ಲಿ ಹೇಳಿದ್ದರು.

ತನಿಖೆ ಕೈಗೊಂಡಿದ್ದ ಸಿಐಡಿ ಅಧಿಕಾರಿಗಳು, ಅನಸ್ ಅಹ್ಮದ್ ಪತ್ನಿಯಾದ ಚೀನಾದ ಕ್ಸಿಯೋಲಿನ್‌ ಸೇರಿ 11 ಮಂದಿಯನ್ನು ಬಂಧಿಸಿದ್ದರು. ಆದರೆ, ಅನಸ್ ಅಹ್ಮದ್ ತಲೆಮರೆಸಿಕೊಂಡಿದ್ದ. ಇದೀಗ ತುಮಕೂರು ಪೊಲೀಸರ ಕೈಗೆ ಆತ ಸಿಕ್ಕಿಬಿದ್ದಿದ್ದಾನೆ. ಸಿಐಡಿ ಪೊಲೀಸರು ಸಹ ಆತನನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT