ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕರು- 2022| ಎಲೆಮರೆ ಸಾಧಕರ ಸಂಗಮ: ಮೂಡಿದ ಧನ್ಯತಾಭಾವ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ
Last Updated 24 ಜೂನ್ 2022, 3:00 IST
ಅಕ್ಷರ ಗಾತ್ರ

ಬೆಂಗಳೂರು: ಅವರ ಮೊಗದಲ್ಲಿ ಸಂತಸ ಮೂಡಿತ್ತು. ಎಲೆಮರೆಯ ಕಾಯಿಯಂತೆ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿದ್ದ ತಮ್ಮನ್ನು ಗುರುತಿಸಿದ್ದಕ್ಕೆ ಧನ್ಯತಾಭಾವ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಸರ್‌ ಎಂ.ವಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಪ್ರಜಾವಾಣಿ ಸಾಧಕರು–2022’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಾಧಕರು ತಾವು ಕೈಗೊಂಡ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆಎಸ್‌ಡಿಎಲ್‌) ಪ್ರಾಯೋಜಕತ್ವ ಹಾಗೂ ಎಫ್‌ಕೆಸಿಸಿಐ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅನಾಥ ಶವಗಳಿಗೆ ಅಂತ್ಯಸಂಸ್ಕಾರ‌ ನೆರವೇರಿಸುತ್ತಿರುವ ಚನ್ನಪಟ್ಟಣದ ಆಶಾ, ಟೋಕಿಯೊ ಪ್ಯಾರಾಲಿಂಪಿಕ್ಸ್ ಈಜುಪಟು ನಿರಂಜನ್ ಮುಕುಂದನ್, ಅಂತರರಾಷ್ಟ್ರೀಯ ಮಟ್ಟದ ‘ಯೋಗ’ ಗುರು ಭಾಗೀರಥಿ ಕನ್ನಡತಿ ಸೇರಿದಂತೆ ವಿವಿಧ ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ವೈದ್ಯಕೀಯ, ಉದ್ಯಮ, ವಿಜ್ಞಾನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರನ್ನು ಗುರುವಾರ ಗೌರವಿಸಲಾಯಿತು. ಚಪ್ಪಾಳೆಯ ಕರತಾಡತನದ ಮೂಲಕ ಗಣ್ಯರು ಮತ್ತು ಸಭಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಕುಟುಂಬ ಸದಸ್ಯರು ಈ ಕ್ಷಣಕ್ಕೆ ಸಾಕ್ಷಿಯಾದವರು. ತಮ್ಮವರ ಸಾಧನೆಗೆ ಸಿಕ್ಕ ಗೌರವವನ್ನು ಕಣ್ಮುಂಬಿಕೊಂಡು ಸಂಭ್ರಮಿಸಿದರು.

ತೆರೆಮರೆಯಲ್ಲಿ ಕೈಗೊಂಡಿದ್ದ ಕಾರ್ಯಗಳನ್ನು ‘ಪ್ರಜಾವಾಣಿ’ ಗುರುತಿಸಿ ಪ್ರೋತ್ಸಾಹಿಸಿದೆ. ಇದರಿಂದಾಗಿ, ನಮ್ಮ ಮೇಲಿನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಈ ಕಾರ್ಯಗಳನ್ನು ಮುಂದುವರಿಸುವ ಇಚ್ಛಾಶಕ್ತಿಯನ್ನು ಬಲಪಡಿಸಿದೆ ಎನ್ನುವುದು ಪ್ರಶಸ್ತಿ ಪುರಸ್ಕೃತರ ಅಭಿಮತವಾಗಿತ್ತು.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಒಟ್ಟು 22 ಜನರಿಗೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇನ್ನಷ್ಟು ಸಾಧನೆಗೆ ಪ್ರೇರಣೆ: ನಟ ನಾಗಭೂಷಣ್ ಮಾತನಾಡಿ, ‘ಹಲವು ಸಾಧಕರು ಬೆಳಕಿಗೆ ಬರುವುದು ಕಡಿಮೆ. ಸಾಧನೆಯನ್ನು ಗುರುತಿಸುವವರು ಸಹ ಕಡಿಮೆ. ಶಾಲೆ ಸೇರುವ ಮೊದಲು ರ‍್ಯಾಂಕ್‌ ಬಗ್ಗೆ ಯೋಚಿಸುವ ಸಮಾಜ ಇದು. ಹಲವರ ಸಾಧನೆಯನ್ನು ಮೃತಪಟ್ಟ ಮೇಲೆಯೇ ಗುರುತಿಸಲಾಗಿದೆ. ಜೀವಿತಾವಧಿಯಲ್ಲಿ ಗುರುತಿಸುತ್ತಿರುವುದು ಇನ್ನೊಬ್ಬರಿಗೂ ಪ್ರೇರಣೆಯಾಗಲಿದೆ’ ಎಂದರು.

‘ನಾನು ಸರ್ಕಾರಿ ಶಾಲೆಯಲ್ಲಿ ಓದಿದವನು. ಕಲಿತ ಜ್ಞಾನವನ್ನು ಇನ್ನೊಬ್ಬರಿಗೆ ದಾಟಿಸುವುದು ಮುಖ್ಯ. ಮಾನವೀಯ ಗುಣಗಳಿರುವ ಸಾಧಕರನ್ನು ಗುರುತಿಸಲಾಗಿದೆ. ಅನಾಥ ಶವಗಳಿಗೂ ಸಂಸ್ಕಾರ ನೀಡುವುದು ಸಹ ಶ್ಲಾಘನೀಯ’ ಎಂದರು. ‘ನಾವು ಮುಂದಿನ ಪೀಳಿಗೆಗೆ ಯಾವ ರೀತಿಯ ಪರಿಸರ ಬಿಟ್ಟು ಹೋಗುತ್ತೇವೆ ಎನ್ನುವುದು ಮುಖ್ಯ. ಹೀಗಾಗಿ, ಸುಸ್ಥಿರ ಅಭಿವೃದ್ಧಿಯತ್ತ ಗಮನಹರಿಸಬೇಕಾಗಿದೆ. ಮೈಸೂರು ಸ್ಯಾಂಡಲ್‌ ಸಾಬೂನು ಜಗದ್ವಿಖ್ಯಾತಿ ಹೊಂದಬೇಕು ಎನ್ನುವುದು ನನ್ನ ಬಯಕೆ’ ಎಂದರು.

ಅಡಿಕೆ ಸಂಶೋಧನೆಗೆ ಉತ್ತೇಜನ: ಮಾಡಾಳ್‌ ವಿರೂಪಾಕ್ಷಪ್ಪ

‘ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲೂ ಪ್ರಜಾವಾಣಿ ತನ್ನದೇ ಆದ ಛಾಪು ಮೂಡಿಸಿ ವೇಗವಾಗಿ ಬೆಳೆಯುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವ ’ಪ್ರಜಾವಾಣಿ‘ ಕಾರ್ಯ ಶ್ಲಾಘನೀಯ. ಸಾಲು ಮರದ ತಿಮ್ಮಕ್ಕ ಅವರ ಕಾರ್ಯವನ್ನು ಗುರುತಿಸದೇ ಇದ್ದಿದ್ದರೆ ಅವರ ಪರಿಚಯವೇ ಆಗುತ್ತಿರಲಿಲ್ಲ. ಹೀಗಾಗಿ, ಅಪರೂಪದ ಸಾಧಕರನ್ನು ರಾಜ್ಯಕ್ಕೆ ಪರಿಚಯಿಸುವ ಮೂಲಕ ಉತ್ತಮ ಕಾರ್ಯ ಕೈಗೊಳ್ಳಲಾಗಿದೆ’ ಎಂದು ಚನ್ನಗಿರಿ ಶಾಸಕ ಮತ್ತು ಕೆಎಸ್‌ಡಿಎಲ್‌ ಅಧ್ಯಕ್ಷ ಕೆ. ಮಾಡಾಳ್ ವಿರೂಪಾಕ್ಷಪ್ಪ ಪ್ರಶಂಸೆ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಅಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಅಡಿಕೆಯಿಂದ ಹಲವಾರು ಉತ್ಪನ್ನಗಳನ್ನು ತಯಾರಿಸಬಹುದು. ಈ ಬಗ್ಗೆ ಸಂಶೋಧನೆ ಕೈಗೊಂಡಿರುವ ಸಾಧಕರ ಕಾರ್ಯ ಶ್ಲಾಘನೀಯ. ಅಡಿಕೆ ಸಂಶೋಧನೆಗೆ ಸರ್ಕಾರದ ವತಿಯಿಂದ ಎಲ್ಲ ರೀತಿಯ ಸಹಕಾರ ಮತ್ತು ಪ್ರೋತ್ಸಾಹ ನೀಡಲಾಗುವುದು. ತಂಬಾಕು ನಿಷೇಧವಾದರೆ ಅಡಿಕೆ ಬೆಳೆಗಾರರಿಗೆ ಸಮಸ್ಯೆಯಾಗಲಿದೆ ಎನ್ನುವ ಆತಂಕವಿದೆ. ಆದರೆ, ಈ ರೀತಿಯ ಆವಿಷ್ಕಾರಗಳಿಂದ ಅಡಿಕೆ ಬೆಳೆಗಾರರಿಗೆ ಅನುಕೂಲವಾಗಲಿದೆ’ ಎಂದು ವಿವರಿಸಿದರು.

‘ಸಾಧಕರ ಸೇವೆ ಮಾಡುವ ಅವಕಾಶವನ್ನು ಕೆಎಸ್‌ಡಿಎಲ್‌ಗೂ ನೀಡಿರುವುದು ಸ್ಮರಣೀಯ ಕಾರ್ಯ’ ಎಂದು ಹೇಳಿದರು.

‘ಸಾಧಕರು ಮತ್ತಷ್ಟು ಕೊಡುಗೆ ನೀಡಲಿ’

‘ಸಾಧಕರು ನಿರಂತರವಾಗಿ ಸಮಾಜಕ್ಕೆ ಕೊಡುಗೆ ನೀಡಲಿ. ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವವರನ್ನು ಪ್ರಜಾವಾಣಿ ಗುರುತಿಸಿರುವುದು ಶ್ಲಾಘನೀಯ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಡಾ. ಐ.ಎಸ್‌. ಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ಅನೇಕ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿರುವೆ. ಲಯನ್ಸ್‌ ಸಂಸ್ಥೆ ಮೂಲಕ 1.5 ಲಕ್ಷ ಜನರಿಗೆ ನೇತ್ರ ಶಸ್ತ್ರಚಿಕಿತ್ಸೆ ಮತ್ತು 11 ಸಾವಿರ ಜನರಿಗೆ ಕಾರ್ನಿಯಾ ಚಿಕಿತ್ಸೆ ಕೈಗೊಳ್ಳಲಾಗಿದೆ. ಇದೇ ರೀತಿ ಕ್ಯಾನ್ಸರ್‌ ಫೌಂಡೇಷನ್‌ ಮೂಲಕವೂ ಹಲವು ರೋಗಿಗಳಿಗೆ ನೆರವು ನೀಡಿದ್ದೇವೆ’ ಎಂದು ವಿವರಿಸಿದರು.

‘ಸಮಾಜ ಸೇವೆ ನಿಜವಾದ ಸಾಧನೆ’

‘ನನ್ನ ಸಾಧನೆಯ ಹಿಂದೆ 40 ಸ್ವಯಂ ಸೇವಕರು ಇದ್ದಾರೆ. ಸಾಮಾನ್ಯವಾಗಿ ಸ್ಟಾರ್‌ಗಳನ್ನು ಗುರುತಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ದಿನ ಬೆಳಗಾಗುವುದರೊಳಗೆ ಸ್ಟಾರ್‌ಗಳು ಸೃಷ್ಟಿಯಾಗುತ್ತಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆ ಮಾಡುವುದು ನಿಜವಾದ ಸಾಧನೆ.

ರವಿ ಮಡೋಡಿ, ಬೆಂಗಳೂರು

‘ನೇತ್ರದಾನದ ಬಗ್ಗೆ ಅರಿವಿನ ಕೊರತೆ’

‘ಎಷ್ಟೋ ಜನರಿಗೆ ನೇತ್ರದಾನದ ಬಗ್ಗೆ ಅರಿ ವಿಲ್ಲ. ಕಣ್ಣಿಗೆ ಗಾಯವಾಗುವುದು, ಅಪಘಾತ, ಆನುವಂಶಿಕ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಕೆಲವರು ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಅಂತಹವರಿಗೆ ನೇತ್ರವನ್ನು ದಾನ ಮಾಡಿದಲ್ಲಿ ಸಾವಿನಲ್ಲಿಯೂ ಸಾರ್ಥಕತೆ ಕಾಣಲು ಸಾಧ್ಯ. ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ ಇರುವವರು ಕೂಡ ನೇತ್ರದಾನಕ್ಕೆ ಅರ್ಹರು. ಒಂದು ಜೊತೆ ನೇತ್ರಗಳು ಇಬ್ಬರಿಗೆ ಸಹಕಾರಿಯಾಗಲಿದೆ. ನಟ ಪುನೀತ್ ರಾಜ್‍ಕುಮಾರ್ ಅವರ ನೇತ್ರಗಳು ನಾಲ್ವರಿಗೆ ದೃಷ್ಟಿ ನೀಡಿದೆ.

ಗಾಯಿತ್ರಿ ನಾರಾಯಣ್, ತುಮಕೂರು

****

ಕೋವಿಡ್ ಸಂದರ್ಭದಲ್ಲಿ ಮೃತರ ಅಂತ್ಯಸಂಸ್ಕಾರಕ್ಕೆ ಕುಟುಂಬದ ಸದಸ್ಯರೇ ನಿರಾಕರಿಸಿದ ಪ್ರಸಂಗಗಳು ನಡೆದಿವೆ. ಆದರೆ, ಕೋವಿಡ್‌ ಸಂದರ್ಭದಲ್ಲೇ ಇಕ್ಕಟ್‌ ಸಿನಿಮಾ ತಯಾರಿಸಿದ್ದೆ. ಅದು ಕೆಲವರ ಮೊಗದಲ್ಲಿ ಸಂತಸ ಮೂಡಿಸಿದ್ದು ನನಗೆ ಹೆಮ್ಮೆಯ ಕ್ಷಣವಾಗಿತ್ತು

- ನಾಗಭೂಷಣ್‌, ಚಲನಚಿತ್ರ ನಟ

****

2022ನೇ ಸಾಲಿನ ಪ್ರಜಾವಾಣಿ ಸಾಧಕರು


ಬೆಂಗಳೂರು: ಆರೋಗ್ಯ ಪರಿವೀಕ್ಷಕಿ ಕಲಾವತಿ ಜೆ., ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದ ಪ್ರಿಯಾ ಮೋಹನ್, ಟೋಕಿಯೊ ಒಲಿಂಪಿಕ್ಸ್‌ ಈಜುಪಟು ಶ್ರೀಹರಿ ನಟರಾಜ್, ಟೋಕಿಯೊ ಪ್ಯಾರಾಲಿಂಪಿಕ್ಸ್ ಈಜುಪಟು ನಿರಂಜನ್ ಮುಕುಂದನ್, ಜೂನಿಯರ್ ಭಾರತ ತಂಡದ ಹಾಕಿ ಆಟಗಾರ ಹರೀಶ ಮುತಗಾರ, ಸ್ತನ ಕ್ಯಾನ್ಸರ್ ಪತ್ತೆಗೆ ಸಾಧನ ಆವಿಷ್ಕಾರ ಮಾಡಿದ ಗೀತಾ ಮಂಜುನಾಥ್, ಅಂತರರಾಷ್ಟ್ರೀಯ ಮಟ್ಟದ ‘ಯೋಗ’ ಗುರು ಭಾಗೀರಥಿ ಕನ್ನಡತಿ, ಗುಬ್ಬಿ ಲ್ಯಾಬ್ಸ್‌ ಸಂಸ್ಥಾಪಕ ಎಚ್‌.ಎಸ್‌.ಸುಧೀರ, ‘ಬೆಂಗಳೂರು ಹುಡುಗರು ತಂಡ’ದ ಸ್ಥಾಪಕ ಎಸ್‌. ವಿನೋದ್‌, ಯಕ್ಷಗಾನ ಪ್ರಸಂಗಗಳನ್ನು ಡಿಜಿಟಲೀಕರಣಗೊಳಿಸಿದ ರವಿ ಮಡೋಡಿ, ಹಾಫ್ ಟೀ ಸ್ಟಾರ್ಟ್‌ ಅಪ್‌ನ ಜಿ.ಸಿ. ಹನುಮಂತ, ನ್ಯಾನೋ ತಂತ್ರಜ್ಞಾನ ಬಳಸಿ ಅಡಕೆಯಿಂದ ಗಾಜು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಆವಿಷ್ಕಾರ ಮಾಡಿದ ಗುರುಮೂರ್ತಿ ಹೆಗಡೆ, ಹಾನ್‌ಬಾಳ್‌ ಚಿಕ್ಕಿ ನವೋದ್ಯಮದ ಸ್ಥಾಪಕ ರವಿತೇಜ, ಕೋವಿಡ್‌ ಸಮಯದಲ್ಲಿ ಬೈಕ್‌ನಲ್ಲಿ ನೂರಾರು ಕಿ.ಮೀ. ಸಂಚರಿಸಿ ಕೋವಿಡೇತರ ರೋಗಿಗಳಿಗೆ ಔಷಧ ಒದಗಿಸಿದ ವಿಜ್ಞಾನ ಶಿಕ್ಷಕಿ ದಶ್ಮಿ ರಾಣಿ.

ಚಿಕ್ಕಬಳ್ಳಾಪುರ: ಮಕ್ಕಳಲ್ಲಿ ಸೃಜನಶೀಲ ವ್ಯಕ್ತಿತ್ವ ಬೆಳವಣಿಗೆಗೆ ಶ್ರಮಿಸುತ್ತಿರುವ ಶಿಡ್ಲಘಟ್ಟ ತಾಲ್ಲೂಕು ಸಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕ ಎಸ್.ಕಲಾಧರ್.

ರಾಮನಗರ: ಅನಾಥ ಶವಗಳಿಗೆ ಅಂತ್ಯಸಂಸ್ಕಾರ‌ ನೆರವೇರಿಸಿದ ಚನ್ನಪಟ್ಟಣದ ಆಶಾ.

ತುಮಕೂರು: ನೇತ್ರದಾನ, ರಕ್ತದಾನದ ಬಗ್ಗೆ ಅರಿವು ಮೂಡಿಸುತ್ತಿರುವ ಮಧುಗಿರಿಯ ಗಾಯಿತ್ರಿ ನಾರಾಯಣ್, ಪ್ರತಿ ನಿತ್ಯ 300ರಿಂದ 500 ವಿದ್ಯಾರ್ಥಿಗಳಿಗೆ ಊಟ, ತಿಂಡಿ ಒದಗಿಸುತ್ತಿರುವ ವೆಂಕಟೇಶ್.

ಬೆಂಗಳೂರು ಗ್ರಾಮಾಂತರ: ಅರ್ಧ ಎಕರೆಯಲ್ಲಿ ತೈವಾನ್ ಸೀಬೆ ಬೆಳೆದು ಉತ್ತಮ ಆದಾಯ ಗಳಿಸುತ್ತಿರುವ ದೇವನಹಳ್ಳಿ ಯುವ ರೈತ ಸಂತೋಷ, ಮಾನಸಿಕ ರೋಗಿಗಳು, ಅಂಗವಿಕಲರು, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರವಾಗಿ ಕೆಲಸ ಮಾಡುತ್ತ ಬಂದಿರುವವರು ದೊಡ್ಡಬಳ್ಳಾಪುರ ನಗರದ ಅಮಲಿ ನಾಯಕ್.

ಕೋಲಾರ: ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಅವರು ಕೋರಿದ ಬಟ್ಟೆ ಕೊಡಿಸುತ್ತಿರುವ ಜಂಗಮಗುರ್ಜೇನಹಳ್ಳಿ ಸರ್ಕಾರಿ ಶಾಲಾ ಶಿಕ್ಷಕ ಎಸ್‌.ಆರ್.ಧರ್ಮೇಶ್‌, ‘ಮುಬಾರಕ್‌ ಹೋಟೆಲ್‌’ ಮೂಲಕ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ನಿತ್ಯವೂ ಉಚಿತವಾಗಿ ಊಟ ಕೊಡುತ್ತಿರುವ ಬಂಗಾರಪೇಟೆಯ ಸಯ್ಯದ್ ಅಫ್ಸರ್ ಪಾಷಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT