ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕರು 2023 |ಪ್ರಾಣಿಪ್ರೀತಿಯಿಂದ ಪಿಕಪ್ ಡ್ಯಾಂ ಕಟ್ಟಿಸಿದ ಜೀವನ್ಮುಖಿ

Last Updated 1 ಜನವರಿ 2023, 5:46 IST
ಅಕ್ಷರ ಗಾತ್ರ

'ಪ್ರಜಾವಾಣಿ' ಪಾಲಿಗಿದು ಅಮೃತ ಮಹೋತ್ಸವದ ವರ್ಷ. 75 ವರ್ಷಗಳ ಹಾದಿಯಲ್ಲಿ ಜನಮುಖಿಯಾಗಿರುವ ಪತ್ರಿಕೆ, ನಮ್ಮ ನಡುವಿನ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನೂ ಲಾಗಾಯ್ತಿನಿಂದ ಮಾಡುತ್ತಾ ಬಂದಿದೆ. 2020ರಿಂದ ಪ್ರತಿವರ್ಷ ಆಯಾ ಇಸವಿಯ ಕೊನೆಯ ಎರಡು ಅಂಕಿಗಳಿಗೆ ಹೊಂದುವಷ್ಟು ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿ, ಸನ್ಮಾನಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಶಿಕ್ಷಣ, ಸಮಾಜಸೇವೆ, ವಿಜ್ಞಾನ, ಕ್ರೀಡೆ, ಸಾಹಿತ್ಯ–ಕಲೆ–ಮನರಂಜನೆ, ಪರಿಸರ, ಉದ್ಯಮ, ಸಂಶೋಧನೆ, ಆಡಳಿತ, ಕನ್ನಡ ಕೈಂಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೆ ತಾವು ಮುಗುಮ್ಮಾಗಿ ಸೇವೆ ಸಲ್ಲಿಸುತ್ತಿರುವವರನ್ನು 23 ಸಾಧಕರನ್ನು 2023ರ ಹೊಸವರ್ಷಕ್ಕೆ ಸಾಂಕೇತಿಕವಾಗಿ ಮಾಡಲಾಗಿದೆ. ಸಾಧಕರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದ್ದು, ಅವರ ಹೆಜ್ಜೆಗುರುತುಗಳು ಈ ಅಕ್ಷರಚೌಕಟ್ಟನ್ನೂ ಮೀರಿದ್ದು. ಹೊಸ ವರ್ಷವನ್ನು ಈ ಸಾಧಕರೊಟ್ಟಿಗೆ ಬರಮಾಡಿಕೊಳ್ಳುವುದಕ್ಕೆ ಪತ್ರಿಕಾ ಬಳಗ ಹರ್ಷಿಸುತ್ತದೆ.

****

ಹೆಸರು: ಶಿವಲಿಂಗ ಶೆಟ್ಟಿ

ವೃತ್ತಿ: ಸಣ್ಣ ವ್ಯಾಪಾರಿ

ಸಾಧನೆ: ಸ್ವಂತ ಖರ್ಚಿನಲ್ಲಿ ಪಿಕಪ್ ಡ್ಯಾಂ ನಿರ್ಮಾಣ

ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿಯ ಈ ವ್ಯಕ್ತಿ ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಗ್ರಾಮದ ಚನ್ನಪ್ಪಾಜಿ ಬೆಟ್ಟದಲ್ಲಿ ಸ್ವಂತ ಖರ್ಚಿನಲ್ಲಿ ಎರಡು ಸಣ್ಣ ಪಿಕಪ್ ಡ್ಯಾಂಗಳನ್ನು ನಿರ್ಮಿಸಿದ್ದಾರೆ. ಕೋಡಂಬಹಳ್ಳಿ, ಸಿಂಗರಾಜಪುರ ಗ್ರಾಮಗಳ ಸಂಪರ್ಕ ರಸ್ತೆ ಬಳಿ ಜಲಪಾತದ ರೀತಿ ಹರಿಯುತ್ತಿದ್ದ ನೀರಿಗೆ ಅಡ್ಡಲಾಗಿ ಈ ಕಿರು ಅಣೆಕಟ್ಟೆಗಳು ನಿರ್ಮಾಣ ಆಗಿವೆ.

ವೃತ್ತಿಯಲ್ಲಿ ಸಣ್ಣ ವ್ಯಾಪಾರಿ ಆಗಿರುವ ಅವರು ಚಾಕೊಲೇಟ್, ಬ್ರೆಡ್, ಚಕ್ಲಿ ಸೇರಿದಂತೆ ಸಣ್ಣಪುಟ್ಟ ತಿಂಡಿಗಳನ್ನು ಹಳ್ಳಿಗಳ ಪೆಟ್ಟಿಗೆ ಅಂಗಡಿಗಳಿಗೆ ಹೋಲ್‌ಸೇಲ್ ದರದಲ್ಲಿ ನೀಡುವ ವ್ಯಾಪಾರ ಮಾಡುತ್ತಾರೆ. ಸ್ಕೂಟರಿನಲ್ಲಿ ತಿಂಡಿತಿನಿಸು ಹೇರಿಕೊಂಡು ಊರೂರು ಸುತ್ತುತ್ತ, ಈ ವ್ಯಾಪಾರದಿಂದ ಬಂದ ಸಣ್ಣ ಲಾಭದಿಂದಲೇ ಈ ಕಾರ್ಯ ಮಾಡಿದ್ದಾರೆ.

ಕೋಡಂಬಹಳ್ಳಿ ವ್ಯಾಪ್ತಿಯಲ್ಲಿ ಹಲವು ಬೆಟ್ಟ, ಗುಡ್ಡಗಳಿವೆ. ಇಲ್ಲಿನ ವನ್ಯಜೀವಿಗಳಿಗೆ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಎದುರಾಗಬಾರದು ಎನ್ನುವ ಉದ್ದೇಶದಿಂದ ಈ ಕಾರ್ಯ ಮಾಡಿರುವುದಾಗಿ ಶಿವಲಿಂಗ ಶೆಟ್ಟಿ ವಿವರಿಸುತ್ತಾರೆ.

ಪಿಕಪ್ ಡ್ಯಾಂಗಳನ್ನು ಕಟ್ಟಲು ಯಾವುದೇ ಕೆಲಸಗಾರರನ್ನು ಕರೆದುಕೊಂಡಿಲ್ಲ. ತಮ್ಮ ಮೊಪೆಡ್‌ನಲ್ಲಿ ಸಿಮೆಂಟ್, ಇಟ್ಟಿಗೆಗಳನ್ನು ತೆಗೆದುಕೊಂಡು ಹೋಗಿ, ಅಲ್ಲಿಯೇ ಸಿಗುವ ಮರಳು, ಜಲ್ಲಿ ಕಲ್ಲುಗಳನ್ನು ಬಳಸಿಕೊಂಡು ತಾವೇ ತಮ್ಮ ಕೈಯಾರೆ ನಿರ್ಮಿಸಿರುವುದು ವಿಶೇಷ. ನೀರಿಗೆ ಅಡ್ಡವಾಗಿ ಮರಳು ತುಂಬಿದ ಚೀಲ ಇಟ್ಟು ನೀರು ಒಂದೆಡೆ ಹರಿಯುವಂತೆ ಮಾಡಿ ಡ್ಯಾಂಗಳನ್ನು ನಿರ್ಮಿಸಿದ್ದಾರೆ.

ಎರಡು ಪಿಕಪ್ ಡ್ಯಾಂ ನಿರ್ಮಿಸಲು ಸುಮಾರು ₹ 1 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ. ಯಾರ ಬಳಿಯೂ ಆರ್ಥಿಕ ನೆರವು ಪಡೆದಿಲ್ಲ.

ಕೋಡಂಬಹಳ್ಳಿಯ ಕುಂಬಾರ ಗೇರಿಯಲ್ಲಿ ಸಣ್ಣ ಗುಡಿಸಲೊಂದರಲ್ಲಿ ವಾಸಿಸುವ ಅವರು ಸ್ವಂತ ಮನೆಯನ್ನೂ ಕಟ್ಟಿಸಿಕೊಂಡಿಲ್ಲ. ಪತ್ನಿ ಸಾವನ್ನಪ್ಪಿದ್ದಾರೆ. ಅವರಿಗೆ ಒಬ್ಬ ಮಗಳು, ಒಬ್ಬ ಮಗ ಇದ್ದಾರೆ. ಮಗಳಿಗೆ ಮದುವೆ ಮಾಡಿದ್ದಾರೆ. ಮಗ ಕಳೆದ ಮೂರು ವರ್ಷಗಳ ಹಿಂದೆ ಮನೆಯಿಂದ ಹೊರಹೋದವನು ಮತ್ತೆ ವಾಪಸ್ ಬಂದಿಲ್ಲ. ಸದ್ಯ ಅವರದು ಒಂಟಿ ಜೀವನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT