ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ರಾಜ್ಯ ಪ್ರವಾಸ: ಬಲ ಪ್ರದರ್ಶನ, ವರಿಷ್ಠರಿಗೆ ಬಿಸಿ ಮುಟ್ಟಿಸಲು ತಂತ್ರ

Last Updated 3 ಸೆಪ್ಟೆಂಬರ್ 2021, 2:21 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಬಲ ಲಿಂಗಾಯತ ಸಮುದಾಯ ಈಗಲೂ ತಮ್ಮ ಜೊತೆ ಗಟ್ಟಿಯಾಗಿ ನಿಂತಿದೆಯೊ ಇಲ್ಲವೊ ಎಂಬುದನ್ನು ಪರೀಕ್ಷಿಸಿಕೊಳ್ಳುವುದು. ತಮ್ಮನ್ನು ಕಡೆಗಣಿಸಿದರೆ ಬಿಜೆಪಿ ಎದುರಿಸಬೇಕಾದ ಪರಿಣಾಮಗಳ ಬಗ್ಗೆ ತಮ್ಮ ‍ಪಕ್ಷದ ವರಿಷ್ಠರಿಗೆ ಸಂದೇಶ ರವಾನಿಸುವ ಉದ್ದೇಶ ಬಿ.ಎಸ್‌.ಯಡಿಯೂರಪ್ಪನವರ ರಾಜ್ಯ ಪ್ರವಾಸದ ಹಿಂದೆ ಅಡಕವಾಗಿವೆ. ತಮ್ಮ ಜೊತೆಗೆ ಕಿರಿಯ ಮಗ ಬಿ.ವೈ.ವಿಜಯೇಂದ್ರಗೂ ಸೂಕ್ತ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯನ್ನು ಪರೋಕ್ಷವಾಗಿ ವರಿಷ್ಠರ ಮುಂದಿಡುವ ಪ್ರಯತ್ನದ ಭಾಗದಂತೆಯೂಇದು ಕಾಣುತ್ತದೆ.

‘ಯಡಿಯೂರಪ್ಪ ರಾಜ್ಯ ಪ್ರವಾಸದ ಗುಟ್ಟೇನು’ ವಿಷಯದ ಕುರಿತು ಗುರುವಾರ ನಡೆದ ‘ಪ‍್ರಜಾವಾಣಿ ಸಂವಾದ’ದಲ್ಲಿ ವ್ಯಕ್ತವಾದ ಅಭಿಪ್ರಾಯಗಳಿವು.

‘ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶ’
‘ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನವೇ ಅವರು ರಾಜ್ಯ ಪ್ರವಾಸದ ಇಚ್ಛೆ ವ್ಯಕ್ತಪಡಿಸಿದ್ದರು. ರಾಜೀನಾಮೆ ನೀಡಿದ ಬಳಿಕವೂ ಈ ಮಾತನ್ನು ಪುನರುಚ್ಚರಿಸಿದ್ದರು. 2023ರಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಇದಕ್ಕಾಗಿ ಬೂತ್‌ ಮಟ್ಟದಿಂದಲೇ ಪಕ್ಷವನ್ನು ಬಲಿಷ್ಠಗೊಳಿಸಬೇಕು ಎಂಬುದೇ ಈ ಪ್ರವಾಸದ ಉದ್ದೇಶ’.

‘ಪ್ರವಾಸವುವೈಯಕ್ತಿಕ ಶಕ್ತಿ ಪ್ರದರ್ಶನದ ವೇದಿಕೆ ಎಂದು ಬಣ್ಣಿಸುತ್ತಿರುವುದು ಸರಿಯಲ್ಲ. ಸಾಮೂಹಿಕ ನಾಯಕತ್ವದ ಮೂಲಕ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂಬ ಸಂದೇಶ ನೀಡಲು ಅವರು ಹೊರಟಿದ್ದಾರೆ’.

‘ಬಿಜೆಪಿ ಹೈಕಮಾಂಡ್‌ 75 ವರ್ಷ ಮೇಲ್ಪಟ್ಟವರನ್ನು ಮುಖ್ಯಮಂತ್ರಿಯಾಗಿ ಮಾಡಿಲ್ಲ. ಪಕ್ಷ ಕಟ್ಟಿದ ಯಡಿಯೂರಪ್ಪನವರಿಗೆ ಸೂಕ್ತ ಗೌರವ ನೀಡಬೇಕು ಎಂಬ ಉದ್ದೇಶದಿಂದ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಅವರನ್ನು ಮೂಲೆಗುಂಪು ಮಾಡುವ ಉದ್ದೇಶ ಪಕ್ಷಕ್ಕಿಲ್ಲ’.

–ಎನ್‌.ರವಿಕುಮಾರ್‌, ವಿಧಾನಪರಿಷತ್‌ನ ಬಿಜೆಪಿ ಸದಸ್ಯ

*

‘ಮೂಲೆ ಗುಂಪಾಗುವ ಭಯ’
‘ಬದುಕಿರುವವರೆಗೂ ಸಕ್ರಿಯ ರಾಜಕಾರಣದಲ್ಲಿ ಇರಬೇಕು. ತಮ್ಮನ್ನು ಕಡೆಗಣಿಸಿದರೆ 2013ರಲ್ಲಿ ಆದ ಗತಿಯೇ ಪ‍ಕ್ಷಕ್ಕೆ ಮತ್ತೆ ಬಂದೊದಗಲಿದೆ ಎಂಬ ಸಂದೇಶವನ್ನು ವರಿಷ್ಠರಿಗೆ ರವಾನಿಸುವ ಉದ್ದೇಶದಿಂದ ಈ ಪ್ರವಾಸ ಕೈಗೊಂಡಿರುವುದು ಸ್ಪಷ್ಟ’.

‘ಜನಸಂಘ ಮತ್ತು ಬಿಜೆಪಿಯವರು ಪಕ್ಷಕ್ಕಾಗಿ ದುಡಿದವರನ್ನು ಮೂಲೆಗುಂಪು ಮಾಡಿದ ಅನೇಕ ನಿದರ್ಶನಗಳು ಕಣ್ಣ ಮುಂದೆ ಇವೆ. ತಾವೂ ಅವಗಣನೆಗೆ ಗುರಿಯಾಗಬಹುದು ಎಂಬ ಆತಂಕ ಯಡಿಯೂರಪ್ಪನವರನ್ನು ಕಾಡಿರಬಹುದು. ತಾನು ರಾಜ್ಯದ ಜನತೆಯ ಹತ್ತಿರ ಹೋಗುತ್ತೇನೆ ಎಂದು ಅವರು ಹೇಳುತ್ತಿರುವುದು ಮೂರನೇ ಬಾರಿ. 2011ರಲ್ಲೂ ಇಂತಹ ತೀರ್ಮಾನ ಕೈಗೊಂಡಿದ್ದ ಅವರು ಬಿಜೆಪಿಯನ್ನು ಮುಗಿಸುವುದೇ ನನ್ನ ಜೀವನದ ಗುರಿ ಎಂದಿದ್ದರು’.

‘ದೇಶದಲ್ಲಿ ಈಗ ಬಿಜೆಪಿ ವರ್ಚಸ್ಸು ಕುಂದುತ್ತಿದೆ. ಈ ಸಂದರ್ಭವನ್ನು ಬಳಸಿಕೊಂಡು ಶಕ್ತಿ ಪ್ರದರ್ಶಿಸಲು ಹೊರಟಂತಿದೆ’.

–ವಿ.ಎಸ್‌.ಉಗ್ರಪ್ಪ, ಕಾಂಗ್ರೆಸ್‌ ಮುಖಂಡ

*
‘ಬಲ ಪ್ರದರ್ಶನದ ತಂತ್ರ’
‘ಮುಂದಿನ ಚುನಾವಣೆಯವರೆಗೂ ಮುಖ್ಯಮಂತ್ರಿ ಗಾದಿಯಲ್ಲಿ ಮುಂದುವರಿಯಬೇಕೆಂಬ ಮಹಾದಾಸೆ ಯಡಿಯೂರಪ್ಪ ಅವರಿಗಿತ್ತು. ಅದಕ್ಕೆ ಅವರ ಪಕ್ಷ ವರಿಷ್ಠರು ಅಡ್ಡಗಾಲು ಹಾಕಿದ್ದರು. ಇದರಿಂದ ಬೇಸರಿಸಿಕೊಂಡಿರುವ ಅವರು ಈಗ ಬಲಪ್ರದರ್ಶನಕ್ಕೆ ಮುಂದಾಗಿದ್ದಾರೆ. ಲಿಂಗಾಯತ ಮತಗಳು ಚದುರಿಹೋಗಬಾರದು, ಅವುಗಳ ಮೇಲೆ ತಮ್ಮ ಹಿಡಿತವೇ ಇರಬೇಕು ಎಂಬುದು ಅವರ ಆಸೆ. ವಿಧಾನಸಭೆಯಲ್ಲಿ ತಮ್ಮ ಬೆಂಬಲಿಗ ಶಾಸಕರ ಸಂಖ್ಯೆ ಹೆಚ್ಚಿದ್ದರೆ ಶಾಸಕಾಂಗ ಪಕ್ಷದ ಮೇಲೆ ಹಿಡಿತ ಸಾಧಿಸಬಹುದು. ಆಗ ತಾವು ಸೂಚಿಸಿದವರೇ ಮುಖ್ಯಮಂತ್ರಿ ಗಾದಿಗೆ ಏರುತ್ತಾರೆ ಎಂಬ ಅಭಿಲಾಷೆಯೂ ಇದ್ದಂತಿದೆ’.

‘ಯಡಿಯೂರಪ್ಪ ಹಾಗೂ ಬಿಜೆಪಿ ನಡುವಣ ಸಂಘರ್ಷದಲ್ಲಿ ಆರ್‌ಎಸ್‌ಎಸ್‌ ಪಾತ್ರ ಪ್ರಮುಖವಾದುದು. ಉತ್ತರ ಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲೂ ಆಡಳಿತ ತರಬೇಕು ಎಂಬುದು ಆರ್‌ಎಸ್‌ಎಸ್‌ ಬಯಕೆ. ಇದಕ್ಕೆ ಯಡಿಯೂರಪ್ಪ ಸೊಪ್ಪು ಹಾಕದಿದ್ದಾಗ ಅಧಿಕಾರದಿಂದ ಕೆಳಗಿಳಿಸಲಾಯಿತು’.

–ಜಿ.ಎನ್‌.ನಾಗರಾಜ್‌, ಸಿಪಿಎಂ ರಾಜ್ಯ ಘಟಕದ ಸದಸ್ಯ.

*

‘ಅಸ್ತಿತ್ವ ಉಳಿಸಿಕೊಳ್ಳಲು ಪ್ರವಾಸ’
‘ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ತಮ್ಮನ್ನು ನಿಕೃಷ್ಟವಾಗಿ ನಡೆಸಿಕೊಂಡರೆ ಆಗುವ ಪರಿಣಾಮಗಳೇನು ಎಂಬುದನ್ನು ತೋರಿಸುವುದು. ಇಳಿ ವಯಸ್ಸಿನಲ್ಲೂ ತಮ್ಮ ಪ್ರಭಾವ ಕಡಿಮೆಯಾಗಿಲ್ಲ ಎಂಬ ಸಂದೇಶ ರವಾನಿಸುವ ಉದ್ದೇಶ ಈ ಪ್ರವಾಸದ ಹಿಂದಿದೆ’.

‘ಪಕ್ಷ ಸಂಘಟನೆಯೇ ಪ್ರವಾಸದ ಉದ್ದೇಶವಾಗಿದ್ದರೆ ಇತರ ನಾಯಕರೂ ಅವರ ಜೊತೆಗೂಡಬಹುದಿತ್ತಲ್ಲವೇ. ಜಾತಿ ರಾಜಕಾರಣದ ಅಸ್ತಿತ್ವ ಉಳಿಸಿಕೊಳ್ಳಲು ಅವರು ಈ ಪ್ರವಾಸಕ್ಕೆ ಮುಂದಾಗಿದ್ದಾರೆ’.

–ಎಸ್‌. ಸುಧಾಕರ ಶೆಟ್ಟಿ, ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ.

*
‘ಪಕ್ಷಕ್ಕಿಂತಲೂ ತಾವು ಶಕ್ತಿಶಾಲಿ ಎಂಬುದನ್ನು ತೋರಿಸುವ ಪ್ರಯತ್ನ’
‘ತಮ್ಮ ಇಚ್ಛೆಗೆ ವಿರುದ್ಧವಾಗಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷ ಸಂಘಟನೆ ಎಂಬುದು ನೆಪ ಮಾತ್ರ. ಪಕ್ಷಕ್ಕಿಂತಲೂ ತಾನೇ ಶಕ್ತಿಶಾಲಿ ಎಂಬುದನ್ನು ತೋರಿಸಿಕೊಳ್ಳುವ ಅನಿವಾರ್ಯ ಯಡಿಯೂರಪ್ಪನವರಿಗೆ ಎದುರಾಗಿದೆ’.

‘ಪಂಚಮಸಾಲಿ ಹಾಗೂ ವೀರಶೈವರನ್ನು ಹೊರಗಿಟ್ಟು ಲಿಂಗಾಯತ ಸ್ವತಂತ್ರ ಧರ್ಮ ಸ್ಥಾಪಿಸಬೇಕೆಂಬುದು ಎಂ.ಬಿ.ಪಾಟೀಲರ ಹೋರಾಟದ ಉದ್ದೇಶವಾಗಿತ್ತು. ಈಗ ಆ ಹೋರಾಟದಿಂದ ಹಿಂದಡಿ ಇಟ್ಟಿದ್ದಾರೆ. ವೀರಶೈವರನ್ನೂ ಜೊತೆಗೆ ಕರೆದುಕೊಂಡು ಹೋಗುವ ಮಾತುಗಳನ್ನು ಆಡುತ್ತಿದ್ದಾರೆ. ಶಾಮನೂರು ಶಿವಶಂಕರಪ್ಪ ಹಾಗೂ ಎಂ.ಬಿ.ಪಾಟೀಲರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಬೇಕು ಎಂಬ ಮಾತುಗಳನ್ನು ಆಡಿದ್ದರು. ಅವರನ್ನು ಕಡೆಗಣಿಸಿದರೆ ಲಿಂಗಾಯತ ಸಮುದಾಯವನ್ನು ತಮ್ಮತ್ತ ಸೆಳೆದುಕೊಳ್ಳುತ್ತೇವೆ ಎಂಬ ಸಂದೇಶವನ್ನೂ ಅವರು ಬಿಜೆಪಿ ನಾಯಕರಿಗೆ ರವಾನಿಸುತ್ತಿದ್ದಾರೆ’.

‘ಇನ್ನೂ 15 ವರ್ಷ ಸಕ್ರಿಯ ರಾಜಕಾರಣದಲ್ಲೇ ಮುಂದುವರಿಯುವ ಇಂಗಿತವನ್ನು ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ. ಅವರ ಪ್ರವಾಸದಿಂದ ಬಿಜೆಪಿ ಜೊತೆಗೆ ಕಾಂಗ್ರೆಸ್‌ಗೂ ಭಯ ಶುರುವಾಗಿದೆ’.
–ಎಂ.ಕೆ.ಭಾಸ್ಕರ ರಾವ್‌, ಪತ್ರಕರ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT