ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣವ್ ಮುಖರ್ಜಿ ನಿಧನಕ್ಕೆ ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿ ರಾಜ್ಯ ನಾಯಕರ ಸಂತಾಪ

Last Updated 31 ಆಗಸ್ಟ್ 2020, 13:28 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ನಾಯಕರು ಸಂತಾಪ ಸೂಚಿಸಿದ್ದಾರೆ.

‘ಧೀಮಂತ ರಾಜಕಾರಣಿ, ಭಾರತದ ಮಾಜಿ ರಾಷ್ಟ್ರಪತಿ, ಭಾರತರತ್ನ ಪ್ರಣವ್ ಮುಖರ್ಜಿ ವಿಧಿವಶರಾದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ಶ್ರೇಷ್ಠ ನೇತಾರರನ್ನು ಕಳೆದುಕೊಂಡ ಅನಾಥಪ್ರಜ್ಞೆ ಇಡೀ ದೇಶಕ್ಕೆ ಆವರಿಸಿದೆ. ಅವರೊಂದಿಗೆ ನನ್ನ ಒಡನಾಟದ ಕ್ಷಣಗಳನ್ನು ನೆನೆಯುತ್ತಾ, ಅವರಿಗೆ ಅಶ್ರುಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ. ಅವರ ಸೇವೆ, ಸಾಧನೆಗಳು ಅನನ್ಯ. ದಶಕಗಳ ಕಾಲ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಪ್ರಧಾನ ಪಾತ್ರ ವಹಿಸಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಣಿಜ್ಯ, ವಿದೇಶಾಂಗ, ಹಣಕಾಸು, ರಕ್ಷಣಾ ಸಚಿವರಾಗಿ ಅವರು ಅವಿಸ್ಮರಣೀಯ ಸೇವೆ ಸಲ್ಲಿಸಿದ್ದರು. ರಾಷ್ಟ್ರಪತಿಗಳಾಗಿ ಅವರು ದೇಶದ ಗರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದರು’ ಎಂದು ಮುಖ್ಯಮಂತ್ರಿಗಳ ಕಚೇರಿಯ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

‘ಮಾಜಿ ರಾಷ್ಟ್ರಪತಿಗಳು, ಕೇಂದ್ರದ ಮಾಜಿ ಸಚಿವರು ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪ್ರಣವ್ ಮುಖರ್ಜಿ ಅವರ ನಿಧನದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ. ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾಗಿ‌ ಅವರು ಮಾಡಿರುವ ಸಾಧನೆಗೆ ದೇಶ‌ ಸದಾ ಋಣಿಯಾಗಿದೆ. ಅವರ‌ ಕುಟುಂಬ ಮತ್ತು ಬಂಧು ಮಿತ್ರರ‌ ಶೋಕದಲ್ಲಿ‌ ನಾನೂ ಭಾಗಿಯಾಗಿದ್ದೇನೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ಸರಳ ಸಜ್ಜನಿಕೆಯ ವ್ಯಕ್ತಿತ್ವದ ಹಿರಿಯ ರಾಜಕಾರಣಿ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸುತ್ತಿದ್ದೇನೆ. ಇಂತಹ ಮಹಾನ್ ಚೇತನದ ಅಗಲಿಕೆಯಿಂದ ನಮ್ಮ ದೇಶಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಪ್ರಣವ್ ನಿಧನಕ್ಕೆ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರೂ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

ಇವುಗಳನ್ನು ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT