ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ-ಸೆಟ್ ಪರೀಕ್ಷೆಯಲ್ಲಿ ಲೋಪ: ಪ್ರತಾಪಸಿಂಹ ಆರೋಪ

ಸಂಸದ ಪ್ರತಾಪಸಿಂಹ ಆರೋಪ
Last Updated 11 ಆಗಸ್ಟ್ 2021, 18:38 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು ವಿಶ್ವವಿದ್ಯಾಲಯ ಈಚೆಗೆ ನಡೆಸಿದ 2021ನೇ ಸಾಲಿನ ಕೆ-ಸೆಟ್ ಪರೀಕ್ಷೆಯ ಪ್ರಶ್ನೆಗಳಿಗೆ ನೀಡಿರುವ ಉತ್ತರಗಳ ಆಯ್ಕೆಯಲ್ಲೇ ಗಂಭೀರ ಲೋಪವಿದೆ’ ಎಂದು ಸಂಸದ ಪ್ರತಾಪಸಿಂಹ ಆರೋಪಿಸಿದ್ದು, ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

‘ಇತಿಹಾಸ ವಿಭಾಗದಲ್ಲಿ 17 ಕೀ–ಉತ್ತರಗಳು ತಪ್ಪಾಗಿವೆ. ಒಂದು ಕೀ–ಉತ್ತರಕ್ಕೆ ಆಕ್ಷೇಪಣೆ ಸಲ್ಲಿಸಲು ₹ 1 ಸಾವಿರ ಡಿ.ಡಿ ತೆಗೆಸಬೇಕು. ಆಕ್ಷೇಪಣೆ ಸಲ್ಲಿಕೆಯಾಗದಿದ್ದರೆ ಕೀ–ಉತ್ತರಗಳು ಸರಿ ಎಂಬ ನಿರ್ಧಾರಕ್ಕೆ ವಿಶ್ವವಿದ್ಯಾಲಯ ಬರುತ್ತದೆ. ಈ ಮೂಲಕ ಅಭ್ಯರ್ಥಿಗಳ ಜೀವನದೊಂದಿಗೆ ವಿಶ್ವವಿದ್ಯಾಲಯ ಚೆಲ್ಲಾಟವಾಡುತ್ತಿದೆ. ಮೈಸೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಂತೆ ಆಗಬಾರದು. ಆರೋಪಗಳಿಗೆ ಸ್ಪಷ್ಟೀಕರಣ ನೀಡಿ, ಮರು ಪರೀಕ್ಷೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಪ್ರಶ್ನೆಪತ್ರಿಕೆ ಸಿದ್ದಪಡಿಸಲು ನುರಿತ ಪ್ರಾಧ್ಯಾಪಕರ ಸಮಿತಿ ಈಗ ಇಲ್ಲ. ಮೌಲ್ಯಮಾಪನ ಮತ್ತು ಉತ್ತರ ಪತ್ರಿಕೆ ಠೇವಣಿ ವಿಭಾಗದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ತೆಗೆಯಲಾಗಿದೆ ಎಂಬ ದೂರುಗಳೂ ಬಂದಿವೆ. ಕೂಡಲೇ ಇಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಕೆ-ಸೆಟ್ ಪರೀಕ್ಷೆಯಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ 2 ವರ್ಷಗಳಲ್ಲಿ ಯಾವುದೇ ಪ್ರಕ್ರಿಯೆ ನಡೆಸದೆ 400ಕ್ಕಿಂತ ಹೆಚ್ಚು ಗ್ರೂಪ್–ಡಿ ನೌಕರರ ಅಕ್ರಮವಾಗಿ ನೇಮಕಾತಿ ಕುರಿತು ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆಗಾಗಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಸಂಸದ ಪ್ರತಾಪಸಿಂಹ ಅವರ ಪತ್ರ ಈಗಷ್ಟೇ ಬಂದಿದೆ. ಓದಿದ ನಂತರ ಪ್ರತಿಕ್ರಿಯಿಸುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT