ಭಾನುವಾರ, ಆಗಸ್ಟ್ 14, 2022
21 °C
ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರಿಗೆ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಪತ್ರ

ಕಲಾಪ ಮುಂದೂಡಲು ಸಭಾ ನಾಯಕರೇ ಸಲಹೆ ನೀಡಿದ್ದರು: ಕೆ. ಪ್ರತಾಪಚಂದ್ರ ಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಿಧಾನಮಂಡಲದ ಕಳೆದ ಅಧಿವೇಶನದಲ್ಲಿ ವಿಧಾನ ಪರಿಷತ್‌ ಕಲಾಪವನ್ನು ಅನಿರ್ದಿಷ್ಟ ಅವಧಿಯವರೆಗೆ ಮುಂದೂಡುವಂತೆ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಆಡಳಿತ ಪಕ್ಷದ ಹಲವರು ಸಲಹೆ ನೀಡಿದ್ದರು’ ಎಂದು ವಿಧಾನ ಪರಿಷತ್‌ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸೆ. 26ರಂದು ರಾತ್ರಿ 10.50ಕ್ಕೆ ವಿಧಾನ ಪರಿಷತ್‌ ಕಲಾಪ ಅಂತ್ಯಗೊಂಡಿತ್ತು. ಪರಿಷತ್‌ನಲ್ಲಿ ತಡರಾತ್ರಿ 1 ಗಂಟೆಯವರೆಗೂ ಕಲಾಪ ನಡೆದಿತ್ತು. ಆ ಬಳಿಕ ಕಲಾಪವನ್ನು ಅನಿರ್ದಿಷ್ಟ ಅವಧಿಯವರೆಗೆ ಮುಂದೂಡಲಾಗಿತ್ತು. ಮಸೂದೆಗಳ ಅಂಗೀಕಾರ ಬಾಕಿ ಇರುವಾಗಲೇ ಕಲಾಪ ಮುಂದೂಡಿದ್ದಕ್ಕೆ ಟ್ವಿಟರ್‌ನಲ್ಲಿ ಆಕ್ಷೇಪಿಸಿದ್ದ ಸುರೇಶ್‌ ಕುಮಾರ್‌, ‘ಸಭಾಪತಿಯವರ ನಡೆ ನಿಗೂಢ, ಅಂಪೈರ್‌ ಎಂದೂ ಹೀಗಿರಬಾರದು‘ ಎಂದು ಟ್ವೀಟ್‌ ಮಾಡಿದ್ದರು.

ಈ ಕುರಿತು ಡಿ. 1ರಂದು ಸಚಿವರಿಗೆ ಪತ್ರ ಬರೆದಿರುವ ಸಭಾಪತಿ, ‘ವಿಧಾನಸಭಾ ಕಲಾಪವನ್ನು ಮುಂದೂಡಿರುವ ಮಾಹಿತಿ ಬಂದ ಬಳಿಕ ಪರಿಷತ್‌ ಕಲಾಪವನ್ನೂ ಮುಂದೂಡುವ ಕುರಿತು ಸಭಾ ನಾಯಕರು ನನ್ನೊಂದಿಗೆ ಚರ್ಚಿಸಿದ್ದರು. ವಿರೋಧ ಪಕ್ಷದ ನಾಯಕರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು‘ ಎಂದು ತಿಳಿಸಿದ್ದಾರೆ.

ಸದನದ ಕಲಾಪದ ನಡಾವಳಿಯನ್ನೂ ಸಚಿವರಿಗೆ ಕಳುಹಿಸಿರುವ ಸಭಾಪತಿ, ‘ತಡರಾತ್ರಿಯಾಗಿದೆ. ಕಲಾಪ ವಿಳಂಬವಾಗುತ್ತಿದೆ’ ಎಂದು ಆಡಳಿತ ಪಕ್ಷದ ಸದಸ್ಯರು ಹಲವು ಬಾರಿ ಹೇಳಿರುವುದನ್ನು ಗುರುತು ಹಾಕಿ ತೋರಿಸಿದ್ದಾರೆ. ‘ಸಭಾಪತಿ ಹುದ್ದೆಯು ಪಕ್ಷಾತೀತವಾದದ್ದು. ಸಭಾಪತಿಯರ ನಡೆ ನಿಗೂಢವಾಗಿರಬಾರದು ಎನ್ನುವ ಆಶಯದಿಂದ ಈ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ‘ ಎಂದು ಹೇಳಿದ್ದಾರೆ.

‘ವಿಧಾನ ಪರಿಷತ್‌ನ 141ನೇ ಅಧಿವೇಶನದಲ್ಲಿ 44 ಮಸೂದೆಗಳನ್ನು ಮಂಡಿಸಲಾಗಿತ್ತು. ಒಂದು ತಿರಸ್ಕೃತಗೊಂಡಿದ್ದು, ಮೂರು ಮಸೂದೆಗಳು ಚರ್ಚೆಗೆ ಬಾಕಿ ಇವೆ. ಹಲವು ಸದಸ್ಯರು ಮಾತನಾಡುವುದು ಬಾಕಿ ಇರುವಾಗಲೇ ಸಚಿವರು ಸೇರಿದಂತೆ ಆಡಳಿತ ಪಕ್ಷದ ಹಲವು ಸದಸ್ಯರು ಸಮಯ ಮೀರಿರುವ ಕುರಿತು ಪದೇ ಪದೇ ಪ್ರಸ್ತಾಪಿದ್ದರು ಎಂಬುದು ಸದನದ ನಡಾವಳಿಯಲ್ಲಿ ಇದೆ. ಅದನ್ನು ಗಮನಿಸಬಹುದು’ ಎಂದು ಪ್ರತಾಪಚಂದ್ರ ಶೆಟ್ಟಿ ಪತ್ರದಲ್ಲಿ ತಿಳಿಸಿದ್ದಾರೆ.

ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತು ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಅವರಿಗೂ ಪತ್ರದ ಪ್ರತಿಗಳನ್ನು ಕಳುಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.