ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಚುನಾವಣೆ: ಮತದಾನಕ್ಕೆ ಸಜ್ಜು

Last Updated 17 ಜುಲೈ 2022, 16:22 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಪತಿ ಚುನಾವಣೆಯ ಮತದಾನಕ್ಕೆ ರಾಜ್ಯದಲ್ಲಿ ಸಕಲ ಸಿದ್ಧತೆ ನಡೆದಿದ್ದು, ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 106 ರಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಸೋಮವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.

ಚುನಾಯಿತ ಶಾಸಕರು, ಲೋಕಸಭಾ ಸದಸ್ಯರು ಮತ್ತು ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾಯಿತರಾದ ಸದಸ್ಯರಿಗೆ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದ ಹಕ್ಕು ಇದೆ. ವಿಧಾನಸಭೆಯ ಸದಸ್ಯರು ಆಯಾ ರಾಜ್ಯದ ಮತಗಟ್ಟೆಯಲ್ಲೇ ಮತ ಚಲಾಯಿಸಬೇಕು. ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಸಂಸತ್ತಿನಲ್ಲೇ ಮತ ಚಲಾಯಿಸಬೇಕು ತೀರಾ ಅನಿವಾರ್ಯ ಕಾರಣಗಳಿದ್ದರೆ ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆದು ರಾಜ್ಯದ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಬಹುದು.

ರಾಜ್ಯ ವಿಧಾನಸಭೆಯ 224 ಸದಸ್ಯರು ಇಲ್ಲಿಯೇ ಮತ ಚಲಾವಣೆ ಮಾಡುವರು. ಮೈಸೂರು– ಚಾಮರಾಜನಗರ ಕ್ಷೇತ್ರದ ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಕೂಡ ರಾಜ್ಯದಲ್ಲೇ ಮತ ಚಲಾಯಿಸಲು ವಾರದ ಹಿಂದೆಯೇ ಅನುಮತಿ ಪಡೆದಿದ್ದರು. ರಾಜ್ಯಸಭಾ ಸದಸ್ಯರಾಗಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ವೈದ್ಯಕೀಯ ಕಾರಣಗಳಿಂದ ರಾಜ್ಯದಿಂದಲೇ ಮತ ಚಲಾವಣೆ ಮಾಡಲು ಭಾನುವಾರ ಅನುಮತಿ ಪಡೆದುಕೊಂಡಿದ್ದಾರೆ.

‘ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು ಸಂಸತ್ತಿನ ಆವರಣದಲ್ಲಿರುವ ಮತಗಟ್ಟೆಯಲ್ಲೇ ಮತದಾನ ಮಾಡಬೇಕು. ರಾಜ್ಯದ ಮತಗಟ್ಟೆಯಲ್ಲಿ ಮತ ಚಲಾಯಿಸಬೇಕಾದರೆ ಕೇಂದ್ರ ಚುನಾವಣಾ ಆಯೋಗದ ಅನುಮತಿ ಬೇಕು. ಶ್ರೀನಿವಾಸ್‌ ಪ್ರಸಾದ್ ಅವರಿಗೆ ಇಲ್ಲಿಯೇ ಮತ ಚಲಾಯಿಸಲು ಆಯೋಗ ಅನುಮತಿ ನೀಡಿತ್ತು. ದೇವೇಗೌಡರಿಗೂ ಇಲ್ಲಿ ಮತದಾನಕ್ಕೆ ಅವಕಾಶ ನೀಡಲು ಭಾನುವಾರ ಸಂಜೆ ಆಯೋಗ ಒಪ್ಪಿಗೆ ನೀಡಿದೆ’ ಎಂದು ರಾಷ್ಟ್ರಪತಿ ಚುನಾವಣೆಯ ಸಹಾಯಕ ಚುನಾವಣಾಧಿಕಾರಿಯಾಗಿರುವ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ತಿಳಿಸಿದರು.

ಚುನಾವಣಾ ವೀಕ್ಷಕರಾಗಿ ಆಯೋಗ ನೇಮಿಸಿರುವ ಅಮಿತ್‌ ಕುಮಾರ್‌ ಘೋಷ್‌ ಅವರು ವಿಧಾನಸೌಧದಲ್ಲಿ ಸ್ಥಾಪಿರುವ ಮತಗಟ್ಟೆಗೆ ಭಾನುವಾರ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು. ಸೋಮವಾರ ಮತದಾನ ಮುಗಿದ ತಕ್ಷಣ ಮತಪೆಟ್ಟಿಗೆಗೆ ಮೊಹರು ಮಾಡಲಾಗುತ್ತಿದೆ. ರಾತ್ರಿ 9.20ಕ್ಕೆ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನದಲ್ಲಿ ಮತಪೆಟ್ಟಿಗೆಯನ್ನು ದೆಹಲಿಗೆ ಕೊಂಡೊಯ್ಯಲಾಗುತ್ತದೆ.

ಬಿಜೆಪಿ ಶಾಸಕರಿಗೆ ತರಬೇತಿ
ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವ ಕುರಿತು ಬಿಜೆಪಿ ಶಾಸಕರಿಗೆ ಅಣಕು ಮತದಾನದ ಮೂಲಕ ಭಾನುವಾರ ತರಬೇತಿ ನೀಡಲಾಯಿತು.

ಶಾಂಗ್ರಿಲಾ ಹೋಟೆಲ್‌ನಲ್ಲಿ ಶಾಸಕರಿಗೆ ತರಬೇತಿ ಆಯೋಜಿಸಲಾಗಿತ್ತು. ದೆಹಲಿಗೆ ತೆರಳಿ ತರಬೇತಿ ಪಡೆದು ಬಂದಿದ್ದ ಸಚಿವ ವಿ. ಸುನಿಲ್‌ ಕುಮಾರ್‌, ವಿಧಾನಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ಎಂ. ಸತೀಶ್ ರೆಡ್ಡಿ ಮತ್ತು ಶಾಸಕ ಅಭಯ ಪಾಟೀಲ, ಉಳಿದ ಶಾಸಕರಿಗೆ ತರಬೇತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT