ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಜು.29ಕ್ಕೆ ಸಾರಿಗೆ ನೌಕರರ ಧರಣಿ

Last Updated 27 ಜುಲೈ 2021, 2:23 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ಮುಷ್ಕರದ ವೇಳೆ ಸೇವೆಯಿಂದ ವಜಾಗೊಳಿಸಿರುವ ಎಲ್ಲ ಕಾರ್ಮಿಕರನ್ನು ಕರ್ತವ್ಯಕ್ಕೆ ಮರುನೇಮಿಸಿಕೊಳ್ಳಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಒಕ್ಕೂಟವು ಇದೇ 29ರಂದು ಬೆಳಿಗ್ಗೆ 11 ಗಂಟೆಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಹಮ್ಮಿಕೊಂಡಿದೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎಚ್.ಡಿ.ರೇವಪ್ಪ,‘ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ವೇತನ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಏಪ್ರಿಲ್‌ನಲ್ಲಿ ಮುಷ್ಕರ ನಡೆಸಿದ್ದರು. ಇದಕ್ಕಾಗಿ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಸಾವಿರಾರು ಕಾರ್ಮಿಕರನ್ನು ವಜಾಗೊಳಿಸಲಾಗಿದ್ದು, ವರ್ಗಾವಣೆ ಹಾಗೂ ಅಮಾನತು ಶಿಕ್ಷೆಗಳನ್ನು ನೀಡಲಾಗಿದೆ’ ಎಂದು ದೂರಿದರು.

‘ನಿವೃತ್ತಿ ಅಂಚಿನಲ್ಲಿದ್ದ ನೌಕರರು ಮಾತ್ರವಲ್ಲದೆ, ಟ್ರೈನಿ ನೌಕರರನ್ನೂ ಸೇವೆಯಿಂದ ವಜಾಗೊಳಿಸಲಾಗಿದೆ. ಕೆಲವರ ಅಮಾನತು ಈವರೆಗೆ ತೆರವು ಮಾಡಿಲ್ಲ. 60 ಸಾವಿರಕ್ಕೂ ಹೆಚ್ಚು ಮಂದಿಗೆ ಆಪಾದನಾ ಪತ್ರ ನೀಡಿ ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮಂಜುನಾಥ್,‘ಸೇವೆಯಿಂದ ವಜಾಗೊಂಡಿರುವ ಎಲ್ಲ ಕಾರ್ಮಿಕರು ಹಾಗೂ ಸೇವೆಯಿಂದ ಕೈಬಿಟ್ಟಿರುವ ಟ್ರೈನಿ ಮತ್ತು ಪ್ರೊಬೆಷನರಿ ಕಾರ್ಮಿಕರನ್ನುಕೂಡಲೇ ಕರ್ತವ್ಯಕ್ಕೆ ಮರುನೇಮಿಸಿಕೊಳ್ಳಬೇಕು. ದೂರದ ವಿಭಾಗಗಳಿಗೆ ವರ್ಗಾವಣೆಗೊಂಡಿರುವವರನ್ನು ಅವರು ಕರ್ತವ್ಯ ನಿರ್ವಹಿಸಿದ್ದ ಹಿಂದಿನ ಸ್ಥಳಗಳಿಗೆ ನಿಯೋಜಿಸಬೇಕು’ ಎಂದು ಒತ್ತಾಯಿಸಿದರು.

‘ಕಾರ್ಮಿಕರಿಗೆ ಗೈರು ಹಾಜರಿ ಆಪಾದನಾ ಪತ್ರಗಳನ್ನು ವಾಪಸ್ ಪಡೆದು, ಶಿಸ್ತು ಕ್ರಮಗಳನ್ನು ರದ್ದು ಮಾಡಬೇಕು. ಕಾರ್ಮಿಕ ಸಂಘಗಳೊಂದಿಗೆ ಚರ್ಚಿಸಿ, ವೇತನ ಪರಿಷ್ಕರಣೆಯನ್ನು ಕೂಡಲೇ ಜಾರಿ ಮಾಡಬೇಕು. ಈ ಬೇಡಿಕೆಗಳನ್ನು ಈಡೇರಿಸುವಂತೆ ಸಾರಿಗೆ ನೌಕರರು ಧರಣಿ ನಡೆಸಲಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT