ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರಾಬು ಜಮೀನು: ದರ ನಿಗದಿಪಡಿಸಿ ಅಧಿಸೂಚನೆ

Last Updated 17 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸುತ್ತಲೂ ಇತರ ಜಮೀನುಗಳಿಂದ ಸುತ್ತುವರಿದಿರುವ (ಲ್ಯಾಂಡ್‌ ಲಾಕ್ಡ್‌) ಖರಾಬು ಜಮೀನುಗಳನ್ನು ಮಾರಾಟ ಮಾಡಲು ನಿರ್ಧರಿಸಿರುವ ರಾಜ್ಯ ಸರ್ಕಾರ, ವಿವಿಧ ಸ್ವರೂಪದ ಖರಾಬು ಜಮೀನುಗಳಿಗೆ ದರ ನಿಗದಿ ಮಾಡಿ ಗುರುವಾರ ಅಧಿಸೂಚನೆ ಹೊರಡಿಸಿದೆ.

ಈ ಸಂಬಂಧ ಈಗಾಗಲೇ ಭೂ ಕಂದಾಯ ನಿಯಮಗಳಿಗೆ ತಿದ್ದುಪಡಿಗಳನ್ನು ಮಾಡಲಾಗಿದೆ. ಅದನ್ನು ಗುರುವಾರದಿಂದಲೇ ಅನ್ವಯವಾಗುವಂತೆ ಜಾರಿ ಮಾಡಲಾಗಿದೆ.

ಕೃಷಿ ಜಮೀನುಗಳ ಮಧ್ಯದಲ್ಲಿರುವ ಖರಾಬು ಜಮೀನುಗಳಿಗೆ ಸುತ್ತಲಿನ ಕೃಷಿ ಜಮೀನಿನ ಮಾರ್ಗಸೂಚಿ ದರವನ್ನೇ ನಿಗದಿ ಮಾಡಲಾಗಿದೆ. ಭೂ ಪರಿವರ್ತನೆಯಾಗಿದ್ದು, ಬಡಾವಣೆ ಅಥವಾ ಅಭಿವೃದ್ಧಿ ಯೋಜನೆಯ ಅನುಮೋದನೆಯಾಗದ ಜಮೀನಿಗೆ ಮಾರಾಟವಾಗುವ ದಿನ ಕೇಂದ್ರೀಯ ಮೌಲ್ಯಮಾಪನ ಸಮಿತಿ ನಿಗದಿಪಡಿಸುವ ಮಾರ್ಗಸೂಚಿ ದರವನ್ನು ಪಡೆಯಬೇಕು ಎಂದು ನಿಯಮಗಳಲ್ಲಿ ತಿಳಿಸಲಾಗಿದೆ.

ಭೂ ಪರಿವರ್ತನೆಯಾಗಿದ್ದು, ಬಡಾವಣೆ ನಕ್ಷೆಯೂ ಅನುಮೋದನೆಯಾಗಿರುವ ಖರಾಬು ಜಮೀನುಗಳಿಗೆ ಸಮೀಪದಲ್ಲಿರುವ ಭೂ ಪರಿವರ್ತನೆಯಾಗಿದ್ದು, ನಕ್ಷೆ ಅನುಮೋದನೆಯೊಂದಿಗೆ ಅಭಿವೃದ್ಧಿಪಡಿಸಿರುವ ಜಮೀನಿನ ಮಾರ್ಗಸೂಚಿ ದರವನ್ನೇ (ಚದರ ಅಡಿ ಲೆಕ್ಕದಲ್ಲಿ) ನಿಗದಿ ಮಾಡಬೇಕು ಎಂದು ನಿಯಮಗಳಲ್ಲಿ ಸೂಚಿಸಲಾಗಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರದಿಂದ 18 ಕಿ.ಮೀ. ಹಾಗೂ ಇತರೆ ಮಹಾನಗರ ಪಾಲಿಕೆಗಳ ಕೇಂದ್ರದಿಂದ 5 ಕಿ.ಮೀ ಸುತ್ತಳತೆಯ ಪರಿಧಿಯಲ್ಲಿರುವ ‘ಲ್ಯಾಂಡ್‌ ಲಾಕ್ಡ್‌’ ಖರಾಬು ಜಮೀನುಗಳನ್ನು ಸರ್ಕಾರದ ಹಕ್ಕುಗಳಿಂದ ಮುಕ್ತಗೊಳಿಸಿದ ಬಳಿಕ ಈ ದರದಲ್ಲಿ ಮಾರಾಟ ಮಾಡಲು ಪರಿಷ್ಕೃತ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ಏಕರೂಪ ದರ ನಿಗದಿ: ಇತರ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡುವಾಗ ಅಥವಾ ಗುತ್ತಿಗೆಗೆ ನೀಡುವಾಗ ಏಕರೂಪದ ದರ ನಿಗದಿಗೆ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಗುರುವಾರದಿಂದ ಯಾವುದೇ ಭೂ ಮಂಜೂರಾತಿ ಅಥವಾ ಗುತ್ತಿಗೆ ನೀಡಲು ಈ ದರವನ್ನೇ ಅನ್ವಯಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಶಿಕ್ಷಣ ಮತ್ತು ಕೈಗಾರಿಕಾ ಉದ್ದೇಶದ ಭೂ ಮಂಜೂರಾತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಆಯಾ ಪ್ರದೇಶದ ಮಾರ್ಗಸೂಚಿ ದರದ ಶೇಕಡ 50ರಷ್ಟನ್ನು ವಿಧಿಸಬೇಕು. ಇತರ ವರ್ಗದ ಜನರಿಗೆ ಮಾರುಕಟ್ಟೆ ದರದಲ್ಲಿ ಜಮೀನು ಹಂಚಿಕೆ ಮಾಡಬೇಕು.

ಸೇವಾ ಚಟುವಟಿಕೆಗಳಿಗೆ ಭೂ ಮಂಜೂರಾತಿ ಮಾಡುವಾಗ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ಮಾರ್ಗಸೂಚಿ ದರದ ಶೇ 10ರಷ್ಟು ಹಾಗೂ ಇತರರಿಗೆ ಮಾರುಕಟ್ಟೆ ದರದ ಶೇ 25ರಷ್ಟು ದರ ನಿಗದಿ ಮಾಡಲಾಗಿದೆ. ಧಾರ್ಮಿಕ ಚಟುವಟಿಕೆಗಳಿಗೆ ಜಮೀನು ಮಂಜೂರು ಮಾಡುವಾಗ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ಮಾರ್ಗಸೂಚಿ ದರದ ಶೇ 25 ಹಾಗೂ ಇತರರಿಗೆ ಮಾರ್ಗಸೂಚಿ ದರದ ಶೇ 50ರಷ್ಟು ದರ ನಿಗದಿಪಡಿಸಲಾಗಿದೆ.

ಕೃಷಿ ಉದ್ದೇಶಕ್ಕೆ ಗುತ್ತಿಗೆ ನೀಡುವಾಗ ಎಲ್ಲ ವರ್ಗದವರಿಗೂ ಭೂ ಕಂದಾಯದ 20 ಪಟ್ಟು ಬಾಡಿಗೆ ನಿಗದಿ ಮಾಡಬೇಕು. ಕೃಷಿಯೇತರ ಮತ್ತು ಉಳಿದ ಎಲ್ಲ ಉದ್ದೇಶಗಳಿಗೆ ಗುತ್ತಿಗೆ ನೀಡುವಾಗ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರಿಗೆ ಮಾರ್ಗಸೂಚಿ ದರದ ಶೇ 2.5ರಷ್ಟು ಹಾಗೂ ಇತರರಿಗೆ ಮಾರುಕಟ್ಟೆ ದರದ ಶೇ 2.5ರಷ್ಟು ದರ ನಿಗದಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT