ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಮೋದಿ ರಾಜ್ಯ ಪ್ರವಾಸ: ಬಿಡುವಿಲ್ಲದ ಕಾರ್ಯಕ್ರಮ, ಬಿಗಿ ಬಂದೋಬಸ್ತ್‌

ಬಿಡುವಿಲ್ಲದ ಕಾರ್ಯಕ್ರಮ; ಬಿಗಿ ಬಂದೋಬಸ್ತ್‌
Last Updated 19 ಜೂನ್ 2022, 18:56 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸೋಮವಾರದಿಂದ (ಜೂನ್ 20) ಎರಡು ದಿನ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಬೆಂಗಳೂರಿನಲ್ಲಿ ವಿವಿಧ ರಸ್ತೆಗಳ ಮೂಲಸೌಕರ್ಯ ಮತ್ತು ರೈಲ್ವೆ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲಿದ್ದು, ಈ ಎಲ್ಲ ಯೋಜನೆಗಳ ಒಟ್ಟು ಮೌಲ್ಯ ₹27,000 ಕೋಟಿ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.

ಸೋಮವಾರ ಬೆಳಿಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿರುವ ಮೆದುಳು ಸಂಶೋಧನಾ ಕೇಂದ್ರ ಮತ್ತು ಸೂಪರ್‌ ಕಂಪ್ಯೂಟಿಂಗ್‌ ಸೌಲಭ್ಯವನ್ನು ಉದ್ಘಾಟಿಸುವರು. ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದ (ಬೇಸ್) ನೂತನ ಕ್ಯಾಂಪಸ್‌ ಅನ್ನು ಮೋದಿ ಉದ್ಘಾಟಿಸಲಿದ್ದಾರೆ. ಅಲ್ಲದೆ, ಉನ್ನತೀಕರಿಸಿದ 150 ಐಟಿಐಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಬಳಿಕ ಕೆಂಗೇರಿ ಬಳಿಯ ಕೊಮ್ಮಘಟ್ಟದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬೈಯ್ಯಪ್ಪನಹಳ್ಳಿಯ ಹವಾನಿಯಂತ್ರಿತ ರೈಲು ನಿಲ್ದಾಣ ಉದ್ಘಾಟಿಸುವರು. ಅಲ್ಲಿ ಅವರು, ಬೆಂಗಳೂರು ಸಬ್ಅರ್ಬನ್ ರೈಲು ಯೋಜನೆ ಮತ್ತು ಆರು ರಾಷ್ಟ್ರೀಯ ಹೆದ್ದಾರಿ ಯೋಜನೆ ಮತ್ತು ಲಾಜಿಸ್ಟಿಕ್ ಪಾರ್ಕ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಜೆ ಮೈಸೂರಿಗೆ ತೆರಳಲಿರುವ ಪ್ರಧಾನಿ, ಅಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ನಾಗನಹಳ್ಳಿ ಮತ್ತು ಮೈಸೂರಿನಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಕೋಚಿಂಗ್‌ ಸಂಕೀರ್ಣಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ.

ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳ ಜೊತೆ ಸಂವಾದವನ್ನೂ ನಡೆಸಲಿದ್ದಾರೆ. ಅಖಿಲ ಭಾರತ ವಾಕ್‌– ಶ್ರವಣ ಸಂಸ್ಥೆ (ಆಯಿಷ್‌) ನಿರ್ಮಿಸಿರುವ ‘ಉತ್ಕೃಷ್ಟತಾ ಕೇಂದ್ರ’ ಉದ್ಘಾಟಿಸಲಿದ್ದಾರೆ.

ನಗರ ಕೇಂದ್ರ ರೈಲು ನಿಲ್ದಾಣದ ವಿಸ್ತರಣೆ ಕಾಮಗಾರಿಗೂ ಚಾಲನೆ ನೀಡಲಿದ್ದಾರೆ. ಸುತ್ತೂರು ಮಠದಲ್ಲಿ ಸಂಸ್ಕೃತ ಪಾಠಶಾಲೆ ಉದ್ಘಾಟಿಸುವರು. ಚಾಮುಂಡಿ ಬೆಟ್ಟಕ್ಕೂ ಭೇಟಿ ನೀಡಲಿದ್ದಾರೆ.

21 ರಂದು ಬೆಳಿಗ್ಗೆ ಅರಮನೆ ಆವರಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸುವರು. 15 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಆಹ್ವಾನದ ಮೇರೆಗೆ, ಅವರ ನಿವಾಸದಲ್ಲಿ ಉಪಾಹಾರ ಸೇವಿಸುವರು. ಬಳಿಕ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಯೋಗದ ಮಹತ್ವ ಸಾರುವ ವಸ್ತುಪ್ರದರ್ಶನ ಉದ್ಘಾಟಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT