ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದನಕರುಗಳಿಗಷ್ಟೇ ರಕ್ಷಣೆ; ಹೆಣ್ಣು ಮಕ್ಕಳಿಗಿಲ್ಲ: ಬಿಎಸ್‌ಪಿ ಸಂಯೋಜಕ ಆಕಾಶ್ ಆನಂದ್

ಬಹುಜನ ಯುವ ಸಮ್ಮೇಳನದಲ್ಲಿ ಬಿಎಸ್‌ಪಿ ಸಂಯೋಜಕ ಆಕಾಶ್ ಆನಂದ್ ಕಳವಳ
Last Updated 27 ಡಿಸೆಂಬರ್ 2022, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಸರ್ಕಾರದಲ್ಲಿ ದನಕರುಗಳಿಗೆ ಇರುವ ರಕ್ಷಣೆ, ಹೆಣ್ಣು ಮಕ್ಕಳಿಗೆ ಇಲ್ಲ. ಇದು ಬಾಬಾ ಸಾಹೇಬ್ ಅಂಬೇಡ್ಕರ್ ಕಲ್ಪನೆಗೆ ತದ್ವಿರುದ್ಧವಾದ ಭಾರತ’ ಎಂದು ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಆಕಾಶ್ ಆನಂದ್‌ ಕಳವಳ ವ್ಯಕ್ತಪಡಿಸಿದರು.

ಬಹುಜನ ಸಮಾಜ ಪಕ್ಷ ಆಯೋಜಿಸಿದ್ದ ಬಹುಜನ ಯುವ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಗೋವುಗಳ ರಕ್ಷಣೆಗೆ ಕಾಯ್ದೆ ಜಾರಿ ಮಾಡುವ ಬಿಜೆಪಿ, ಹೆಣ್ಣು ಮಕ್ಕಳ ರಕ್ಷಣೆಗೆ ಅಷ್ಟೇ ಆದ್ಯತೆ ನೀಡುತ್ತಿಲ್ಲ. ಅದರ ಪರಿಣಾಮವಾಗಿ ಒಂದೇ ವರ್ಷದಲ್ಲಿ 40 ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಿರುವ ಪ್ರಕರಣಗಳು ವರದಿಯಾಗಿವೆ. ಗೋಮಾತೆಯನ್ನು ರಕ್ಷಣೆ ಮಾಡುವವರಿಗೆ ಭಾರತ ಮಾತೆಯ ರಕ್ಷಣೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ’ ಎಂದು ಪ್ರಶ್ನಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಕರ್ನಾಟಕ ಸರ್ಕಾರ ಹೆಚ್ಚಿಸಿದೆ. ಆದರೆ, ಅದೇ ಪಕ್ಷದ ಕೇಂದ್ರ ಸರ್ಕಾರ ಹಿಂದು– ಮುಂದು ನೋಡುತ್ತಿದೆ. 25 ಲಕ್ಷಕ್ಕೂ ಹೆಚ್ಚು ಬಗರ್ ಹುಕುಂ ಸಾಗುವಳಿದಾರಿಗೆ ಹಕ್ಕು ಪತ್ರ ಸಿಕ್ಕಿಲ್ಲ. 11 ಸಾವಿರ ಹಳ್ಳಿಗಳಲ್ಲಿ ದಲಿತರಿಗೆ ಸ್ಮಶಾನವಿಲ್ಲ. ಹೊಸ ಶಿಕ್ಷಣ ನೀತಿಯಂತೂ ಬಹುಜನ ಸಮಾಜಕ್ಕೆ ವಿರುದ್ಧವಾಗಿದೆ ಎಂದರು.

ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರು ಮಾದರಿ ಸರ್ಕಾರವನ್ನು ಮುನ್ನಡೆಸಿದ್ದರು. ಅದೇ ರೀತಿಯ ಬದಲಾವಣೆಗಳು ಕರ್ನಾಟಕದಲ್ಲೂ ಆಗಬೇಕಿದೆ. ಕಾಂಗ್ರೆಸ್ ಅಥವಾ ಬಿಜೆಪಿಗೆ ಮತ ಹಾಕಿ ಹತಾಶರಾಗುವ ಬದಲು ಬಹುಜನ ಸಮಾಜ ಪಕ್ಷಕ್ಕೆ ಮತ ನೀಡಲು ಜನರ ಮನವೊಲಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಹೇಳಿದರು.

‘ಕಾಂಗ್ರೆಸ್‌ಗೆ ಮತ ಹಾಕಿಸುವವರು ಅಂಬೇಡ್ಕರ್ ವಾದಿಗಳೇ

‘ನೀಲು ಶಾಲು ಹೊದ್ದು ಕಾಂಗ್ರೆಸ್‌ಗೆ ಮತ ಹಾಕಿಸಲು ಹೊರಟಿರುವ ಸಾಮಾಜಿಕ ಸಂಘಟನೆಗಳ ನಾಯಕರು ಅಂಬೇಡ್ಕರ್ ವಾದಿಗಳೇ ಅಥವಾ ಸಂವಿಧಾನ ವಾದಿಗಳೇ’ ಎಂದು ಬಿಎಸ್‌ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಟೀಕಿಸಿದರು.

‘ಡಿ.6ರಂದು 10 ಸಾವಿರದಿಂದ 20 ಸಾವಿರ ಜನರನ್ನು ಸೇರಿಸಿ ಐಕ್ಯತಾ ಸಮಾವೇಶ ನಡೆಸಿದ್ದೀರಿ. ದಲಿತ ಸಂಘಟನೆಗಳು ಒಂದಾಗಿರುವುದು ಸಂತಸ. ಆದರೆ, ಜಾತ್ಯಾತೀತ ಸೋಗಿನ ಕಾಂಗ್ರೆಸ್‌ಗೆ ಮತ ಕೊಡಿಸಲು ಹೊರಟಿರುವುದು ಸರಿಯೇ’ ಎಂದು ಪ್ರಶ್ನಿಸಿದರು

‘ಕಾಂಗ್ರೆಸ್‌ಗೆ ಮತ ಹಾಕಲೇಬೇಡಿ ಎಂದು ಅಂಬೇಡ್ಕರ್ ಹೇಳಿದ್ದರು. ಬಿಜೆಪಿಗೆ ಪರ್ಯಾಯವಾದ ಪಕ್ಷ ಕಾಂಗ್ರೆಸ್ ಅಲ್ಲ. ಬಹುಜನರ ಆಶೋತ್ತರಗಳ ಪರವಾಗಿರುವ ಪಕ್ಷ ಎಂದರೆ ಬಿಎಸ್‌ಪಿ. ಈ ಪಕ್ಷವನ್ನು ಮುನ್ನಡೆಸುವ ಹೊಣೆಯನ್ನು ಆಕಾಶ್ ಆನಂದ್ ಅವರು ಹೊತ್ತಿರುವುದು ಇಡೀ ದೇಶದ ಬಿಎಸ್‌ಪಿ ಕಾರ್ಯಕರ್ತರಲ್ಲಿ ಹೊಸ ಸಂಚಲನ ಉಂಟು ಮಾಡಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT