ಭಾನುವಾರ, ನವೆಂಬರ್ 29, 2020
19 °C
ಬಳ್ಳಾರಿ ಜಿಲ್ಲೆ ವಿಭಜನೆ

ವಿಜಯನಗರ ಜಿಲ್ಲೆ ರಚನೆ | ವಿರೋಧದ ನಡುವೆ ಒಪ್ಪಿಗೆ: ಮತ್ತೆ ಹೋರಾಟಕ್ಕೆ ಸಿದ್ಧತೆ!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಒಂದು ವರ್ಷದ ಹಿಂದೆ ವಿಜಯನಗರ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆ ವಿಭಜನೆಯನ್ನು ಪ್ರಸ್ತಾಪಿಸಿ, ತೀವ್ರ ವಿರೋಧದ ಬಳಿಕ ಕೈಬಿಟ್ಟ ಸರ್ಕಾರ ಈಗ ಅದಕ್ಕೆ ಒಪ್ಪಿಗೆ ನೀಡುವ ಮೂಲಕ ಮತ್ತೆ ಪ್ರತಿಭಟನೆಯನ್ನು ಎದುರಿಸಬೇಕಾಗಿದೆ.

ಅದರೊಂದಿಗೇ, ‘ಜಿಲ್ಲೆ ಹೋಳಾದರೆ ಜಿಲ್ಲೆಯಲ್ಲಿ ಬಿಜೆಪಿಯೂ ಹೋಳಾಗುತ್ತದೆ’ ಎಂಬ ಆತಂಕವನ್ನೂ ವ್ಯಕ್ತಪಡಿಸಿರುವ ಬಿಜೆಪಿ ಶಾಸಕರು ಮುಖ್ಯಮಂತ್ರಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯನಗರ ಜಿಲ್ಲೆ ಸ್ಥಾಪನೆ ಮತ್ತು ಜಿಂದಾಲ್‌ಗೆ ಭೂಮಿ ಮಾರಾಟವನ್ನು ವಿರೋಧಿಸಿ 2019ರಲ್ಲಿ ರಾಜೀನಾಮೆ ನೀಡಿದ್ದ ಅಂದಿನ ಕಾಂಗ್ರೆಸ್‌ ಶಾಸಕ ಆನಂದ್‌ಸಿಂಗ್‌ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆದ್ದಿದ್ದರು. ಅದಾಗಿ ಒಂದು ವರ್ಷ ಪೂರ್ಣಗೊಳಿಸುವ ಮುನ್ನವೇ ಬಳ್ಳಾರಿ ವಿಭಜನೆಗೆ ಸರ್ಕಾರ ಮುಂದಾಗಿದೆ.

ವಿಭಜನೆಯನ್ನು ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಮುಖಂಡರು, ವಿವಿಧ ಸಂಘಟನೆಗಳು ವಿರೋಧಿಸಿದ್ದವು. ಜಿಲ್ಲಾ ಬಂದ್‌ಗೂ ಕರೆ ನೀಡಲಾಗಿತ್ತು. ಆದರೆ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಬಂದ್‌ ಯಶಸ್ವಿಯಾಗಿತ್ತು.

ಹೊಸ ಜಿಲ್ಲೆಗೆ ಸೇರಲಿರುವ ಪಶ್ಚಿಮ ತಾಲ್ಲೂಕುಗಳಲ್ಲಿ ವಿರೋಧ ಇಲ್ಲದಿದ್ದರೂ, ಜಿಲ್ಲಾ ಕೇಂದ್ರ ಯಾವುದಾಗಬೇಕು ಎಂಬ ಬಗ್ಗೆ ಒಮ್ಮತ ಇಲ್ಲ. ಹಗರಿಬೊಮ್ಮನಹಳ್ಳಿ, ಹಡಗಲಿ, ಹೊಸಪೇಟೆ, ಹರಪನಹಳ್ಳಿ– ಪೈಕಿ ನಾಲ್ಕೂ ಕಡೆ ತಮಗೇ ಜಿಲ್ಲಾ ಕೇಂದ್ರಬೇಕು ಎಂಬ ಆಗ್ರಹ, ಪ್ರತಿಭಟನೆಗಳಿಗೂ ಜಿಲ್ಲೆ ಸಾಕ್ಷಿಯಾಗಿದೆ.

ಒಂದೆಡೆ ಹೊಸ ಜಿಲ್ಲೆ ಘೋಷಣೆ ವಿರುದ್ಧ ಪ್ರತಿಭಟನೆ, ಮತ್ತೊಂದೆಡೆ ಜಿಲ್ಲಾ ಕೇಂದ್ರವಾಗಲಿಕ್ಕಾಗಿ ಪ್ರತಿಭಟನೆಗಳೂ ಮತ್ತೆ ಆರಂಭವಾಗುವ ಸೂಚನೆಗಳೂ ಇವೆ.

ಸಂಸದರು: ಸದ್ಯ ಜಿಲ್ಲೆಯಲ್ಲಿ ಒಬ್ಬರು ಸಂಸದರಷ್ಟೇ ಇದ್ದಾರೆ. ಜಿಲ್ಲೆ ವಿಭಜನೆಯಾದರೆ ಇನ್ನೊಂದು ಲೋಕಸಭಾ ಕ್ಷೇತ್ರ ರಚನೆಯಾಗುತ್ತದೆಯೋ, ಅಥವಾ ಬಳ್ಳಾರಿ–ವಿಜಯನಗರ ಕ್ಷೇತ್ರಕ್ಕೆ ಒಬ್ಬರೇ ಸಂಸದರು ಇರುತ್ತಾರೆಯೋ ಎಂಬ ಚರ್ಚೆಯೂ ಆರಂಭವಾಗಿದೆ.

ಸೋಮಶೇಖರ ರೆಡ್ಡಿ ವಾಗ್ದಾಳಿ: ವಿಭಜನೆ ವಿರುದ್ಧ ಹೋರಾಟಕ್ಕೆ ಬೆಂಬಲ!

 ಜಿಲ್ಲೆಯ ವಿಜನೆಗೆ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದ ಬೆನ್ನಿಗೇ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದರು. ವಿಭಜನೆ ವಿರುದ್ಧ ಹೋರಾಟಕ್ಕೆ ಬೆಂಬಲ ನೀಡುವುದಾಗಿಯೂ ಘೋಷಿಸಿದರು.

‘ಜಿಲ್ಲೆಯು ವಿಭಜನೆಯಾದರೆ ಜಿಲ್ಲೆಯಲ್ಲಿ ಬಿಜೆಪಿಯೂ ಎರಡು ಹೋಳಾಗುತ್ತದೆ. ಅಖಂಡ ಜಿಲ್ಲೆಯನ್ನು ವಿಭಜನೆ ‌ಮಾಡಿದ್ದಕ್ಕೆ ಪಕ್ಷವನ್ನು ಜನ ತಿರಸ್ಕರಿಸಿ ತಕ್ಕ ಪಾಠ ಕಲಿಸುತ್ತಾರೆ. ವಿಜಯನಗರ ‌ಜಿಲ್ಲೆ ಬೇಡ ಬೇಡವೆಂದರೂ, ನಿಯೋಗ ತೆಗೆದುಕೊಂಡು ಹೋಗಿ ಹೇಳಿದರೂ ಮುಖ್ಯಮಂತ್ರಿಗೆ ಅರ್ಥವಾಗಿಲ್ಲ. ಇನ್ನೆಷ್ಟು ಬಾರಿ ಹೇಳಬೇಕು’ ಎಂದು ಅವರು ಸುದ್ದಿಗಾರರ ಮುಂದೆ ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

***

ಮುಖ್ಯಮಂತ್ರಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಏನನ್ನಾದರೂ ಮಾಡಲೂ ಸಿದ್ಧ ಎಂಬುದಕ್ಕೆ ಜಿಲ್ಲೆ ವಿಭಜನೆ ನಿರ್ಧಾರವೇ ಸಾಕ್ಷಿ
–ದರೂರು ಪುರುಷೋತ್ತಮಗೌಡ, ತುಂಗಭದ್ರ ರೈತ ಸಂಘ

***

ಹೊಸ ಜಿಲ್ಲೆ ರಚನೆ ಮಾಡುವ ಮೂಲಕ ಬಳ್ಳಾರಿಯನ್ನು ಸರ್ಕಾರ ಹಾಳು ಮಾಡುತ್ತಿದೆ. ಅದಕ್ಕೆ ಅವಕಾಶ ಕೊಡುವುದಿಲ್ಲ.
–ಜಿ.ಎಸ್‌.ಮಹ್ಮದ್‌ ರಫಿಕ್‌, ನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು