ಸೋಮವಾರ, ಮೇ 23, 2022
24 °C
ತನಿಖೆ ಚುರುಕುಗೊಳಿಸಿದ ಸಿಐಡಿ

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ: ಪರೀಕ್ಷಾ ಕೇಂದ್ರಗಳಲ್ಲಿ ಪುರಾವೆಗೆ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ಬೆಂಗಳೂರಿನಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪುರಾವೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖ ಲಾಗಿರುವ ಪ್ರಕರಣದಲ್ಲಿ 22 ಅಭ್ಯರ್ಥಿಗಳ ಪೈಕಿ 18 ಅಭ್ಯರ್ಥಿಗಳನ್ನು ಬಂಧಿಸಿರುವ ಸಿಐಡಿ, ಅವರು ಪರೀಕ್ಷೆ ಬರೆದಿದ್ದ ಕೇಂದ್ರಗಳ ಪಟ್ಟಿ ಸಿದ್ಧಪಡಿಸಿದ್ದಾರೆ. ಇನ್‌ಸ್ಪೆಕ್ಟರ್‌ ನೇತೃತ್ವದ ತಂಡಗಳು, ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ ಹೋಗಿ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಮಲ್ಲೇಶ್ವರ, ಯಲಹಂಕ, ಜಯನಗರ ಸೇರಿದಂತೆ 20ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಿಐಡಿಗೆ ಮಾಹಿತಿ ಲಭ್ಯವಾಗಿದೆ. ಇಂಥ ಕೇಂದ್ರದಲ್ಲಿ ಕೆಲಸ ಮಾಡಿದ್ದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಭದ್ರತೆ ಜವಾಬ್ದಾರಿ ವಹಿಸಿದ್ದ ಪೊಲೀಸರ ಬಗ್ಗೆ ಸಿಐಡಿ ಮಾಹಿತಿ ಪಡೆದುಕೊಳ್ಳುತ್ತಿದೆ. ಎಲ್ಲರಿಗೂ ನೋಟಿಸ್‌ ನೀಡಿದ್ದು, ಕೆಲವರನ್ನು ಶನಿವಾರ ವಿಚಾರಣೆ ಮಾಡಿದೆ.

‘ಬಂಧಿತ ಅಭ್ಯರ್ಥಿಗಳ ಜೊತೆಯಲ್ಲೇ ಕೇಂದ್ರಗಳಿಗೆ ಹೋಗಿ ಮಹಜರು ಮಾಡಿಕೊಳ್ಳಲಾಗಿದೆ. ಕೇಂದ್ರಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಸೂಕ್ತ ‍ಪುರಾವೆಗಳು ಸದ್ಯಕ್ಕೆ ಸಿಕ್ಕಿಲ್ಲ. ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಹೆಸರು ಮಾತ್ರ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದೆ. ಹೀಗಾಗಿ, ಒಎಂಆರ್ ಪ್ರತಿ ತಿದ್ದಿರುವ ಜಾಗ ಯಾವುದು? ಎಂಬುದನ್ನು ತಿಳಿಯಲು ತನಿಖೆ ಮುಂದುವರಿಸಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ವಿಚಾರಣೆಗೆ ಹಾಜರು: ಸಿಐಡಿ ಅಧಿಕಾರಿಗಳ ಆರಂಭದ ವಿಚಾರಣೆ ಯಲ್ಲಿ ಗೈರಾಗಿದ್ದ ಅಭ್ಯರ್ಥಿಗಳಿಗೆ ಎರಡನೇ ಬಾರಿ ನೋಟಿಸ್ ನೀಡ
ಲಾಗಿದೆ. ಆ ಪೈಕಿ 16 ಅಭ್ಯರ್ಥಿಗಳು, ಶನಿವಾರ ವಿಚಾರಣೆಗೆ ಹಾಜರಾಗಿ ತಮ್ಮ ಒಎಂಆರ್ ಪ್ರತಿ ಹಾಗೂ ಇತರೆ ದಾಖಲೆಗಳನ್ನು ಸಿಐಡಿ ಅಧಿಕಾರಿಗಳಿಗೆ ನೀಡಿದರು. ಅಧಿಕಾರಿಗಳು ಅವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

‘ಪತ್ರಿಕೆ –2ರಲ್ಲಿ (ಸಾಮಾನ್ಯ ಅಧ್ಯಯನ) 150 ಅಂಕಗಳ ಪೈಕಿ 125ಕ್ಕಿಂತ ಹೆಚ್ಚು ಅಂಕ ಪಡೆದವರ ಮೇಲೆ ಹೆಚ್ಚು ಅನುಮಾನವಿದೆ. ಹೀಗಾಗಿ, ಅವರೆಲ್ಲರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ಪೊಲೀಸರ ಮೇಲೆ ನಿಗಾ: ಅಕ್ರಮದಲ್ಲಿ ಪೊಲೀಸರು ಭಾಗಿಯಾಗಿರುವ ಬಗ್ಗೆ ಬಂಧಿತ ಅಭ್ಯರ್ಥಿಗಳು ಮಾಹಿತಿ ನೀಡಿರುವುದಾಗಿ ಗೊತ್ತಾಗಿದ್ದು, ಅಂಥ ಪೊಲೀಸರ ಮೇಲೆ ಸಿಐಡಿ ನಿಗಾ ವಹಿಸಿದೆ.

ಅಭ್ಯರ್ಥಿಗಳಿಂದ ಹಣ ಪಡೆದಿದ್ದ ಏಜೆಂಟರು, ಮಧ್ಯವರ್ತಿಗಳು ಹಾಗೂ ಅವರ ಜೊತೆ ಒಡನಾಟ ಹೊಂದಿದ್ದ ಕೆಲ ಪೊಲೀಸರಿಗೆ ಸಿಐಡಿ ಈಗಾಗಲೇ ನೋಟಿಸ್ ನೀಡಿದೆ. ವಿಚಾರಣೆಗೆ ಬರುವಂತೆ ಹೇಳಿರುವುದಾಗಿ ಗೊತ್ತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು