ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಸಚಿವ ಜ್ಞಾನೇಂದ್ರ ರಾಜೀನಾಮೆಗೆ ಬಿ.ಕೆ. ಹರಿಪ್ರಸಾದ್‌ ಆಗ್ರಹ

Last Updated 29 ಏಪ್ರಿಲ್ 2022, 12:38 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಹೊಣೆ ಹೊತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಆಗ್ರಹಿಸಿದ್ದಾರೆ.‌

ಪಿಎಸ್‌ಐ ನೇಮಕಾತಿಗೆ ಮರು ಪರೀಕ್ಷೆ ನಡೆಸುವ ತೀರ್ಮಾನವನ್ನು ಗೃಹ ಸಚಿವರು ಶುಕ್ರವಾರ ಪ್ರಕಟಿಸಿದ ಬಳಿಕ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಅವರು, ‘ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮವೇ ನಡೆದಿಲ್ಲ ಎಂದು ಗೃಹ ಸಚಿವರು ಪದೇ ಪದೇ ಹೇಳಿಕೆ ನೀಡಿದ್ದರು. ಈಗ ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡು ಪರೀಕ್ಷೆಯನ್ನೇ ರದ್ದು ಮಾಡಿದ್ದಾರೆ. ಇನ್ನು ಯಾವ ನೈತಿಕತೆಯ ಆಧಾರದ ಮೇಲೆ ಗೃಹ ಸಚಿವರ ಹುದ್ದೆಯಲ್ಲಿ ಮುಂದುವರಿಯುತ್ತಾರೆ’ ಎಂದು ಪ್ರಶ್ನಿಸಿದ್ದಾರೆ.

‘ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ ಕರ್ನಾಟಕ ಪೊಲೀಸ್‌ ಇಲಾಖೆಯ ಜಂಘಾಬಲವೇ ಕುಸಿಯುವಂತೆ ಮಾಡಿದ್ದೀರಿ. ನಿಮಗೆ ನೈತಿಕ ರಾಜಕೀಯ ಮೌಲ್ಯವೇ ಗೊತ್ತಿಲ್ಲದಿದ್ದರೆ ಪರವಾಗಿಲ್ಲ. ಗೃಹ ಸಚಿವಸ್ಥಾನಕ್ಕೆ ತನ್ನದೇ ಆದ ಘನತೆ, ಗೌರವಗಳಿವೆ. ಹೆಚ್ಚು ಮಾತಾಡದೆ ಈಶ್ವರಪ್ಪ ಮಾದರಿಯಲ್ಲಿ ‘ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ರಾಜ್ಯಪಾಲರಿಗೆ ರಾಜೀನಾಮೆ ನೀಡಿ ಕುರ್ಚಿ ಖಾಲಿ ಮಾಡಿ’ ಎಂದು ಒತ್ತಾಯಿಸಿದ್ದಾರೆ.

‘ಜ್ಞಾನೇಂದ್ರ ಅವರಿಗೆ ಎರಡು ನಾಲಿಗೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ವಿಧಾನ ಪರಿಷತ್‌ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ. ಹಗರಣವೇ ನಡೆದಿಲ್ಲ ಎಂದು ಗೃಹ ಸಚಿವರು ಎದೆತಟ್ಟಿ ಹೇಳಿದ್ದರು. ಈಗ, ‘ಪಿಎಸ್‌ಐ ನೇಮಕಾತಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ನೇಮಕಾತಿ ರದ್ದುಪಡಿಸಿ, ಮರು ಪರೀಕ್ಷೆ ನಡೆಸುತ್ತೇವೆ’ ಎಂದು ನಡುಬಗ್ಗಿಸಿ ಹೇಳಿಕೆ ನೀಡಿದ್ದಾರೆ. ಹಾವಿಗೆ ಇರುವಂತೆ ಹಾವಿನಪುರದವರಿಗೂ ಎರಡು ನಾಲಿಗೆ ಇದೆ ಎಂಬುದನ್ನು ಗೃಹ ಸಚಿವರು ಸಾಬೀತು ಮಾಡಿದ್ದಾರೆ’ ಎಂದು ಹರಿಪ್ರಸಾದ್‌ ವಾಗ್ದಾಳಿ ನಡೆಸಿದ್ದಾರೆ.

‘ದಯವಿಟ್ಟು ವಿಚಾರಣೆಗೆ ಬನ್ನಿ ಎಂದು ಅಕ್ರಮದಲ್ಲಿ ಭಾಗಿಯಾದವರನ್ನು ತಾಂಬೂಲ ಕೊಡುವ ಮಾದರಿಯಲ್ಲಿ ಕರೆಯುವಂತಹ ಅದಕ್ಷ ಗೃಹ ಸಚಿವರನ್ನು ನನ್ನ ರಾಜಕೀಯ ಜೀವನದಲ್ಲಿ ಯಾವತ್ತೂ ನೋಡಿಲ್ಲ. ಗೃಹ ಸಚಿವರ ಗಮನಕ್ಕೆ ಬಾರದೆ ಇಂತಹ ಅಕ್ರಮ ನಡೆಯಲು ಸಾಧ್ಯವೆ? ಗೃಹ ಇಲಾಖೆಯಲ್ಲಿನ ಅಕ್ರಮಗಳನ್ನೇ ತಡೆಯಲು ಸಾಧ್ಯವಾಗದ ಮೇಲೆ ಸಚಿವ ಸ್ಥಾನದಲ್ಲಿ ಮುಂದುವರಿಯುವುದು ಹೇಗೆ ಎಂಬ ನೈತಿಕತೆಯ ಪ್ರಶ್ನೆ ಕಾಡುವುದಿಲ್ಲವೆ’ ಎಂದು ಪ್ರಶ್ನಿಸಿದ್ದಾರೆ.

ಮರು ಪರೀಕ್ಷೆಯಲ್ಲಿ ಈ ಹಿಂದೆ ಪರೀಕ್ಷೆ ಬರೆದವರಿಂದ ಮತ್ತೆ ಶುಲ್ಕ ಕಟ್ಟಿಸಿಕೊಳ್ಳಬಾರದು ಎಂಬ ಆಗ್ರಹವನ್ನೂ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT