ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಉಪನ್ಯಾಸಕರ ನೇಮಕಾತಿ: ಕೌನ್ಸೆಲಿಂಗ್‌ ಮುಂದೂಡಿಕೆ

Last Updated 14 ಆಗಸ್ಟ್ 2020, 22:15 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕರ ಹುದ್ದೆಯ ಸ್ಥಳ ನಿಗದಿ ಕೌನ್ಸೆಲಿಂಗ್‌ ಮುಂದೂಡಿಕೆಯಾಗಿದೆ. ಮುಂದಿನ ದಿನಾಂಕವನ್ನು ಆ.20ರ ನಂತರ ತಿಳಿಸಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಹೇಳಿದೆ.

ಆ. 10ರಿಂದ ನಾಲ್ಕು ದಿನ ಕೌನ್ಸೆಲಿಂಗ್‌ ಪ್ರಾರಂಭಿಸಿದ್ದ ಇಲಾಖೆಯು, ಹೈದರಾಬಾದ್‌ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕವಲ್ಲದ ಪ್ರದೇಶಗಳ 268 ಉಪನ್ಯಾಸಕರಿಗೆ ಸ್ಥಳ ನಿಯೋಜನೆ ಮಾಡಿದೆ. ಇನ್ನೂ, 935 ಉಪನ್ಯಾಸಕರಿಗೆ ಸ್ಥಳ ನಿಯೋಜನೆ ಮಾಡಬೇಕಾಗಿತ್ತು. ಇಂಗ್ಲಿಷ್‌ ಮತ್ತು ಕನ್ನಡ ವಿಷಯದ ಉಪನ್ಯಾಸಕರಿಗೆ ಮಾತ್ರ ಸ್ಥಳ ನಿಯೋಜನೆ ಮಾಡಲಾಗಿದೆ.

‘1,203 ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿ ಐದು ವರ್ಷಗಳಾದವು. ಹಲವು ಕಾರಣಗಳಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ. ಈಗ ಕೌನ್ಸೆಲಿಂಗ್‌ ಪ್ರಾರಂಭವಾಗಿದ್ದು ಸಂತಸ ತಂದಿತ್ತು. ನಾಲ್ಕೇ ದಿನಕ್ಕೆ ಕೌನ್ಸೆಲಿಂಗ್‌ ಮುಂದೂಡಿರುವುದು ತುಂಬಾ ಬೇಸರ ತಂದಿದೆ’ ಎಂದು ಅರ್ಥಶಾಸ್ತ್ರ ವಿಷಯದ ಉಪನ್ಯಾಸಕ ಹುದ್ದೆಗೆ ಆಯ್ಕೆಯಾಗಿರುವ ಪರಶುರಾಮ್‌ ಬೇಸರ ವ್ಯಕ್ತಪಡಿಸಿದರು.

‘ನಾಲ್ಕು ದಿನಗಳಲ್ಲಿ ಕೌನ್ಸೆಲಿಂಗ್ ನಡೆಸಿದ್ದರೂ, ತುಂಬಾ ನಿಧಾನವಾಗಿ ಕೆಲಸ ಮಾಡಿದರು. ಈಗ, ಆ.20ಕ್ಕೆ ಮುಂದಿನ ದಿನಾಂಕ ತಿಳಿಸುವುದಾಗಿ ವೆಬ್‌ಸೈಟ್‌ನಲ್ಲಿ ಹಾಕಿದ್ದಾರೆ. ಅಧಿಕಾರಿಗಳು ಕೆಲಸ ಮಾಡುವ ವೇಗ ನೋಡಿದರೆ, ಇನ್ನೂ ಒಂದು ತಿಂಗಳಾದರೂ ಕೌನ್ಸೆಲಿಂಗ್‌ ಮುಗಿಯುವ ಲಕ್ಷಣವಿಲ್ಲ’ ಎಂದು ಅವರು ಹೇಳಿದರು.

‘ಅಭ್ಯರ್ಥಿಗಳಿಗೆ ವಿಡಿಯೊ ಸಂವಾದದ ಮೂಲಕ ಕೌನ್ಸೆಲಿಂಗ್‌ ನಡೆಸಲಾಗುತ್ತಿತ್ತು. ಆದರೆ, ವಿಡಿಯೊ ಸಂವಾದ ನಡೆಸಲು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಯ ಕೆ–ಸ್ವಾನ್‌ ಕೊಠಡಿಗಳು ಸದ್ಯಕ್ಕೆ ಲಭ್ಯವಿಲ್ಲ. ಹೀಗಾಗಿ, ಕೌನ್ಸೆಲಿಂಗ್ ಮುಂದೂಡಲಾಗಿದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಎಂ.ಕನಗವಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT