ಮಂಗಳವಾರ, ಫೆಬ್ರವರಿ 7, 2023
27 °C
ಪ್ರತಿ ಪುಟಕ್ಕೆ 30 ಪೈಸೆ ಹೆಚ್ಚಳದ ಆದೇಶ ಹೊರಡಿಸಲು ಆಗ್ರಹ

ಪ್ರಭಾವಿ ಅಧಿಕಾರಿ ಬಳಿ ಕಡತ: ಕಷ್ಟದಲ್ಲಿ ಪ್ರಕಾಶಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾರ್ವಜನಿಕ ಗ್ರಂಥಾಲಯಕ್ಕೆ ಪೂರೈಕೆ ಮಾಡುವ ಪುಸ್ತಕಗಳ ಪುಟವಾರು ದರ ಏರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ, ಮುಖ್ಯಮಂತ್ರಿ ಸಚಿವಾಲಯ ಪ್ರಭಾವಿ ಅಧಿಕಾರಿಯೊಬ್ಬರು ಇದಕ್ಕೆ ಸಂಬಂಧಿಸಿದ ಕಡತವನ್ನು ತಮ್ಮ ಬಳಿಯೇ ಇಟ್ಟುಕೊಂಡ ಪರಿಣಾಮ ಅಂತಿಮ ಆದೇಶ ಹೊರಬೀಳದೇ ಕನ್ನಡ ಪುಸ್ತಕೋದ್ಯಮ ಇಕ್ಕಟ್ಟಿಗೆ ಸಿಲುಕಿದೆ.

ಈ ಹಿಂದೆ ಒಂದು ಪುಟಕ್ಕೆ 70 ಪೈಸೆ ಇತ್ತು. ಮುದ್ರಣ ಕಾಗದದ ಬೆಲೆ ಏರಿಕೆ, ಮುದ್ರಣದ ವೆಚ್ಚ ಹೆಚ್ಚಳವನ್ನು ಪರಿಗಣಿಸಿ ರಾಜ್ಯ ಸರ್ಕಾರ ಅಂತಿಮವಾಗಿ 30 ಪೈಸೆ ಹೆಚ್ಚಿಸಲು ಒಪ್ಪಿಗೆ ನೀಡಿದೆ. ಇದರಿಂದ ಒಂದು ಪುಟದ ಬೆಲೆ ₹1 ಆಗಲಿದೆ. 

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಹಳ್ಳಿ , ‘ದರ ಏರಿಕೆಗಾಗಿ ಹಲವು ವರ್ಷಗಳಿಂದ ಪ್ರಯತ್ನ ನಡೆಸಿದ್ದೆವು. ಕಳೆದ ವರ್ಷ ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸಿತು. ಇದಕ್ಕೆ ಹಣಕಾಸು ಇಲಾಖೆಯೂ ಒಪ್ಪಿಗೆ ನೀಡಿತ್ತು. ಅಂತಿಮವಾಗಿ ಮುಖ್ಯಮಂತ್ರಿಯವರೂ ಸಮ್ಮತಿಸಿದರು. ಆದರೆ, ಹಿರಿಯ ಅಧಿಕಾರಿ ಕಡತವನ್ನು ತಮ್ಮ ಬಳಿಯೇ ಉಳಿಸಿಕೊಂಡಿರುವುದರಿಂದ, ಅಂತಿಮ ಆದೇಶ ಹೊರಬೀಳದೇ ದರ ಏರಿಕೆ ಜಾರಿ ತಡವಾಗುತ್ತಿದೆ. ಇದರಿಂದ ನಷ್ಟಕ್ಕೀಡಾಗುತ್ತಿದ್ದೇವೆ’ ಎಂದು ಹೇಳಿದರು.

‘ಸರ್ಕಾರ ಆದಷ್ಟು ಬೇಗ ದರ ಏರಿಕೆಯನ್ನು ಜಾರಿಗೊಳಿಸಬೇಕು. ಉದ್ಯಮ ಈಗಾಗಲೇ ನಷ್ಟದಲ್ಲಿ ನಡೆಯುತ್ತಿದೆ. ಅದರಲ್ಲೂ ಪುಸ್ತಕೋದ್ಯಮಕ್ಕೆ ಜಿಎಸ್‌ಟಿ ಹೊರೆ ಅಧಿಕವಾಗಿದೆ. ಕೇಂದ್ರ ಸರ್ಕಾರ ರಾಯಧನದ (ರಾಯಲ್ಟಿ) ಮೇಲೆ ಜಿಎಸ್‌ಟಿ ಶೇ 12 ರಿಂದ ಶೇ 18 ಕ್ಕೆ ಏರಿಕೆ ಮಾಡಿದೆ. ಮುದ್ರಣ ಕಾಗದದ ಮೇಲಿನ ಜಿಎಸ್‌ಟಿ ಶೇ 5 ರಿಂದ ಶೇ 18 ಕ್ಕೆ ಏರಿಕೆ ಆಗಿದೆ. ಜಾಬ್‌ ವರ್ಕ್‌ ಜಿಎಸ್‌ಟಿಯೂ ಶೇ 18 ಕ್ಕೆ ನಿಗದಿ ಮಾಡಲಾಗಿದೆ. ರಷ್ಯಾ– ಉಕ್ರೇನ್‌ ಯುದ್ಧದ ಕಾರಣ ಮುದ್ರಣ ಕಾಗದದ ಬೆಲೆಯೂ ದುಪ್ಪಟ್ಟಾಗಿದೆ’ ಎಂದರು.

ಪ್ರಕಾಶಕರ ಸಂಘದ ಪದಾಧಿಕಾರಿ ಸೃಷ್ಟಿ ನಾಗೇಶ್‌, ಮುಖ್ಯಕಾರ್ಯದರ್ಶಿ, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ದರ ಏರಿಕೆಗೆ ಒಪ್ಪಿಗೆ ನೀಡಿ ಸಹಿ ಹಾಕಿದ್ದಾರೆ. ಕಷ್ಟಪಟ್ಟು ಒಪ್ಪಿಸಿ 30 ಪೈಸೆ ಹೆಚ್ಚಿಸಿಕೊಳ್ಳಲಾಗಿದೆ. ಆದರೆ, ಕಡತವನ್ನು ತಮ್ಮ ಬಳಿ ಇಟ್ಟುಕೊಂಡಿರುವ ಅಧಿಕಾರಿಯನ್ನು ಹಲವು ಬಾರಿ ಭೇಟಿ ಮಾಡಿ, ಮಾತನಾಡಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಮುಖ್ಯಮಂತ್ರಿಯವರೇ ಮಧ್ಯ ಪ್ರವೇಶಿಸಬೇಕು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು