ಬುಧವಾರ, ಜನವರಿ 26, 2022
26 °C

ಪುತ್ತೂರು ಮಾಜಿ ಶಾಸಕ ಕೆ. ರಾಮ ಭಟ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಕ್ಷಿಣ ಕನ್ನಡ ಅವಿಭಜಿತ ಜಿಲ್ಲೆಯ ‘ಬಿಜೆಪಿಯ ಭೀಷ್ಮ’ ಎಂದೇ ಕರೆಯಲಾಗುತ್ತಿದ್ದ, ಪುತ್ತೂರಿನ ಮಾಜಿ ಶಾಸಕ ಉರಿಮಜಲು ಕೆ.ರಾಮ ಭಟ್ (92) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

‘ರಾಮಭಟ್ ಅವರು ಕರ್ನಾಟಕದಲ್ಲಿ ಬಿಜೆಪಿ ಬಲಪಡಿಸಲು ಸಾಕಷ್ಟು ಶ್ರಮ ವಹಿಸಿದ್ದರು. ಜನಸಂಘ ಮತ್ತು ಬಿಜೆಪಿಯ ಇತಿಹಾಸದಲ್ಲಿ ರಾಮಭಟ್ ಅವರಿಗೆ ಸದಾ ವಿಶೇಷ ಸ್ಥಾನ ಇದ್ದೇ ಇರುತ್ತದೆ’ ಎಂದು ಪ್ರಧಾನಿ ಮೋದಿ ತಮ್ಮ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.

ವಯೋ ಸಹಜ ಅನಾರೋಗ್ಯದಿಂದಾಗಿ ರಾಮ ಭಟ್ ದಕ್ಷಿಣ ಕನ್ನಡ -ಜಿಲ್ಲೆಯ ಪುತ್ತೂರಿನ ಕೊಂಬೆಟ್ಟಿನ ಅವರ ಮನೆಯಲ್ಲಿ ಸೋಮವಾರ ನಿಧನರಾಗಿದ್ದರು.

ಪುತ್ತೂರು ವಿಧಾನಸಭಾ ಕ್ಷೇತ್ರದಿಂದ 7ಬಾರಿ ಸ್ಪರ್ಥಿಸಿದ್ದ ರಾಮ ಭಟ್ ಅವರು, 1977 ಮತ್ತು 1983ರಲ್ಲಿ ಗೆಲುವು ಸಾಧಿಸಿದ್ದರು. 1957ರಲ್ಲಿ ಮೊದಲ ಬಾರಿಗೆ ಜನಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, 1985ರಲ್ಲಿ ಕೊನೆಯ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಜನಸಂಘ ಮತ್ತು ಆ ಬಳಿಕ ಬಿಜೆಪಿಯ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಮ ಭಟ್ ಅವರು ಹಲವು ನಾಯಕರನ್ನು ಬೆಳೆಸಿದ್ದರು.

ಪ್ರೌಢಶಿಕ್ಷಣದ ವಿದ್ಯಾರ್ಥಿ ದೆಸೆಯಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದವರು. ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ರಾಷ್ಟ್ರ ಮಟ್ಟದ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರೇ ರಾಮ ಭಟ್ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು.

ಅವರಿಗೆ ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಮಂಗಳವಾರ ಬೆಳಿಗ್ಗೆ ಪುತ್ತೂರಿನ ಹಿಂದೂ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕಟುಂಬದವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು