ಶುಕ್ರವಾರ, ಸೆಪ್ಟೆಂಬರ್ 24, 2021
24 °C
ರಾಜ್ಯದ ಆರ್ಥಿಕ ಸ್ಥಿತಿ–ಗತಿ ಎತ್ತ ಸಾಗುತ್ತಿದೆ? –ಆರ್ಥಿಕ ನೀತಿ ಕುರಿತು ಚರ್ಚೆ

‘ಸಾಲ ಮಾಡಿ ತುಪ್ಪ ತಿನ್ನುವ ಆರ್ಥಿಕ ನೀತಿ’: ರಾಜ್ಯದ ಆರ್ಥಿಕ ಸ್ಥಿತಿಯ ವಿಶ್ಲೇಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಯಿ ಅಧಿಕಾರ ವಹಿಸಿಕೊಂಡಿರುವ ಸಂದರ್ಭದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ. ಸಾಲದ ಹೊರೆ ಎಷ್ಟಿದೆ, ತೆರಿಗೆ ಸಂಗ್ರಹ ಹೇಗಿದೆ, ಮಾಡುತ್ತಿರುವ ವೆಚ್ಚ ಎಷ್ಟು?

‘ಪ್ರಜಾವಾಣಿ’ ಸೋಮವಾರ ಹಮ್ಮಿಕೊಂಡಿದ್ದ ‘ರಾಜ್ಯದ ಆರ್ಥಿಕ ಸ್ಥಿತಿ–ಗತಿ ಎತ್ತ ಸಾಗುತ್ತಿದೆ’ ಸಂವಾದದಲ್ಲಿ ಐಸೆಕ್ ನಿವೃತ್ತ ನಿರ್ದೇಶಕ ಆರ್.ಎಸ್. ದೇಶಪಾಂಡೆ, ಸಾರ್ವಜನಿಕ ನೀತಿ ವಿಶ್ಲೇಷಕ ಕೆ.ಸಿ.ರಘು, ಹಿರಿಯ ಪತ್ರಕರ್ತ ಪಿ.ಎಂ.ರಘುನಂದನ್ ಅವರು ಹಂಚಿಕೊಂಡ ಅಭಿಪ್ರಾಯಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ಆಡಳಿತ ವೆಚ್ಚ ಕಡಿಮೆಯಾಗಬೇಕು

ರಾಜ್ಯದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ನಿರೀಕ್ಷಿತ ವರಮಾನ ಬರುತ್ತಿಲ್ಲ. 2011 ರಿಂದ 2021 ತನಕ ನೋಡಿದರೆ ಸ್ವಂತ ವರಮಾನ ಕಡಿಮೆಯಾಗುತ್ತಿದೆ. ವರಮಾನ ಸಂಗ್ರಹಿಸುವ ಶ್ರಮ ಕಡಿಮೆಯಾಗುತ್ತಿದೆ. ವಿತ್ತೀಯ ಕೊರತೆ ಹೆಚ್ಚಾಗುತ್ತಿದೆ. ಸಾಲ ಮಾಡಿಯಾದರೂ ತುಪ್ಪ ತಿನ್ನಿ ಎಂಬ ನೀತಿಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದೆ. ಅಭಿವೃದ್ಧಿ ಬದಲಿಗೆ ಜನರನ್ನು ಮರಳು ಮಾಡುವ ಯೋಜನೆಗಳಿಗೇ ಹೆಚ್ಚು ವೆಚ್ಚ ಮಾಡಲಾಗುತ್ತಿದೆ. 30 ವರ್ಷಗಳಲ್ಲಿ ತೆರೆದಿರುವ ಸರ್ಕಾರಿ ಮತ್ತು ಖಾಸಗಿ ಶಾಲೆ, ಕಾಲೇಜು, ಆಸ್ಪತ್ರೆಗಳ ಸಂಖ್ಯೆಯನ್ನು ಗಮನಿಸಿದರೆ ಸರ್ಕಾರ ಯಾವ ಕ್ಷೇತ್ರಕ್ಕೆ ಹೆಚ್ಚು ವೆಚ್ಚ ಮಾಡುತ್ತಿದೆ ಎಂಬುದು ಅರ್ಥವಾಗುತ್ತದೆ. ಅನುತ್ಪಾದಕ ವೆಚ್ಚ ಹೆಚ್ಚಿದೆ. 2011ರಲ್ಲಿ ₹91 ಸಾವಿರ ಕೋಟಿಗಳಷ್ಟಿದ್ದ ಸಾಲ ಈಗ ಮೂರು ಪಟ್ಟು ಏರಿದೆ. ಆರ್ಥಿಕ ಶಿಸ್ತು ಕಾಪಾಡಬೇಕು. ಆಡಳಿತಾತ್ಮಕ ವೆಚ್ಚ ಕುಗ್ಗಿಸಬೇಕು.

 ಆರ್.ಎಸ್.ದೇಶಪಾಂಡೆ, ನಿವೃತ್ತ ನಿರ್ದೇಶಕ ಐಸೆಕ್

ಆರೋಗ್ಯ, ಶಿಕ್ಷಣ ಕ್ಷೇತ್ರದ ನಿರ್ಲಕ್ಷ್ಯ

ಸರ್ಕಾರಕ್ಕೆ ಬರುತ್ತಿರುವ ವರಮಾನದಲ್ಲಿ ಸಂಬಳ ಬಡ್ಡಿಗೆ ಸರಿ ಹೊಂದುತ್ತಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಸಾಲ ಮಾಡುವುದೊಂದೇ ದಾರಿ ಎಂಬಂತಾಗಿದೆ. ಬಂಡವಾಳ ಹೂಡದೆ ಯಾವುದೇ ದೇಶ ಅಥವಾ ರಾಜ್ಯ ಅಭಿವೃದ್ಧಿ ಆಗುವುದಿಲ್ಲ. ತಲಾ ಆದಾಯ, ಸಂಪನ್ಮೂಲ, ತೆರಿಗೆ ಸಂಗ್ರಹ ನೋಡಿದರೆ ಕರ್ನಾಟಕ ಸಂಪದ್ಭರಿತ ರಾಜ್ಯ. ಆದರೂ, ಆರ್ಥಿಕ ಸ್ಥಿತಿ ತೀರಾ ಕೆಟ್ಟದಾಗಿರುವುದು ವಿರೋಧಾಭಾಸ. ಕೋವಿಡ್‌ ಕಾಣಸಿಕೊಂಡ ವರಮಾನ ಅಷ್ಟೇನೂ ಕಡಿಮೆ ಆಗಲಿಲ್ಲ. ಆದರೆ, ಅಗತ್ಯ ಇರುವಲ್ಲಿಗೆ ಖರ್ಚು ಮಾಡದೆ ಇರುವುದು ಪ್ರಾದೇಶಿಕ ಅಸಮತೋಲನಕ್ಕೂ ಕಾರಣವಾಗಿದೆ. ಉದಾಹರಣೆಗೆ ಯಾದಗಿರಿಯಲ್ಲಿ 5 ಸಾವಿರ ಜನರಿಗೆ ಒಬ್ಬರಂತೆ ವೈದ್ಯ ಇದ್ದರೆ, ಬೆಂಗಳೂರಿನಲ್ಲಿ 600 ಜನರಿಗೆ ಒಬ್ಬರಂತೆ ವೈದ್ಯರಿದ್ದಾರೆ. ತಲಾ ಆದಾಯದಲ್ಲೂ ಸಾಕಷ್ಟು ವ್ಯತ್ಯಾಸ ಇದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರವನ್ನು ಸರ್ಕಾರಗಳು ನಿರ್ಲಕ್ಷ್ಯ ಮಾಡಿಕೊಂಡೇ ಬಂದಿವೆ. ಕೋವಿಡ್ ನಂತರವಾದರೂ ಎಚ್ಚೆತ್ತುಕೊಳ್ಳಬೇಕಾಗುತ್ತದೆ. 

–ಕೆ.ಸಿ. ರಘು, ಸಾರ್ವಜನಿಕ ನೀತಿ ವಿಶ್ಲೇಷಕ

ಹೆಚ್ಚುತ್ತಿರುವ ಅನುತ್ಪಾದಕ ವೆಚ್ಚ

ಆರ್ಥಿಕ ಶಿಸ್ತನ್ನು ಸರ್ಕಾರ ಕಾಪಾಡಿಕೊಂಡು ಬಂದಿತ್ತು. ಅನುತ್ಪಾದಕ ವೆಚ್ಚ ಶೇ 85 ರಷ್ಟು ಇರುತ್ತಿತ್ತು. 2021ರ ಬಜೆಟ್ ನೋಡಿದರೆ ಅನುತ್ಪಾದಕ ವೆಚ್ಚ ಶೇ 102 ರಷ್ಟಕ್ಕೆ ಏರಿಕೆಯಾಗಿದೆ. ಇದರಿಂದ ರಾಜ್ಯದ ಪ್ರಗತಿ ತೀರಾ ಕೆಳಮಟ್ಟಕ್ಕೆ  ಹೋಗಲಿದೆ. ಆಡಳಿತ ನಡೆಸಲು ಹಣ ಇಲ್ಲದ ಸ್ಥಿತಿಗೆ ಸರ್ಕಾರ ತಲುಪುತ್ತಿದೆ. ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಬಜೆಟ್ ಪೂರ್ವದಲ್ಲಿ ಪ್ರತಿ ವರ್ಷ ಸಭೆ ನಡೆಸುತ್ತದೆ. ಆದರೆ, ಸರ್ಕಾರಕ್ಕೆ ಯಾವುದೇ ಸ್ಪಷ್ಟ ಮಾರ್ಗದರ್ಶನವನ್ನು ಈ ಸಮಿತಿ ಮಾಡುವುದಿಲ್ಲ. ವರ್ಷಕ್ಕೆ ₹63 ಸಾವಿರ ಕೋಟಿಯನ್ನು ಸಂಬಳ ಮತ್ತು ನಿವೃತ್ತ ವೇತನಕ್ಕೆ ಖರ್ಚು ಮಾಡಲಾಗುತ್ತಿದೆ. 2023ಕ್ಕೆ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಬೇಕಾಗುತ್ತದೆ. ಸುಮಾರು ₹15 ಸಾವಿರ ಕೋಟಿ ಹೆಚ್ಚುವರಿಯಾಗಿ ಬೇಕಾಗುತ್ತದೆ. ಇವೆಲ್ಲವನ್ನೂ ನಿಭಾಯಿಸಲು ಸರಿಯಾದ ತಂತ್ರಗಾರಿಕೆ ಬೇಕಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರಿಯಾದ ಮುನ್ನೋಟ ಇಟ್ಟುಕೊಂಡೇ ಮುನ್ನಡೆಯಬೇಕಿದೆ.

–ಪಿ.ಎಂ. ರಘುನಂದನ್, ಹಿರಿಯ ಪತ್ರಕರ್ತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು