ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ನೈರುತ್ಯ ರೈಲ್ವೆಗೆ ‘ಅಜಯ’ ಹೊಳಪು....

ಅಭಿವೃದ್ಧಿಯ ಚಹರೆ ಬದಲಿಸಿದ ಅಜಯಕುಮಾರ ಸಿಂಗ್‌
Last Updated 2 ಏಪ್ರಿಲ್ 2021, 12:36 IST
ಅಕ್ಷರ ಗಾತ್ರ

‘ಇನ್ನೂ ಎರಡ್ಮೂರು ವರ್ಷಗಳ ಕಾಲ ರೈಲುಗಳು ನಿತ್ಯ ತಡವಾಗಿಯೇ ಸಂಚರಿಸುತ್ತವೆ. ಅವಸರ ಇದ್ದವರು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಲಿ...’

ಅಜಯಕುಮಾರ್ ಸಿಂಗ್
ಅಜಯಕುಮಾರ್ ಸಿಂಗ್

ಹೀಗೆ ಅತ್ಯಂತ ಸ್ಪಷ್ಟ ಮಾತುಗಳಿಂದ ಕಡ್ಡಿ ತುಂಡಾಗುವಂತೆ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ದು ಆಗಿನ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್. 2018ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ಕರೆದಿದ್ದ ಅಜಯ ಕುಮಾರ್‌ ಆಗ ಅಧಿಕಾರ ವಹಿಸಿಕೊಂಡು ಒಂದು ತಿಂಗಳವೂ ಕರೆದಿರಲಿಲ್ಲ.

ಪ್ರಯಾಣ ವೆಚ್ಚ ಕಡಿಮೆ ಎನ್ನುವ ಕಾರಣಕ್ಕೆ ರೈಲ್ವೆ ಭಾರತೀಯ ಸಾರಿಗೆ ಕ್ಷೇತ್ರದ ಜೀವನಾಡಿ ಎನಿಸಿದೆ. ಇದೇ ಪ್ರಯಾಣ ನೆಚ್ಚಿಕೊಂಡು ನಿತ್ಯ ಕೋಟ್ಯಂತರ ಜನ ಬದುಕುತ್ತಿದ್ದಾರೆ. ರೈಲುಗಳ ವಿಳಂಬದಿಂದ ಪ್ರಯಾಣಿಕರಿಗೆ ಪದೇ ಪದೇ ತೊಂದರೆಯಾಗುತ್ತಿದೆಯಲ್ಲ ಎಂದು ಮಾಧ್ಯಮದವರು ಕೇಳಿದ್ದ ಪ್ರಶ್ನೆಗೆ ‘ಎರಡ್ಮೂರು ವರ್ಷ ಇದೇ ಪರಿಸ್ಥಿತಿ’ ಎಂದು ಗಟ್ಟಿ ಧ್ವನಿಯಲ್ಲಿ ಪುನರುಚ್ಛರಿಸಿದ್ದರು.

ಅವರ ಹೇಳಿಕೆ ಮರುದಿನ ಪತ್ರಿಕೆಗಳಲ್ಲಿ ಪ್ರಕಟವಾದಾಗ ‘ಸರಿಯಾದ ಸಮಯಕ್ಕೆ ರೈಲು ಸೌಲಭ್ಯ ಒದಗಿಸದ ಇಂಥ ಅಧಿಕಾರಿಯಿಂದ ಅಭಿವೃದ್ಧಿ ನಿರೀಕ್ಷೆ ಮಾಡುವುದಾದರೂ ಹೇಗೆ ಸಾಧ್ಯ?’ ಎಂದು ಸಾರ್ವಜನಿಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ತಿಂಗಳುಗಳು ಕಳೆದಂತೆ ಅಜಯ ಕುಮಾರ್‌ ಸಿಂಗ್‌ ಸದ್ದಿಲ್ಲದೇ ಮಾಡಿದ ಜನಪರ ಕೆಲಸಗಳು ಅವರಿಗೆ ಈಗ ತಾರಾ ಪ್ರಚಾರ ತಂದುಕೊಟ್ಟಿವೆ.

ಹಿಂದಿನ ಯಾವ ಪ್ರಧಾನ ವ್ಯವಸ್ಥಾಪಕರೂ ಮಾಡದ ಕೆಲಸಗಳನ್ನು ಅವರು ಮಾಡಿದ್ದಾರೆ. ಸಿ ಹಾಗೂ ಡಿ ಗ್ರೂಪ್‌ ನೌಕರರ ಮನಗೆದ್ದಿದ್ದಾರೆ. ಮಾರ್ಚ್‌ 31ರಂದು ಅಜಯಕುಮಾರ್‌ ನಿವೃತ್ತಿಯಾದಾಗ ಗ್ಯಾಂಗ್‌ಮನ್‌ಗಳು, ರೈಲು ನಿಲ್ದಾಣದ ಸ್ವಚ್ಛತಾ ಸಿಬ್ಬಂದಿ ‘ಅಜಯಕುಮಾರ್‌ ಅವರ ಸೇವೆಯನ್ನು ಇನ್ನಷ್ಟು ವರ್ಷಗಳ ಕಾಲ ಮುಂದುವರಿಸಬೇಕು’ ಎಂದು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

ಮಾಡಿದ್ದು ಏನು?

ಐಆರ್‌ಎಸ್‌ ಅಧಿಕಾರಿಯಾದರೂ ಭದ್ರತಾ ಸಿಬ್ಬಂದಿ ಇಲ್ಲದೆ ಪ್ರತಿ ದಿನ ಬೆಳಗ್ಗೆ ರೈಲು ನಿಲ್ದಾಣ, ರೈಲ್ವೆ ಕಾಲೊನಿಗೆ ಒಬ್ಬರೇ ವಾಯುವಿಹಾರಕ್ಕೆ ಹೋಗುತ್ತಿದ್ದರು. ಅಲ್ಲಿ ಕಸ ಕಂಡರೆ ತೆಗೆದು ಹಾಕುತ್ತಿದ್ದರು. ಒಮ್ಮೊಮ್ಮೆ ರೈಲ್ವೆ ಟ್ರ್ಯಾಕ್‌ ಪಕ್ಕದಲ್ಲಿಯೇ ಕಿ.ಮೀ. ಗಟ್ಟಲೆ ನಡೆದುಕೊಂಡು ಹೋಗಿ ಲೋಪಗಳು ಕಂಡುಬಂದರೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದರು. ಬೆಂಗಳೂರಿನ ರೈಲು ನಿಲ್ದಾಣದ ಟಿಕೆಟ್‌ ಕಾಯ್ದಿರಿಸುವಿಕೆ ಕೌಂಟರ್‌ ಮುಂದೆ ಸಾರ್ವಜನಿಕರ ಸಾಲಿನಲ್ಲಿ ನಿಂತು ತಮ್ಮ ಸಿಬ್ಬಂದಿಯ ಕಾರ್ಯವೈಖರಿಯನ್ನೂ ‘ಪರೀಕ್ಷೆ’ ಮಾಡಿದ್ದರು.

ಅಜಯಕುಮಾರ್‌ ಪ್ರಧಾನ ವ್ಯವಸ್ಥಾಪಕರಾಗಿ ಹುಬ್ಬಳ್ಳಿಯಲ್ಲಿ ಕಳೆದ 29 ತಿಂಗಳ ಅವಧಿಯಲ್ಲಿ ಮಾಡಿದ ಕೆಲಸ ನೈರುತ್ಯ ರೈಲ್ವೆಯನ್ನು ನೋಡುವ ವಿಧಾನವನ್ನೇ ಬದಲಿಸಿದೆ.

ಪೊರಕೆ ಹಿಡಿದು ಕಸಗೂಡಿಸುತ್ತಿರುವ ಅಜಯಕುಮಾರ ಸಿಂಗ್‌
ಪೊರಕೆ ಹಿಡಿದು ಕಸಗೂಡಿಸುತ್ತಿರುವ ಅಜಯಕುಮಾರ ಸಿಂಗ್‌

ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳೆಂದರೆ ಅವರ ಕೊಠಡಿಗೆ ಹೋಗಲು ದಿನಗಟ್ಟಲೆ, ವಾರಗಟ್ಟಲೆ ಕಾಯಬೇಕಾದ ಸ್ಥಿತಿ. ಅಜಯಕುಮಾರ್‌ ಬಂದ ಮೇಲೆ ಗ್ರೂಪ್‌ ಡಿ ನೌಕರರು ಕೂಡ ಸುಲಭವಾಗಿ ಅವರ ಕೊಠಡಿಗೆ ಹೋಗಿ ಮಾತನಾಡಬಹುದಾಗಿತ್ತು. ಎರಡೂವರೆ ವರ್ಷಗಳ ಅವಧಿಯಲ್ಲಿ ಅವರನ್ನು ಕೊಠಡಿಯಲ್ಲಿ 15 ಸಾವಿರಕ್ಕೂ ಹೆಚ್ಚು ನೌಕರರು ಭೇಟಿಯಾಗಿದ್ದಾರೆ. ರೈಲು ನಿಲ್ದಾಣಕ್ಕೆ ತೆರಳಿದಾಗ ಕೂಲಿಗಳು, ಚಹಾ ಮಾರುವವರು ಹಾಗೂ ಸ್ವಚ್ಛತಾ ಸಿಬ್ಬಂದಿಯ ಹೆಗಲಮೇಲೆ ಕೈ ಹಾಕಿ ಅವರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿದ್ದಾಗ ನಿತ್ಯ 100 ಜನ ರೈಲ್ವೆ ಸಿಬ್ಬಂದಿಯನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಪರಿಹರಿಸಿದ್ದಾರೆ.

ಪ್ರಧಾನ ವ್ಯವಸ್ಥಾಪಕರಾಗಿ ಹಿಂದೆ ಕೆಲಸ ಮಾಡಿದವರು ಬೆಂಗಳೂರು ಹಾಗೂ ಮೈಸೂರಿನಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಆದರೆ, ಅಜಯಕುಮಾರ್‌ ಹುಬ್ಬಳ್ಳಿಯಲ್ಲಿದ್ದುಕೊಂಡೇ ನೈರುತ್ಯ ರೈಲ್ವೆ ವ್ಯಾಪ್ತಿಯ ಸಣ್ಣ ನಿಲ್ದಾಣಗಳಿಗೆ ಭೇಟಿ ನೀಡಿ ತಮ್ಮ ಸಿಬ್ಬಂದಿಯ ಕೆಲಸ, ಅವರಿಗೆ ಇರುವ ಸೌಲಭ್ಯಗಳನ್ನು ಖುದ್ದು ಪರಿಶೀಲಿಸುತ್ತಿದ್ದರು.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡಲು ಬೈಯಪ್ಪನಹಳ್ಳಿಯಲ್ಲಿ ನಿಲ್ದಾಣ ಅಭಿವೃದ್ಧಿಪಡಿಸಿದ್ದು, ವ್ಯರ್ಥವಾಗಿ ಬಿದ್ದಿದ್ದ ವಸ್ತುಗಳನ್ನು ಬಳಸಿಕೊಂಡು ಹುಬ್ಬಳ್ಳಿಯಲ್ಲಿ ರೈಲ್ವೆ ವಸ್ತು ಸಂಗ್ರಹಾಲಯ ನಿರ್ಮಿಸಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದ್ದ ಇಲಾಖೆಯ ಹಳೆಯ ಕಟ್ಟಡಗಳನ್ನು ನೆಲಸಮ ಮಾಡಿದ್ದು, ಬ್ರಿಟಿಷರ ಕಾಲದ ದೇವರಗುಡಿಹಾಳ ಕೆರೆಗೆ ಹೊಸ ಸ್ಪರ್ಶ ನೀಡಿದ್ದು, ಹುಬ್ಬಳ್ಳಿಯಲ್ಲಿ ವಿಶ್ವದ ಅತಿ ಉದ್ದನೆಯ ರೈಲ್ವೆ ಪ್ಲಾಟ್‌ ಫಾರ್ಮ್‌ ನಿರ್ಮಿಸಿದ್ದು ಹೀಗೆ ಅಭಿವೃದ್ಧಿ ಕಾರ್ಯಗಳ ದೊಡ್ಡ ಪಟ್ಟಿಯೇ ಇದೆ.

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಬಂದಾಗ ರೈಲು ನಿಲ್ದಾಣಗಳಲ್ಲಿ ಸಂತ್ರಸ್ತರಿಗೆ ಆಶ್ರಯದ ಜೊತೆಗೆ ಊಟದ ವ್ಯವಸ್ಥೆಯನ್ನೂ ಅವರು ಮಾಡಿದ್ದರು. ಅನೇಕ ಬಾರಿ ಸ್ವಂತ ಹಣವನ್ನು ನಿರಾಶ್ರಿತರ ಹೊಟ್ಟೆಪಾಡಿಗೆ ಬಳ‌ಸಿದ್ದಾರೆ. ಕೋವಿಡ್‌ ಕಾರಣದಿಂದ ಹೋದ ವರ್ಷ ಆಗಿದ್ದ ಲಾಕ್‌ಡೌನ್‌ ಸಮಯ ಸದುಪಯೋಗ ಪಡಿಸಿಕೊಂಡು ಜೋಡಿ ರೈಲು ಮಾರ್ಗ ಮತ್ತು ವಿದ್ಯುದ್ದೀಕರಣ ಕೆಲಸ ಮಾಡಿದ್ದು ಅವರ ವೃತ್ತಿಪರತೆಗೆ ಸಾಕ್ಷಿಯಾಗಿದೆ.

ಅಜಯಕುಮಾರ್‌ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾಗುವುದಕ್ಕಿಂತ ಮೊದಲು ಈಶಾನ್ಯ ರೈಲ್ವೆ ವಲಯ ವ್ಯಾಪ್ತಿಯ ಗೋರಕ್‌ಪುರದಲ್ಲಿ ಮುಖ್ಯ ಪ್ರಧಾನ ಮೆಕಾನಿಕಲ್‌ ಎಂಜಿನಿಯರ್‌ ಆಗಿದ್ದರು. 1981ರ ಬ್ಯಾಚ್‌ನ ಐಆರ್‌ಎಸ್‌ ಅಧಿಕಾರಿಯಾಗಿದ್ದು, ಪಶ್ಚಿಮ ಮಧ್ಯ ರೈಲ್ವೆಯಲ್ಲಿ ಮಧ್ಯಪ್ರದೇಶದ ಜಬ್ಬಲಪುರ ವಿಭಾಗದ ವ್ಯವಸ್ಥಾಪಕರಾಗಿ, ಚೆನ್ನೈನಲ್ಲಿ ದಕ್ಷಿಣ ರೈಲ್ವೆಯಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ, ವರ್ಕ್‌ಶಾಪ್‌ನ ಮುಖ್ಯ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿಯೂ ಜನಪರ ಕೆಲಸಗಳನ್ನು ಮಾಡಿ ಜನರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT