ಭಾನುವಾರ, ನವೆಂಬರ್ 29, 2020
24 °C
ವಿಶ್ವ ಪ್ರಸಿದ್ಧ ಹಂಪಿಗೆ ನಿತ್ಯ ಹರಿದು ಬರುತ್ತಿದೆ ಪ್ರವಾಸಿಗರ ದಂಡು

PV Web Exclusive: ಭಾರಿ ಚೇತರಿಕೆ ಕಂಡ ಪ್ರವಾಸೋದ್ಯಮ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಕೊರೊನಾ ಸೋಂಕಿನ ಭೀತಿಯಿಂದ ಹೊರಬರುತ್ತಿರುವ ಜನ ಈಗ ಮುಕ್ತವಾಗಿ ಓಡಾಡಲು ಆರಂಭಿಸಿದ್ದಾರೆ. ವಿಶ್ವವಿಖ್ಯಾತ ಹಂಪಿಗೆ ನಿತ್ಯ ಹರಿದು ಬರುತ್ತಿರುವ ಪ್ರವಾಸಿಗರ ದಂಡೇ ಇದಕ್ಕೆ ಸಾಕ್ಷಿ.

ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದ್ದ ‘ಬಯಲು ವಸ್ತು ಸಂಗ್ರಹಾಲಯ’ಕ್ಕೆ ಮೊದಲಿನ ಕಳೆ ಬಂದಿದೆ. ಈಗ ವಾರದ ಎಲ್ಲ ದಿನಗಳಲ್ಲೂ ಹಂಪಿಯಲ್ಲಿ ಪ್ರವಾಸಿಗರು ಕಾಣಿಸಿಕೊಳ್ಳುತ್ತಿದ್ದಾರೆ. ನಿತ್ಯ ಎರಡು ಸಾವಿರ ಆಸುಪಾಸಿನಲ್ಲಿ ಜನ ಬಂದರೆ, ವಾರಾಂತ್ಯಕ್ಕೆ ಈ ಸಂಖ್ಯೆ ಹೆಚ್ಚಾಗುತ್ತಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಪ್ರತಿದಿನ ಪ್ರವಾಸಿಗರ ಸಂಖ್ಯೆ ಐದು ಸಾವಿರದ ಗಡಿ ದಾಟುತ್ತಿದೆ.

ಅದರಲ್ಲೂ ನೆರೆಯ ರಾಜ್ಯಗಳಾದ ಮಹಾರಾಷ್ಟ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಹಂಪಿಗೆ ಬಂದು ಹೋಗುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿರುವುದರಿಂದ ಸಹಜವಾಗಿಯೇ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಿವೆ.

ಹೊಸಪೇಟೆ ನಗರ, ಹಂಪಿ, ಕಮಲಾಪುರ ಸುತ್ತಮುತ್ತಲಿನ ಹೋಟೆಲ್‌, ರೆಸಾರ್ಟ್‌, ಹೋಂ ಸ್ಟೇಗಳಿಗೆ ಏಕಾಏಕಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ವಾರಾಂತ್ಯಕ್ಕೆ ಹೋಟೆಲ್‌ಗಳಲ್ಲಿ ರೂಂ ಸಿಗುವುದು ಕಷ್ಟವಾಗಿದೆ. ಇಷ್ಟು ದಿನಗಳ ವರೆಗೆ ಕೆಲಸವಿಲ್ಲದೆ ಕಂಗಾಲಾಗಿದ್ದ ಹಂಪಿಯ ಮಾರ್ಗದರ್ಶಿಗಳ ಮುಖದಲ್ಲಿ ಮಂದಹಾಸ ಮರಳಿದೆ. ಹಂಪಿಯಲ್ಲಿ 200 ಗೈಡ್‌ಗಳಿದ್ದಾರೆ. ಹೆಚ್ಚು ಕಮ್ಮಿ ಈಗ ಎಲ್ಲರಿಗೂ ಕೆಲಸ ಸಿಗುತ್ತಿದೆ.

ಟ್ಯಾಕ್ಸಿ, ಆಟೊ ರಿಕ್ಷಾ ಓಡಿಸುವವರಿಗೂ ಸಮಾಧಾನ ತಂದಿದೆ. ಪ್ರವಾಸಿಗರಿಲ್ಲದೆ ಸ್ಟ್ಯಾಂಡ್‌ನಲ್ಲಿ ನಿಂತು ನಿಂತು ವಾಪಸಾಗುತ್ತಿದ್ದವರಿಗೆ ಈಗ ಕೆಲಸ ಸಿಕ್ಕಿದೆ. ಅದರಲ್ಲೂ ಆಟೊ ರಿಕ್ಷಾದಲ್ಲಿ ಓಡಾಡಲು ಜನ ಹಿಂಜರಿಯುತ್ತಿದ್ದರು. ಈಗ ಯಾವುದೇ ಅಳುಕಿಲ್ಲದೆ ಆಟೊಗಳಲ್ಲಿ ಓಡಾಡುತ್ತಿದ್ದಾರೆ.

ತೆಪ್ಪಗಳು ಸಹ ನದಿಗೆ ಇಳಿದಿವೆ. ಹಂಪಿಯ ಚಕ್ರತೀರ್ಥ ಪರಿಸರದಲ್ಲಿ ನಿತ್ಯ ಎಂಟರಿಂದ ಹತ್ತು ತೆಪ್ಪಗಳು ಪ್ರವಾಸಿಗರನ್ನು ಕರೆದೊಯ್ಯುತ್ತಿವೆ. ಹಂಪಿಯ ಹೃದಯ ಭಾಗದಲ್ಲಿರುವ ತೆಂಗಿನಕಾಯಿ, ಹೂ, ಹಣ್ಣು, ಎಳನೀರು, ತಂಪುಪಾನೀಯ, ಆಟಿಕೆ ಮಳಿಗೆ, ಹೋಟೆಲ್‌ಗಳಲ್ಲಿ ವ್ಯವಹಾರ ಚೇತರಿಸಿಕೊಂಡಿದೆ. ಈಗ ಅಲ್ಲಿರುವವರೆಗೆ ಕೈತುಂಬ ಕೆಲಸ ಸಿಕ್ಕಿದೆ.

‘ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಬರುತ್ತಿರುವುದರಿಂದ ಒಂದೊಂದಾಗಿ ವ್ಯವಹಾರಗಳು ಚೇತರಿಸಿಕೊಳ್ಳಲು ಆರಂಭಿಸಿವೆ. ಈಗ ಎಲ್ಲರಿಗೂ ಕೆಲಸ ಸಿಗುತ್ತಿದೆ. ದೀಪಾವಳಿ, ಕ್ರಿಸ್ಮಸ್‌, ಹೊಸ ವರ್ಷಾಚರಣೆ, ಸಂಕ್ರಾಂತಿ ಸೇರಿದಂತೆ ಸಾಲು ಸಾಲು ಹಬ್ಬಗಳು ಇರುವುದರಿಂದ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು’ ಎಂದು ಭರವಸೆ ವ್ಯಕ್ತಪಡಿಸುತ್ತಾರೆ ಹಂಪಿ ಹೋಟೆಲ್‌ ವ್ಯಾಪಾರಿ ರಾಜು.

‘ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಹೆಚ್ಚಾಗಿ ಜನ ಬರುತ್ತಿದ್ದಾರೆ. ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಹಂಪಿ ಪರಿಸರ ಹಚ್ಚ ಹಸಿರಾಗಿದೆ. ನದಿ ಮೈದುಂಬಿಕೊಂಡು ಹರಿಯುತ್ತಿದೆ. ಇಂತಹ ವಾತಾವರಣದಲ್ಲಿ ಹಂಪಿ ನೋಡಲು ಯಾರು ತಾನೇ ಇಷ್ಟಪಡುವುದಿಲ್ಲ. ಐದಾರೂ ತಿಂಗಳು ಜನರಿಗೆ ಮನೆಯಲ್ಲಿ ಕುಳಿತುಕೊಂಡು ಸಾಕಾಗಿದೆ. ಈಗ ಕೊರೊನಾ ಭಯ ಬಿಟ್ಟು ಹೊರಗೆ ಓಡಾಡುತ್ತಿದ್ದಾರೆ. ಪ್ರವಾಸೋದ್ಯಮ ಬೆಳವಣಿಗೆಯ ದೃಷ್ಟಿಯಿಂದ ಇದು ಒಳ್ಳೆಯದು’ ಎಂದು ಗೈಡ್‌ ಗೋಪಾಲ್‌ ಹೇಳಿದರು.

ತುಂಗಭದ್ರಾ ಜಲಾಶಯಕ್ಕೂ ಜನಸಾಗರ

ಉತ್ತಮ ಮಳೆಯಿಂದಾಗಿ ಈ ವರ್ಷ ಆಗಸ್ಟ್‌ನಲ್ಲೇ ಭರ್ತಿಯಾಗಿರುವ ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಈಗ ಜನಸಾಗರವೇ ಹರಿದು ಬರುತ್ತಿದೆ.

ತಿಂಗಳ ಹಿಂದೆಯಷ್ಟೇ ಪ್ರವಾಸಿಗರ ಭೇಟಿಗೆ ಜಲಾಶಯ ಮುಕ್ತಗೊಳಿಸಲಾಗಿದೆ. ವಿಷಯ ತಿಳಿದು ಪ್ರವಾಸಿಗರು ತುಂಗಭದ್ರೆಯ ಚೆಲುವು ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ. ರಾಜ್ಯವಲ್ಲದೇ ನೆರೆಯ ಅವಿಭಜಿತ ಆಂಧ್ರ ಪ್ರದೇಶದಿಂದಲೂ ಹೆಚ್ಚಿನ ಪ್ರವಾಸಿಗರು ಭೇಟಿ ಕೊಡುತ್ತಿದ್ದಾರೆ. ವಾರಾಂತ್ಯಕ್ಕೆ ಜಲಾಶಯದ ಪರಿಸರದಲ್ಲಿ ಜನಜಾತ್ರೆ ಕಂಡು ಬರುತ್ತಿದೆ.

ದೋಣಿ ವಿಹಾರ, ಸಂಗೀತ ಕಾರಂಜಿ, ಉದ್ಯಾನ ಕೂಡ ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಿರುವುದರಿಂದ ನಿತ್ಯವೂ ಜನ ಕುಟುಂಬ ಸಮೇತರಾಗಿ ಬರುತ್ತಿದ್ದಾರೆ. ಸಹಜವಾಗಿಯೇ ಜಲಾಶಯದ ಪರಿಸರದಲ್ಲಿನ ಹೋಟೆಲ್‌ ಸೇರಿದಂತೆ ಇತರೆ ಸಣ್ಣ ವ್ಯಾಪಾರಗಳು ಚೇತರಿಸಿಕೊಂಡು, ವ್ಯಾಪಾರಿಗಳಿಗೆ ಖುಷಿ ತಂದಿದೆ.

ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೂ ಅಪಾರ ಸಂಖ್ಯೆಯ ಜನ ಭೇಟಿ ಕೊಡುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ಸಫಾರಿಗೆ ಇನ್ನೆರಡು ಹೊಸ ವಾಹನಗಳನ್ನು ತರಿಸಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು