ಭಾನುವಾರ, ಜೂನ್ 26, 2022
28 °C

ಕೊರೊನಾ ಸಂಕಷ್ಟದಲ್ಲೂ ಶೇ 99ರಷ್ಟು ಸಾಧನೆ: ಗೋವಿಂದ ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೊರೊನಾ ಸಂಕಷ್ಟದಲ್ಲೂ ಇಲಾಖೆ 2020-21 ಸಾಲಿನಲ್ಲಿ ₹ 10,893 ಕೋಟಿ ಅನುದಾನದಲ್ಲಿ ₹ 10,743 ಕೋಟಿ ಆರ್ಥಿಕ ಪ್ರಗತಿ (ಶೇ 99) ಸಾಧಿಸಿದೆ’ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಲೋಕೋಪಯೋಗಿ ಸಚಿವ ಗೋವಿಂದ ಎಂ ಕಾರಜೋಳ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘2019-20‌ ಸಾಲಿನಲ್ಲಿ ₹ 9,033 ಕೋಟಿ ₹ 8,788 ಕೋಟಿ ಆರ್ಥಿಕ ಪ್ರಗತಿ (ಶೇ 97) ಪ್ರಗತಿ ಸಾಧಿಸಲಾಗಿತ್ತು’ ಎಂದರು.

‘ವಿವಿಧ ಯೋಜನೆಗಳಡಿ ಒಟ್ಟಾರೆ 12125 ಕಿಮೀ ರಸ್ತೆ ಅಭಿವೃದ್ಧಿಗೆ ₹ 12,122 ಕೋಟಿ ವೆಚ್ಚ ಮಾಡಲಾಗಿದೆ. 2961 ಕಿಮೀ. ರಾಜ್ಯ ಹೆದ್ದಾರಿ ಮತ್ತು 9164 ಕಿಮೀ. ಜಿಲ್ಲಾ ಮುಖ್ಯ ರಸ್ತೆ ಮತ್ತು 621 ಸೇತುವೆಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ. 48 ನ್ಯಾಯಾಲಯ ಹಾಗೂ ನ್ಯಾಯಾಧೀಶರ ವಸತಿ ಗೃಹಗಳ ಕಾಮಗಾರಿಗಳು ಹಾಗೂ 15 ಪೋಸ್ಕೊ ನ್ಯಾಯಾಲಯಗಳ ಕಟ್ಟಡಗಳನ್ನು ₹ 255 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ’ ಎಂದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೊನಿಗಳಲ್ಲಿ 3,668 ಕಿ.ಮೀ ಕಾಂಕ್ರೀಟ್‌ ರಸ್ತೆಗಳನ್ನು ₹ 2779 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.ಎಸ್‌ಡಿಪಿ ಯೋಜನೆಯಡಿ 609 ಕಿಮೀ ರಸ್ತೆ ಅಭಿವೃದ್ಧಿ ಮತ್ತು ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ 933 ಕಿಮೀ ರಸ್ತೆ ಅಭಿವೃದ್ಧಿಯನ್ನು ₹ 302 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ’ ಎಂದರು.

‘2019ರ ಆಗಸ್ಟ್‌ನಲ್ಲಿ ಸಂಭವಿಸಿದ ಪ್ರವಾಹ ಪರಿಹಾರ ಕಾಮಗಾರಿಗಳ ಅನುಷ್ಠಾನದಲ್ಲಿ ₹ 500 ಕೋಟಿ ಮೊತ್ತದಲ್ಲಿ 1,850 ಕಾಮಗಾರಿ ಪೂರ್ಣಗೊಂಡಿವೆ. 2020ರಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ರಸ್ತೆ ಮತ್ತು ಸೇತುವೆಗಳ ದುರಸ್ತಿಗಾಗಿ ₹ 615 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, 1,553 ಕಾಮಗಾರಿಗಳ ಅನುಷ್ಠಾನ ಕೈಗೊಳ್ಳಲಾಗಿದ್ದು, 384 ಕಾಮಗಾರಿಗಳು ಪೂರ್ಣಗೊಂಡಿವೆ’ ಎಂದು ವಿವರಿಸಿದರು.

ಎಸ್‌ಎಚ್‌ಡಿಪಿ-ಫೇಸ್-4‌, ಹಂತ-1ರಲ್ಲಿ ₹ 4,500 ಕೋಟಿ ಮೊತ್ತದಲ್ಲಿ 3,500 ಕಿಮೀ ರಸ್ತೆಗಳ ಅಭಿವೃದ್ಧಿ ಕೈಗೊಂಡಿದ್ದು, 1‌,739 ಕಿಮೀ ಅಭಿವೃದ್ಧಿಯನ್ನು ₹ 2140 ಕೋಟಿ ವೆಚ್ಚದಲ್ಲಿ ನಿರ್ಮಾಣ ಪೂರ್ಣಗೊಳಿಸಲಾಗಿದೆ. ಕೆಶಿಪ್‌-3ರಡಿ ಎಡಿಬಿ-2ರಡಿ ₹ 5,334 ಕೋಟಿ ಮೊತ್ತದಲ್ಲಿ 418 ಕಿ.ಮೀ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಚಾಲನೆ ನೀಡಿದ್ದು, 126 ಕಿಮೀ ಅಭಿವೃದ್ಧಿ ಪೂರ್ಣಗೊಂಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆಆರ್‌ಡಿಸಿಎಲ್‌ ವತಿಯಿಂದ ಬೆಂಗಳೂರು ಸುತ್ತಮುತ್ತಲಿನ 155 ಕಿಮೀ ರಸ್ತೆಯನ್ನು ₹2,095 ಕೋಟಿ ಅಂದಾಜು ಮೊತ್ತದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದೆ ಹಾಗೂ ರಾಜ್ಯದಾದ್ಯಂತ ₹ 1,395 ಕೋಟಿ ಮೊತ್ತದಲ್ಲಿ 215 ಸೇತುವೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, 123 ಸೇತುವೆಗಳನ್ನು ಪೂರ್ಣಗೊಳಿಸಲಾಗಿದೆ’ ಎಂದರು.

‘ಕೇಂದ್ರ ಸರ್ಕಾರದ ಸಹಯೋಗದಲ್ಲಿ ₹ 4,762 ಕೋಟಿ ಮೊತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅನುಷ್ಠಾನಗೊಳಿಸಲಾಗುತ್ತಿದೆ. ಎರಡು ವರ್ಷಗಳಲ್ಲಿ 399 ಕಿಮೀ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯನ್ನು ₹ 2,484 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಸಿಗಂದೂರು ಸೇತುವೆಯ ₹ 482.84 ಕೋಟಿಯ ಕಾಮಗಾರಿ ಪ್ರಗತಿಯಲ್ಲಿದೆ’ ಎಂದರು.

‘ಎನ್‌ಎಚ್‌ಎಐ ವತಿಯಿಂದ ಬೆಂಗಳೂರು-ಮೈಸೂರು, ತುಮಕೂರು-ಶಿವಮೊಗ್ಗ ಮತ್ತು ಬಳ್ಳಾರಿ-ಹಿರಿಯೂರು ಚತುಷ್ಪಥ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ‌. ಬೆಂಗಳೂರು-ಚೆನ್ಯೆ ಎಕ್ಸ್‌ಪ್ರೆಸ್‌ ವೇ ಹೆದ್ದಾರಿ ಕಾಮಗಾರಿ ಕೂಡಾ ಆರಂಭಿಸಲಾಗಿದೆ. ಎನ್‌ಎಚ್‌ಎಐ ವತಿಯಿಂದ 1,980 ಕಿಮೀ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯನ್ನು ₹ 3,5280 ಕೋಟಿ ಮೊತ್ತದಲ್ಲಿ ಕೈಗೊಳ್ಳಲಾಗುತ್ತಿದೆ.

ಮೂಲಸೌಕರ್ಯ ಇಲಾಖೆಯ ಸಹಯೋಗದಲ್ಲಿ ₹ 17 ಕೋಟಿ ವೆಚ್ಚದಲ್ಲಿ ಬೀದರ್‌ ವಿಮಾನ ನಿಲ್ದಾಣ ಟರ್ಮಿನಲ್‌ ಕಟ್ಟಡ ನಿರ್ಮಾಣ ಮಾಡಿದ್ದು, ವಿಮಾನ ನಿಲ್ದಾಣದ ಕಾರ್ಯಾರಂಭವಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಯನ್ನು ಏರ್‌ಬಸ್‌-320 ವಿಮಾನಗಳ ಹಾರಾಟಕ್ಕೆ ₹ 384 ಕೋಟಿ ಮೊತ್ತದಲ್ಲಿ ಅನುಷ್ಠಾನಗೊಳಿಸುತ್ತಿದ್ದು, ಫೇಸ್‌-1ರ ಕಾಮಗಾರಿ ಪ್ರಗತಿಯಲ್ಲಿದೆ, ಫೇಸ್-2ರ ಕಟ್ಟಡ ಕಾಮಗಾರಿಗೆ ಗುತ್ತಿಗೆದಾರನ್ನು ನೇಮಕ ಮಾಡಲಾಗಿದೆ. ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಯನ್ನು ಒಟ್ಟು ₹ 220 ಕೋಟಿ ಮೊತ್ತದಲ್ಲಿ ಕೈಗೊಳ್ಳಲು ಅನುಮೋದನೆಯಾಗಿದ್ದು, ಫೇಸ್‌-1ರ ಕಾಮಗಾರಿಯ ಒಟ್ಟು ₹ 85.00 ಕೋಟಿ ಮೊತ್ತದ ಕಾಮಗಾರಿ ಪ್ರಗತಿಯಲ್ಲಿದೆ. ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಲ್ಲಿ ಫೇಸ್-2‌ ಟರ್ಮಿನಲ್‌ ಕಟ್ಟಡ ಡಿಪಿಆರ್‌ ಕಾಮಗಾರಿಯ ಅಂದಾಜು ಮೊತ್ತದ ₹ 88.52 ಕೋಟಿ ಮೊತ್ತದ ಪರಿಶೀಲನೆಯ ಹಂತದಲ್ಲಿರುತ್ತದೆ.

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ನಬಾರ್ಡ್‌ ಸಹಯೋಗದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ 3,243 ಶಾಲಾ ಕೊಠಡಿಗಳ ಪುನರ್‌ ನಿರ್ಮಾಣ ಕಾಮಗಾರಿಯನ್ನು ₹ 718.65 ಕೋಟಿ ಮೊತ್ತಕ್ಕೆ ಕೈಗೆತ್ತಿಕೊಂಡಿದ್ದು, 1,692 ಕಾಮಗಾರಿಗಳು ಪೂರ್ಣಗೊಂಡಿವೆ, ₹ 350 ಕೋಟಿ ವೆಚ್ಚವಾಗಿದೆ. ನಬಾರ್ಡ್‌ ಸಹಯೋಗದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 842 ಅಂಗನವಾಡಿ ಶಾಲಾ ಕೊಠಡಿಗಳ ಪುನರ್‌ ನಿರ್ಮಾಣವನ್ನು ₹ 137.78 ಕೋಟಿ ಮೊತ್ತಕ್ಕೆ ಕೈಗೆತ್ತಿಕೊಂಡಿದ್ದು, 189 ಕಾಮಗಾರಿಗಳು ಪೂರ್ಣಗೊಂಡಿದ್ದು, ₹ 36 ಕೋಟಿ ವೆಚ್ಚವಾಗಿರುತ್ತದೆ.

ಬೆಂಗಳೂರಿನ ಆನಂದರಾವ್‌ ವೃತ್ತದಲ್ಲಿ 50 ಅಂತಸ್ತುಗಳ ಅವಳಿ ಗೋಪುರ ಕಚೇರಿ ಕಟ್ಟಡ ನಿರ್ಮಾಣವನ್ನು ನವದೆಹಲಿಯ ಎನ್‌ಬಿಸಿಸಿ ಜೊತೆ ಪಿಪಿಪಿ ಮಾದರಿಯಡಿಯಲ್ಲಿ ₹ 1251 ಕೋಟಿ ವೆಚ್ಚದಲ್ಲಿ ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ. ನವದೆಹಲಿಯಲ್ಲಿ ಕರ್ನಾಟಕ ಭವನ-1ರ ನಿರ್ಮಾಣವನ್ನು ₹ 120 ಕೋಟಿ ಪರಿಷ್ಕೃತ ಮೊತ್ತದಲ್ಲಿ ಕೈಗೊಳ್ಳಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

ರಸ್ತೆಗಳ ಉನ್ನತೀಕರಣ: ‘15 ವರ್ಷಗಳ ಅವಧಿಯ ನಂತರ ವೈಜ್ಞಾನಿಕವಾಗಿ ರಸ್ತೆಗಳ ಉನ್ನತೀಕರಣ ಮಾಡಲಾಗಿದೆ. 9,601 ಕಿಮೀ ರಾಜ್ಯ ಹೆದ್ದಾರಿ ಮತ್ತು 1,5510 ಕಿಮೀ ಜಿಲ್ಲಾ ಮುಖ್ಯ ರಸ್ತೆಗಳ ಉನ್ನತೀಕರಣಗೊಳಿಸಲಾಗಿದೆ. ಎಸ್‌ಎಚ್‌ಡಿಪಿ ಫೇಸ್‌-4ರಡಿ ಘಟ್ಟ-2ರಡಿ 2720 ಕಿಮೀ ಕೋರ್‌ರೋಡ್‌ ರಸ್ತೆಗಳ ಅಭಿವೃದ್ಧಿಪಡಿಸಲು ಅಂದಾಜು ₹ 3,500 ಕೋಟಿ ಮೊತ್ತಕ್ಕೆ ಯೋಜನೆ ತಯಾರಿಸಲಾಗಿದೆ.

ನಗರಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಕೆಆರ್‌ಡಿಸಿಎಲ್‌ ಮೂಲಕ ಬೆಂಗಳೂರಿನ 12 ಅತಿ ದಟ್ಟಣೆಯ ರಸ್ತೆಗಳ 191 ಕಿ.ಮೀ ಅಭಿವೃದ್ಧಿಯನ್ನು ₹ 788 ಕೋಟಿ ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗಿದೆ. ಎನ್‌ಎಚ್‌ಎಐ ಮತ್ತು ಕೇಂದ್ರ ಭೂಸಾರಿಗೆ ಸಚಿವಾಲಯದ ಸಹಯೋಗದೊಂದಿಗೆ ಬೆಳಗಾವಿ ನಗರದ 69 ಕಿಮೀ ಮತ್ತು ರಾಯಚೂರು ನಗರ ರಿಂಗ್‌ ರಸ್ತೆ ಉದ್ದ 14.50 ಕಿ.ಮೀ ನಿರ್ಮಾಣ‌ ಮಾಡಲಾಗಿದೆ. ಬೆಂಗಳೂರಿನ ವಸಂತ ನಗರದಲ್ಲಿ ಸುಸಜ್ಜಿತ 77 ವಸತಿ ಗೃಹಗಳ (ಸಮುಚ್ಛಯ) ನಿರ್ಮಾಣವನ್ನು ₹ 117 ಕೋಟಿ ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣೆ ಕೇಂದ್ರದ ವತಿಯಿಂದ ವೈಜ್ಞಾನಿಕ ಸಂಚಾರ ನಿರ್ವಹಣೆ ವ್ಯವಸ್ಥೆಯಡಿ ಅಪಘಾತಗಳನ್ನು ಕಡಿಮೆ ಮಾಡಲು ಅತ್ಯಾಧುನಿಕ ಸಂಚಾರ ವ್ಯವಸ್ಥೆ, ಇಂಟಲಿಜೆಂಟ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ ಮತ್ತು ಸೇಪ್ಟಿ ಸಲ್ಯೂಷನ್‌ ಅನ್ನು ಪ್ರಾಯೋಗಿಕವಾಗಿ ಶಿವಮೊಗ್ಗ-ಸವಳಂಗ-ಶಿಕಾರಿಪುರ-ಶಿರಾಳಕೊಪ್ಪ ಮತ್ತು ಹಾಸನ-ರಾಮನಾಥಪುರ-ಪಿರಿಯಾಪಟ್ಟಣ ರಸ್ತೆಗಳಲ್ಲಿ ₹ 18 ಕೋಟಿ ವೆಚ್ಚದಲ್ಲಿ ಅನುಷ್ಠಾನ, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕಾಲುಸಂಕಗಳನ್ನು ನಿರ್ಮಿಸುವ ‘ಗ್ರಾಮಬಂಧು’ ಸೇತುವೆ ಯೋಜನೆ ಅನುಷ್ಠಾನಗೊಳಿಸಲಾಗಿದೆ’ ಎಂದರು

ಬೆಂಗಳೂರು ಸುತ್ತಲಿನ ಸೆಟಲೈಟ್‌ ಟೌನ್‌ ರಿಂಗ್‌ ರಸ್ತೆ ಡಾಬಸ್‌ಪೇಟೆ-ದೇವನಹಳ್ಳಿ- ಹೊಸಕೋಟೆ- ತಮಿಳನಾಡು (101 ಕಿಮೀ) ಗಡಿವರೆಗಿನ ಅಭಿವೃದ್ಧಿಯನ್ನು ಎನ್‌ಎಚ್‌ಎಐ ವತಿಯಿಂದ ‘ಭಾರತಮಾಲಾ’ ಯೋಜನೆಯಡಿ ಕೈಗೊಳ್ಳಲಾಗಿದೆ. ಬಾಕಿ ಉಳಿದಿರುವ 143 ಕಿಮೀ ಉದ್ದದ ಎಸ್‌ಟಿಆರ್‌ಆರ್‌ ರಸ್ತೆಯ ಭಾಗವನ್ನು ಹೊಸೂರು ಗಡಿ - ಆನೇಕಲ್‌ – ಕನಕಪುರ – ರಾಮನಗರ – ಮಾಗಡಿ - ಡಾಬಸಪೇಟೆ ಎನ್‌ಎಚ್‌ಎಐ ಸಹಯೋಗದಲ್ಲಿ ಕೈಗೊಳ್ಳಲು ಭೂಸ್ವಾಧೀನ ಮೊತ್ತದ ₹ 1560 ಕೋಟಿಯಲ್ಲಿ ಶೇ 30ರಷ್ಟು ರಾಜ್ಯ ಸರ್ಕಾರದಿಂದ ಭರಿಸಿ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂ‌ದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು