ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

884 ನಿವೃತ್ತ ‘ಇಇ’ಗಳಿಗೆ ‘ಶಾಶ್ವತ ಬಡ್ತಿ’!

ಲೋಕೋಪಯೋಗಿ ಇಲಾಖೆಯಲ್ಲಿ ‘ನಿಯಮ 32’ ಅಡಿ ಬಡ್ತಿ ಪಡೆದವರಿಗೆ ಸಿಹಿ ಸುದ್ದಿ
Last Updated 8 ನವೆಂಬರ್ 2020, 22:02 IST
ಅಕ್ಷರ ಗಾತ್ರ

ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಹುದ್ದೆಯಿಂದ ಕಾರ್ಯಪಾಲಕ ಎಂಜಿನಿಯರ್‌ (ಇಇ) ಹುದ್ದೆಗೆ ತಾತ್ಕಾಲಿಕವಾಗಿ ಸ್ಥಾನಪನ್ನಗೊಂಡು (ನಿಯಮ 32ರ ಬಡ್ತಿ) ಹಲವು ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತರಾದ 884 ಅಧಿಕಾರಿಗಳ ಬಡ್ತಿಯನ್ನು ಕ್ರಮಬದ್ಧಗೊಳಿಸಲು (ನಿಯಮ 42ರ ಅಡಿ) ರಾಜ್ಯ ಸರ್ಕಾರ ನಿರ್ಧರಿಸಿದೆ.

ಅಲ್ಲದೆ, 7–8 ವರ್ಷಗಳಿಂದ ‘ನಿಯಮ 32 ಅಡಿ’ ಬಡ್ತಿ ಪಡೆದು ಕಾರ್ಯನಿರ್ವಹಿಸುತ್ತಿರುವ 2,103 ಎಇಇಗಳು, ಅದೇ ನಿಯಮದಡಿ ಎಇಇಯಿಂದ ಇಇ ಹುದ್ದೆಗೆ ಬಡ್ತಿ ಪಡೆದ 440 ಇಇಗಳು, ಇಇ ಹುದ್ದೆಯಿಂದ ಸೂಪರಿಟೆಂಡೆಂಟ್‌ ಎಂಜಿನಿಯರ್‌ (ಎಸ್‌ಇ) ಆಗಿ ಬಡ್ತಿ ಪಡೆದ 85 ಎಂಜಿನಿಯರ್‌ಗಳ ಬಡ್ತಿಯನ್ನೂ ಕ್ರಮಬದ್ಧಗೊಳಿಸಲು ಕಡತ ಸಿದ್ಧವಾಗಿದೆ.

‘ನಿವೃತ್ತ ಎಂಜಿನಿಯರ್‌ಗಳ ಬಡ್ತಿಯನ್ನು ಕ್ರಮಬದ್ಧಗೊಳಿಸುವ ಕಡತಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಒಂದೆರಡು ದಿನಗಳಲ್ಲಿ ಈ ಕುರಿತ ಆದೇಶ ಹೊರಬೀಳಲಿದೆ. ನಿಯಮ 32 ರಡಿ ಬಡ್ತಿ ಪಡೆದು ಸದ್ಯ ಕರ್ತವ್ಯ ನಿರ್ವಹಿಸುತ್ತಿರುವವರ ಪೈಕಿ ಇಲಾಖಾ ವಿಚಾರಣೆ ಎದುರಿಸುತ್ತಿರುವವರನ್ನು ಹೊರತುಪಡಿಸಿ ಉಳಿದವರನ್ನು ಕ್ರಮಬದ್ಧಗೊಳಿಸಲಾಗುತ್ತಿದೆ’ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ನಿಯಮ 32ರ ಅಡಿಯಲ್ಲಿ ಎಸ್‌ಇ ಹುದ್ದೆ ನಿರ್ವಹಿಸಿದ ಎಂಜಿನಿಯರ್‌ಗಳು ಮುಖ್ಯ ಎಂಜಿನಿಯರ್‌ (ಸಿಇ) ಆಗಿಯೂ ಬಡ್ತಿ ಪಡೆದಿದ್ದಾರೆ. ಎಸ್‌ಇ ಹುದ್ದೆಯವರೆಗಿನ ಬಡ್ತಿಯನ್ನು ಸಚಿವಾಲಯ (ಲೋಕೋಪಯೋಗಿ) ಕ್ರಮಬದ್ಧಗೊಳಿಸಬೇಕಿದ್ದು, ಮುಖ್ಯ ಎಂಜಿನಿಯರ್‌ ಸೇರಿದಂತೆ ಅದಕ್ಕಿಂತ ಉನ್ನತ ಹುದ್ದೆಗಳ ಬಡ್ತಿಯನ್ನು ಡಿಪಿಎಆರ್‌ ಕ್ರಮಬದ್ಧಗೊಳಿಸಬೇಕಿದೆ.

‘ಬಡ್ತಿ ಪ್ರಕರಣ (ಪವಿತ್ರ ಪ್ರಕರಣ) ನ್ಯಾಯಾಲಯದಲ್ಲಿ ಇದ್ದುದರಿಂದ ಬಡ್ತಿ ಕ್ರಮಬದ್ಧಗೊಳಿಸಿರಲಿಲ್ಲ. ನಿಯಮ 32 ರಡಿ ಬಡ್ತಿ ಪಡೆದ ದಿನದಿಂದ ಕ್ರಮಬದ್ಧಗೊಳಿಸದಿದ್ದರೆ ಪಿಂಚಣಿ ಸೌಲಭ್ಯಗಳು ಸಿಗುವುದಿಲ್ಲ’ ಎಂದೂ ಅಧಿಕಾರಿ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ಎಂಜಿನಿಯರುಗಳ ಸಂಘದ ಗೌರವ ಅಧ್ಯಕ್ಷ ಡಿ.ಎಸ್‌. ದೇವರಾಜು, ‘ಒಂದೂವರೆ ವರ್ಷಗಳ ಹೋರಾಟದ ಫಲವಾಗಿ ಬಡ್ತಿ ಕ್ರಮಬದ್ಧಗೊಳಿಸುವ ಪ್ರಕ್ರಿಯೆಯನ್ನು ಸಚಿವಾಲಯ ಆರಂಭಿಸಿದೆ. ನಿವೃತ್ತ ಎಂಜಿನಿಯರ್‌ಗಳ ಬಡ್ತಿ ಕ್ರಮಬದ್ಧಗೊಂಡ ಬಳಿಕ, ಕರ್ತವ್ಯ ನಿರ್ವಹಿಸುತ್ತಿರುವವರ ಬಡ್ತಿಯನ್ನು ಕ್ರಮಬದ್ಧಗೊಳಿಸುವ ಪ್ರಕ್ರಿಯೆಗೆ ಚಾಲನೆಗೆ ಸಿಗುವ ವಿಶ್ವಾಸವಿದೆ’ ಎಂದು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಕರೆ ಮಾಡಿ
ದರೂ ಅವರು ಕರೆ ಸ್ವೀಕರಿಸಲಿಲ್ಲ.

ಏನಿದು ನಿಯಮ 32: ಖಾಲಿ ಇರುವ ಹುದ್ದೆಗೆ ವಿಶೇಷ ಬಡ್ತಿ (ಸ್ಥಾನಪನ್ನ– ಆಫಿಸಿಯೇಟ್‌) ನೀಡಲು ಈ ನಿಯಮದಲ್ಲಿ ಅವಕಾಶವಿದೆ. ಹೀಗೆ ಬಡ್ತಿ ಪಡೆಯುವವರು ಪ್ರಭಾರ ಆಗಿರುತ್ತಾರೆ. ಅಂಥವರು ಮೂಲ ವೇತನದ ಶೇ 7ರಷ್ಟು ಅಧಿಕ ವೇತನ ಪಡೆಯಲು ಅರ್ಹರಾಗುತ್ತಾರೆ.

ನಿಯಮ 42: ಖಾಲಿ ಹುದ್ದೆಗಳಿಗೆ ಜ್ಯೇಷ್ಠತೆ ಪರಿಗಣಿಸಿ ನಿಯಮಾನುಸಾರ ಈ ನಿಯಮದಡಿ ರೆಗ್ಯುಲರ್‌ ಬಡ್ತಿ ನೀಡಲಾಗುತ್ತದೆ. ಐದು ವರ್ಷಗಳ ಕಾರ್ಯಕ್ಷಮತಾ ವರದಿ ಆಧರಿಸಿ, ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ಬಡ್ತಿ ನೀಡುತ್ತದೆ. ಹೀಗೆ ಬಡ್ತಿ ಪಡೆದವರು ಆ ಹುದ್ದೆಗೆ ನಿಗದಿಪಡಿಸಿದ ವೇತನ ಪಡೆಯಲು ಅರ್ಹರಾಗುತ್ತಾರೆ.

ಅವಕಾಶ ಇಲ್ಲದಿದ್ದರೂ ‘ನಿಯಮ 32’ ಬಳಕೆ

ಕರ್ನಾಟಕ ನಾಗರಿಕ ಸೇವಾ ನಿಯಮಗಳ ‘ನಿಯಮ 32’ರ ಅಡಿ ಬಡ್ತಿ ಪಡೆದು ಎಇಇ ಮತ್ತು ಇಇಗಳು ಎರಡು ತಿಂಗಳು, ಎಸ್‌ಇ ಮತ್ತು ಸಿಇಗಳು ನಾಲ್ಕು ತಿಂಗಳು ಮಾತ್ರ ಕಾರ್ಯನಿರ್ವಹಿಸಬಹುದು. ಆದರೆ, ಈ ಅಧಿಕಾರಿಗಳು ಹಲವು ವರ್ಷಗಳಿಂದ ಈ ನಿಯಮದಡಿ ಮುಂದುವರಿದಿದ್ದಾರೆ. ಅಷ್ಟೇ ಅಲ್ಲ, ಅದೇ ನಿಯಮದಡಿ ನಂತರ ಹುದ್ದೆಗಳಿಗೂ ಬಡ್ತಿ ಪಡೆದಿದ್ದಾರೆ!

ಪಿಂಚಣಿ, ಇಂಕ್ರಿಮೆಂಟ್‌: ಬಡ್ತಿ ಕ್ರಮಬದ್ಧಗೊಳ್ಳುವುದರಿಂದ ‘ಬಡ್ತಿ’ಗೆ ಅಧಿಕೃತ ಮುದ್ರೆ ಬೀಳುವ ಜೊತೆಗೆ ಪಿಂಚಣಿ ಮತ್ತು ಬಡ್ತಿ ಪಡೆದ ಹುದ್ದೆಯ ಇಂಕ್ರಿಮೆಂಟ್‌ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT