ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನವಿದ್ದರೂ ಕಾಮಗಾರಿಗಳ ಬಿಲ್‌ ಪಾವತಿ ತಡ

ಮುಖ್ಯ ಎಂಜಿನಿಯರ್‌ ಕಚೇರಿಯ ವಿಳಂಬ ಧೋರಣೆಗೆ ಗುತ್ತಿಗೆದಾರರ ಅಸಮಾಧಾನ
Last Updated 3 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆ, ಸೇತುವೆ, ಕಟ್ಟಡ ಕಾಮಗಾರಿಗಳ ಬಾಬ್ತು ಬಾಕಿ ಇರುವ ಬಿಲ್‌ ಪಾವತಿಗಾಗಿ ಆರ್ಥಿಕ ಇಲಾಖೆ ಬಿಡುಗಡೆ ಮಾಡಿದ್ದ ₹ 110 ಕೋಟಿ ಅನುದಾನವನ್ನು ಗುತ್ತಿಗೆದಾರರಿಗೆ ಪಾವತಿಸುವ ಪ್ರಕ್ರಿಯೆಯನ್ನು ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಬೆಂಗಳೂರು (ದಕ್ಷಿಣ) ವಲಯದ ಅಧಿಕಾರಿಗಳು 18 ದಿನಗಳಾದರೂ ಪೂರ್ಣಗೊಳಿಸಿಲ್ಲ ಎಂದು ಗುತ್ತಿಗೆದಾರರು ದೂರಿದ್ದಾರೆ.

ಲೋಕೋಪಯೋಗಿ ಇಲಾಖೆಯ ಬೆಂಗಳೂರು, ಧಾರವಾಡ, ಕಲಬುರ್ಗಿ ಮತ್ತು ಶಿವಮೊಗ್ಗ ವಲಯಗಳಿಗೆ ಅಕ್ಟೋಬರ್‌ 15ರಂದು ಏಕಕಾಲಕ್ಕೆ ಹಣ ಬಿಡುಗಡೆ ಮಾಡಲಾಗಿತ್ತು. ತಕ್ಷಣವೇ ಆಯಾ ವಲಯಗಳ ವ್ಯಾಪ್ತಿಯ ವಿಭಾಗಗಳ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಗಳಿಗೆ ಮಾರ್ಗಸೂಚಿಯ ಅನುಸಾರ ಹಣ ಬಿಡುಗಡೆ ಮಾಡಿ, ಗುತ್ತಿಗೆದಾರರಿಗೆ ಬಿಲ್‌ ಪಾವತಿಸುವಂತೆ ಸೂಚಿಸಲಾಗಿತ್ತು.

ಮೂರು ವಲಯಗಳಲ್ಲಿ ವಾರದೊಳಗೆ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲಾಗಿದೆ. ಬೆಂಗಳೂರು ವಲಯದ ಮುಖ್ಯ ಎಂಜಿನಿಯರ್‌ ಶಿವಯೋಗಿ ಹಿರೇಮಠ 11 ದಿನಗಳವರೆಗೂ ಈ ಬಗ್ಗೆ ಆದೇಶವನ್ನೇ ಹೊರಡಿಸಿರಲಿಲ್ಲ. 12ನೇ ದಿನ ಜಿಲ್ಲೆಗಳಿಗೆ ಅನುದಾನ ಹಂಚಿಕೆಯ ಆದೇಶ ಹೊರಬಿದ್ದಿದೆ.

‘18 ದಿನಗಳಾದರೂ ಅನುದಾನ ಹಂಚಿಕೆ ಮತ್ತು ಬಿಲ್‌ ಪಾವತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಅನುದಾನ ಹಂಚಿಕೆ ಪ್ರಮಾಣದಲ್ಲಿ ಬದಲಾವಣೆ ಮಾಡಿ ಮುಖ್ಯ ಎಂಜಿನಿಯರ್‌ ಪರಿಷ್ಕೃತ ಆದೇಶಗಳನ್ನು ಹೊರಡಿಸುತ್ತಲೇ ಇದ್ದಾರೆ. ಇದರಿಂದಾಗಿ ಪಿಡಬ್ಲ್ಯುಡಿ ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಗುತ್ತಿಗೆದಾರರೊಬ್ಬರು ದೂರಿದರು.

ಪಿಡಬ್ಲ್ಯುಡಿ ದಕ್ಷಿಣ ವಲಯದ ವ್ಯಾಪ್ತಿಗೆ ಬರುವ ಬೆಂಗಳೂರು ಕಟ್ಟಡಗಳ ವಿಭಾಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಮಗಾರಿ ನಿರ್ವಹಿಸಿದ್ದ ಗುತ್ತಿಗೆದಾರರು ಅಧಿಕಾರಿಗಳ ವಿಳಂಬ ಧೋರಣೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಿಜೆಪಿ ಶಾಸಕರಿಗೆ ಮಣೆ: ಅಕ್ಟೋಬರ್‌ ತಿಂಗಳ ಅನುದಾನ ಬಿಡುಗಡೆ ಆದೇಶದಲ್ಲಿ, ‘2019–20ನೇ ಸಾಲಿನಲ್ಲಿ ಮುಖ್ಯಮಂತ್ರಿಯವರಿಂದ ಅನುಮೋದಿಸಲಾದ ವಿವಿಧ ವಿಧಾನಸಭಾ ಕ್ಷೇತ್ರಗಳ ಕಾಮಗಾರಿಗಳ ಬಿಲ್‌ ಪಾವತಿಗಾಗಿ ಪೂರ್ಣವಾಗಿ ವಿನಿಯೋಗಿಸಬೇಕು’ ಎಂಬ ಷರತ್ತು ಹಾಕಲಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಬೆಂಗಳೂರು ವಲಯದ ಎಲ್ಲ ಜಿಲ್ಲೆ
ಗಳಲ್ಲಿ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳ ಕಾಮಗಾರಿಗಳ ಬಿಲ್‌ ಪಾವತಿಗೆ ಹೆಚ್ಚಿನ ಪ್ರಮಾಣದ ಅನುದಾನ ಹಂಚಿಕೆ ಮಾಡಲಾಗಿದೆ.

‘ಒಮ್ಮೆ ಅನುದಾನ ಹಂಚಿಕೆಯ ಆದೇಶ ಹೊರಡಿಸಲಾಗಿತ್ತು. ನಂತರ ಕೊಡಗು ಸೇರಿದಂತೆ ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಹಂಚಿಕೆ ಮಾಡಲಾಯಿತು. ಕೆಲವು ಜಿಲ್ಲೆಗಳಿಗೆ ಹಂಚಿಕೆ ಮಾಡಿದ್ದ ಅನುದಾನದಲ್ಲಿ ಕಡಿತ ಮಾಡಲಾಗಿದೆ. ನಿತ್ಯವೂ ಇದು ಬದಲಾಗುತ್ತಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪ್ರಕ್ರಿಯೆ ಪ್ರಗತಿಯಲ್ಲಿದೆ: ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಎಂಜಿನಿಯರ್‌ ಶಿವಯೋಗಿ ಹಿರೇಮಠ, ‘ನಮ್ಮ ಕಚೇರಿ ವ್ಯಾಪ್ತಿಯ ಎಲ್ಲ ವಿಭಾಗಗಳಿಗೆ ಅನುದಾನ ಹಂಚಿಕೆ ಮಾಡಿ ವಾರದ ಹಿಂದೆ ಆದೇಶ ಹೊರಡಿಸಲಾಗಿದೆ. ನಾಲ್ಕು ವಿಭಾಗಗಳಲ್ಲಿ ಬಿಲ್‌ ಪಾವತಿ ಮುಗಿದಿದೆ. ಉಳಿದ ವಿಭಾಗಗಳಲ್ಲಿ ಆದಷ್ಟು ಬೇಗ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲಾಗುವುದು’ ಎಂದು ಹೇಳಿದರು.

‘ವಿವರಣೆ ಪಡೆಯಲಾಗುವುದು’

ಬಿಲ್‌ ಪಾವತಿ ವಿಳಂಬ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಬಿ. ಗುರುಪ್ರಸಾದ್‌, ‘ಆರ್ಥಿಕ ಇಲಾಖೆಯಿಂದ ಅನುದಾನ ಬಿಡುಗಡೆ ಆದ ತಕ್ಷಣವೇ ಅದನ್ನು ಮುಖ್ಯ ಎಂಜಿನಿಯರ್‌ಗಳ ನೇತೃತ್ವದ ವಲಯ ಕಚೇರಿಗಳಿಗೆ ಹಂಚಿಕೆ ಮಾಡಲಾಗಿದೆ. ಉಳಿದ ಮೂರು ವಲಯಗಳಲ್ಲಿ ತಕ್ಷಣವೇ ಗುತ್ತಿಗೆದಾರರಿಗೆ ಬಿಲ್‌ ಪಾವತಿ ಮಾಡಿದ್ದಾರೆ. ಬೆಂಗಳೂರು ವಲಯದಲ್ಲಿ ವಿಳಂಬಕ್ಕೆ ಕಾರಣಗಳೇನು ಎಂಬುದರ ಕುರಿತು ವಿವರಣೆ ಪಡೆಯಲಾಗುವುದು’ ಎಂದರು.

ಅ.15ರಂದು ₹ 110 ಕೋಟಿ ಅನುದಾನ ಬಿಡುಗಡೆ

11 ದಿನಗಳ ಬಳಿಕ ವಿವಿಧ ವಿಭಾಗಗಳಿಗೆ ಹಂಚಿಕೆ

18 ದಿನ ಕಳೆದರೂ ಗುತ್ತಿಗೆದಾರರ ಕೈಸೇರದ ಹಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT