ಶುಕ್ರವಾರ, ಜನವರಿ 21, 2022
29 °C
ಹಂಚಿಕೆ ರದ್ದು– 30 ದಿನಗಳಲ್ಲಿ ವಾಪಸ್‌ಗೆ ಸೂಚನೆ: ಕೆಎಚ್‌ಬಿಗೆ ₹1 ಲಕ್ಷ ದಂಡ

ಸಂಸದ ಉಮೇಶ್ ಜಾದವ್‌ಗೆ ಹೈಕೋರ್ಟ್ ಶಾಕ್: ₹10 ಕೋಟಿ ಮೌಲ್ಯದ ನಿವೇಶನಕ್ಕೆ ಕೊಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಲಬುರ್ಗಿ ಕ್ಷೇತ್ರದ ಬಿಜೆಪಿ ಸಂಸದ ಉಮೇಶ್ ಜಿ. ಜಾಧವ್ ಅವರಿಗೆ ಸಂಬಂಧಪಟ್ಟ ಟ್ರಸ್ಟ್‌ಗೆ ಹಂಚಿಕೆ ಮಾಡಿದ್ದ ₹10 ಕೋಟಿ ಮೌಲ್ಯದ ಸಿ.ಎ (ನಾಗರಿಕ ಸೌಕರ್ಯ) ನಿವೇಶನವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಟ್ರಸ್ಟ್‌ ಜೊತೆ ಕೈಜೋಡಿಸಿದ್ದ ಕರ್ನಾಟಕ ಗೃಹ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, 30 ದಿನಗಳಲ್ಲಿ ಜಾಗ ವಾಪಸ್ ಪಡೆಯಲು ಸೂಚಿಸಿದೆ.

‘ಅತ್ಯಂತ ಆಘಾತಕಾರಿ ಅಂಶವೆಂದರೆ, ರಾಜ್ಯ ಸರ್ಕಾರದ ಸಂಸ್ಥೆಯಾಗಿರುವ ಕರ್ನಾಟಕ ಗೃಹ ಮಂಡಳಿಯೇ ನಿಯಮಾವಳಿಗಳನ್ನು ಅನುಸರಿಸದೆ ನಿವೇಶನ ಹಂಚಿಕೆ ಮಾಡಿದೆ’ ಎಂದೂ ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಕೆಎಚ್‌ಬಿಗೆ ₹1 ಲಕ್ಷ ದಂಡ ವಿಧಿಸಿದ ಪೀಠ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಮತ್ತು ದಂಡದ ಮೊತ್ತವನ್ನು ಅವರಿಂದಲೇ ವಸೂಲಿ ಮಾಡಬೇಕು’ ಎಂದು ಸೂಚಿಸಿತು.

ಯಲಹಂಕ ನ್ಯೂಟೌನ್‌ 5ನೇ ಹಂತದಲ್ಲಿನ ನಿವೇಶನವನ್ನು 2004ರ ಆಗಸ್ಟ್ 23ರಂದು ಜಾಧವ್ ಅವರ ಪತ್ನಿ ಗಾಯತ್ರಿ ಅಧ್ಯಕ್ಷರಾಗಿರುವ ಮೂರ್ತಿ ಚಾರಿಟಬಲ್ ಟ್ರಸ್ಟ್‌ಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿತ್ತು. 232 ಚದರ ಮೀಟರ್ ವಿಸ್ತೀರ್ಣದ ನಿವೇಶನಕ್ಕೆ ಟ್ರಸ್ಟ್ ₹3.87 ಲಕ್ಷ ಪಾವತಿಸಿತ್ತು.

ಎರಡು ವರ್ಷದಲ್ಲಿ ಶೈಕ್ಷಣಿಕ ಮತ್ತು ಸಾರ್ವಜನಿಕ ಉದ್ದೇಶಕ್ಕೆ ನಿವೇಶನ ಬಳಕೆಯಾಗಬೇಕು ಎಂಬ ಷರತ್ತು ವಿಧಿಸಲಾಗಿತ್ತು. 16 ವರ್ಷಗಳು ಕಳೆದರೂ ಯಾವುದೇ ಕಟ್ಟಡ ನಿರ್ಮಾಣ ಮಾಡಿರಲಿಲ್ಲ. 2020ರ ಜುಲೈ 28ರಂದು 278 ಚದರ ಮೀಟರ್‌ ಅಳತೆಯ ನಿವೇಶನಕ್ಕೆ ಕೆಎಚ್‌ಬಿ ಶುದ್ಧ ಕ್ರಯ ಪತ್ರ ಮಾಡಿಕೊಟ್ಟಿದೆ. ಹೆಚ್ಚುವರಿ ಭೂಮಿ ಸೇರಿ ಒಟ್ಟು ₹21.87 ಲಕ್ಷವನ್ನು ಟ್ರಸ್ಟ್‌ ಪಾವತಿಸಿದೆ.

ಇಡೀ ಪ್ರಕ್ರಿಯೆ ಪ್ರಶ್ನಿಸಿ ಕೋರಮಂಗಲದ ನಿವಾಸಿ ಆದಿನಾರಾಯಣ ಶೆಟ್ಟಿ ಎಂಬುವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ‘ನಿಯಮಗಳನ್ನು ಉಲ್ಲಂಘಿಸಿ ಸುಮಾರು ₹10 ಕೋಟಿ ಮೌಲ್ಯದ ನಿವೇಶನವನ್ನು ಕೆಎಚ್‌ಬಿ ಹಂಚಿಕೆ ಮಾಡಿದೆ. ಪ್ರಭಾವಿ ವ್ಯಕ್ತಿಗೆ ಅನುಕೂಲ ಮಾಡಿಕೊಡುವ ಒಂದೇ ಉದ್ದೇಶದಿಂದ ಹೀಗೆ ಮಾಡಲಾಗಿದೆ’ ಎಂದು ಆರೋಪಿಸಿದ್ದರು.

ನಿವೇಶನ ಹಸ್ತಾಂತರಿಸಲು ಟ್ರಸ್ಟ್ ಈ ಹಿಂದಿನ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠದ ಮುಂದೆ ಕಾಲಾವಕಾಶ ಕೋರಿತ್ತು. ಆದರೂ, ಗುರುವಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿತು. ಈ ಅರ್ಜಿ ಸಲ್ಲಿಸುವುದು ನ್ಯಾಯಸಮ್ಮತ ಅಲ್ಲ ಎಂದು ತಿಳಿಸಿದ ಪೀಠ, ಅರ್ಜಿ ವಿಲೇವಾರಿ ಮಾಡಿತು.‌

ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್ ಜಾಧವ್‌, 2019ರಲ್ಲಿ ನಡೆದ ಲೋಕಸಭೆ ಚುನಾವಣೆಗೆ ಮುನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ, ಚುನಾವಣೆಯಲ್ಲಿ ಗೆದ್ದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು