ಬೆಂಗಳೂರು: ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಹಂಗಾಮಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಮತ್ತು ಬಸವರಾಜ ಹೊರಟ್ಟಿ ಮಧ್ಯೆ ಪೈಪೋಟಿ ನಡೆಯುತ್ತಿರುವ ಬೆನ್ನಲ್ಲೆ, ಬಿಜೆಪಿ ವರಿಷ್ಠರ ಬುಲಾವ್ ಮೇರೆಗೆ ರಘುನಾಥರಾವ್ ಮಲ್ಕಾಪುರೆ ದೆಹಲಿಗೆ ಪ್ರಯಾಣಿಸಿದ್ದಾರೆ.
‘ಪ್ರಜಾವಾಣಿ’ ಜೊತೆಗೆ ಮಾತನಾಡಿದ ಮಲ್ಕಾಪುರೆ, ‘ಪೂರ್ವನಿಯೋಜಿತ ಕಾರ್ಯಕ್ರಮದಂತೆ ದೆಹಲಿಗೆ ಬಂದಿದ್ದೇನೆ. ಸಭಾಪತಿ ವಿಚಾರದಲ್ಲಿ ವರಿಷ್ಠರ ಜೊತೆ ಚರ್ಚಿಸುವ ಬಗ್ಗೆ ನೋಡೋಣ’ ಎಂದಷ್ಟೆ ಪ್ರತಿಕ್ರಿಯಿಸಿದರು.
ಇದೇ 19ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಬಿಜೆಪಿ ನಾಯಕರ ಸೂಚನೆಯಂತೆ 21ರಂದು ಸಭಾಪತಿ ಚುನಾವಣೆಗೆ ಸರ್ಕಾರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದಕ್ಕೆ ಮಲ್ಕಾಪುರೆ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಸಭಾಪತಿ ಸ್ಥಾನಕ್ಕಾಗಿ ಹೊರಟ್ಟಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ, ಮಲ್ಕಾಪುರೆ ಅವರ ಮನವೊಲಿಸಲು ವರಿಷ್ಠರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಈ ಮಧ್ಯೆ, ಸಭಾಪತಿ ಸ್ಥಾನ ದಲ್ಲಿ ಮಲ್ಕಾಪುರೆ ಅವರನ್ನೇ ಮುಂದುವರಿಸುವಂತೆ ಕುರುಬ ಸಮುದಾಯದ ಕೆಲವು ನಾಯಕರು ಒತ್ತಾಯಿಸಿದ್ದಾರೆ. ಬಿಜೆಪಿಯ ಕೆಲವು ನಾಯಕರೂ ಇದಕ್ಕೆ ದನಿಗೂಡಿಸಿದ್ದಾರೆ.
ಆದರೆ, ಜೆಡಿಎಸ್ ತ್ಯಜಿಸಿ ಪಕ್ಷಕ್ಕೆ ಬಂದಿರುವ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ನೀಡುವ ಬಗ್ಗೆ ಬಿಜೆಪಿ ನಾಯಕರು ಮಾತು ಕೊಟ್ಟಿದ್ದರು. ಕಳೆದ ಅಧಿವೇಶನದಲ್ಲಿಯೇ ಚುನಾವಣೆ ನಡೆಯಬೇಕಿತ್ತು. ಆದರೆ, ಇಬ್ಬರ ಮಧ್ಯೆ ಪೈಪೋಟಿ ಏರ್ಪಟ್ಟಿದ್ದರಿಂದ ನಡೆದಿರಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.