ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಗಡಿಯಲ್ಲಿ ಕಾರನ್ನೇರಿದ ರಾಹುಲ್‌ ಗಾಂಧಿ: ಕಾದು ನಿಂತಿದ್ದ ಜನರಿಗೆ ನಿರಾಸೆ

ಒಂದೇ ಬಣ್ಣ, ವಿನ್ಯಾಸದ ಸೀರೆಯುಟ್ಟು ನಿಂತಿದ್ದ ಲೈಂಗಿಕ ಅಲ್ಪಸಂಖ್ಯಾತರು ಪೆಚ್ಚುಮೋರೆ ಹಾಕಿಕೊಂಡು ಹಿಂತಿರುಗಿದರು
Last Updated 15 ಅಕ್ಟೋಬರ್ 2022, 2:09 IST
ಅಕ್ಷರ ಗಾತ್ರ

ಬಳ್ಳಾರಿ: ಭಾರತ್ ಜೋಡೊ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನ ಬಳ್ಳಾರಿ ಗಡಿಯ ಒಎಂಸಿ ರೈಲ್ವೆ ಗೇಟ್‌ ಬಳಿ ಶುಕ್ರವಾರ ಸಂಜೆ ಸ್ವಾಗತಿಸಲಾಯಿತು.

ಪೂರ್ವನಿಗದಿತ ಕಾರ್ಯಕ್ರಮದಂತೆ ರಾಹುಲ್ ಗಾಂಧಿ ಅಲ್ಲಿಂದ 3 ಕಿ.ಮೀ ದೂರದಲ್ಲಿರುವ ಹಲಕುಂದಿ ಮಠಕ್ಕೆ ನಡೆದು ಬರಬೇಕಿತ್ತು. ಆದರೆ, ಯಾವುದೇ ಮುನ್ಸೂಚನೆ ನೀಡದೆ ಕಾರನ್ನೇರಿ ಮಠಕ್ಕೆ ಪ್ರಯಾಣಿಸಿದರು.

ರಾಹುಲ್ ಅವರನ್ನು ಬಳ್ಳಾರಿ ಜಿಲ್ಲೆಗೆ ಸ್ವಾಗತಿಸಲು ಕಾದು ನಿಂತಿದ್ದ ಸಾವಿರಕ್ಕೂ ಹೆಚ್ಚು ಕಲಾವಿದರು ತಮ್ಮ ಕಲಾ
ಪ್ರದರ್ಶನಕ್ಕೆ ಅವಕಾಶ ಸಿಗದಿದ್ದರಿಂದ ನಿರಾಶರಾದರು. ಅಲ್ಲದೆ, ಒಂದೇ ಬಣ್ಣ, ವಿನ್ಯಾಸದ ಸೀರೆಯುಟ್ಟು ನಿಂತಿದ್ದ ಲೈಂಗಿಕ ಅಲ್ಪಸಂಖ್ಯಾತರು ಪೆಚ್ಚುಮೋರೆ ಹಾಕಿಕೊಂಡು ಹಿಂತಿರುಗಿದರು.

ಪೂರ್ಣಕುಂಭದೊಂದಿಗೆ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲು ಸಜ್ಜಾಗಿದ್ದ ಅನೇಕ ಮಹಿಳೆಯರಿಗೆ ರಾಹುಲ್ ಹಣೆಗೆ ತಿಲಕವಿಟ್ಟು ಸ್ವಾಗತಿಸುವ ಅವಕಾಶ ದೊರೆಯಲಿಲ್ಲ. ಗಡಿ ಭಾಗದಿಂದ ಹಲಕುಂದಿ ಮಠದವರೆಗೂ ರಾಹುಲ್ ಗಾಂಧಿ ಅವರನ್ನು ನೋಡಲು ಕಾದು ಕುಳಿತಿದ್ದ ಜನರೂ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂತಿರುಗಿದರು. ಆ ಸ್ಥಳದಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು.

’ಸ್ವಾಗತ ಕೋರಲು ಕಲಾವಿದರು ಬಂದಿರುವುದನ್ನು ರಾಹುಲ್ ಗಾಂಧಿ ಅವರಿಗೆ ಪಕ್ಷದ ಹಿರಿಯ ನಾಯಕರು ಹೇಳಿರಲಿಲ್ಲ. ಸಂವಹನದ ಕೊರತೆಯಿಂದಾಗಿ ಹೀಗಾಗಿದೆ‘ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಚಿತ್ರದುರ್ಗದ ರಾಂಪುರದಿಂದ ಬೆಳಿಗ್ಗೆ ಪಾದಯಾತ್ರೆ ಆರಂಭಿಸಿದ ರಾಹುಲ್ 11 ಗಂಟೆ ಸುಮಾರಿಗೆ ಜಾಜಿರಕಲ್ಲು ಟೋಲ್ ಪ್ಲಾಜಾಕ್ಕೆ ಬಂದರು. ಅಲ್ಲಿ ಕೆಲಕಾಲ ವಿಶ್ರಾಂತಿ ಪಡೆದ ಬಳಿಕ ಸಂಜೆ ಪಾದಯಾತ್ರೆ ಪುನರಾರಂಭಿಸಿದರು. ರಾ‌ಜ್ಯದ ಫೈರಿಂಗ್‌ ಝೋನ್‌ ಇರುವ ಜಾಗದಲ್ಲಿ ಕತ್ತಲು ಆವರಿಸಿದ್ದರಿಂದ ಭದ್ರತೆ ದೃಷ್ಟಿಯಿಂದ ರಾಹುಲ್‌ ಅವರನ್ನು ಕಾರು ಹತ್ತಿಸಿ ಕಳುಹಿಸಲಾಯಿತು ಎಂದು ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT