ರಾಹುಲ್ ಗಾಂಧಿ ಜಾಲತಾಣ ಹ್ಯಾಕ್!

ಬೆಂಗಳೂರು: ಹಣ ವಿನಿಮಯ ಏಜೆನ್ಸಿ ಹಾಗೂ ಗೇಮಿಂಗ್ ಜಾಲತಾಣಗಳನ್ನು ಸಲೀಸಾಗಿ ಹ್ಯಾಕ್ ಮಾಡಿ ‘ಬಿಟ್ ಕಾಯಿನ್ (ಬಿಟಿಸಿ)’ ದೋಚುತ್ತಿದ್ದ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26), ದೇಶದ ರಾಜಕೀಯ ಪ್ರಮುಖರ ಜಾಲತಾಣಗಳನ್ನೂ ಹ್ಯಾಕ್ ಮಾಡಿದ್ದ ಸಂಗತಿ ಬಯಲಾಗಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಆರೋಪಿ ಶ್ರೀಕೃಷ್ಣ ವಿರುದ್ಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಸಿಬಿ ಪೊಲೀಸರು, ಜಾಲತಾಣ ಹ್ಯಾಕ್ ಆಗಿದ್ದ ವ್ಯಕ್ತಿಗಳ ಹೆಸರು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಆರೋಪಿ ಶ್ರೀಕೃಷ್ಣ ಸಹ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
‘ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಉದ್ಯಮಿ ವಿಜಯ್ ಮಲ್ಯ, ಪತ್ರಕರ್ತೆ ಬರ್ಖಾ ದತ್ ಸೇರಿದಂತೆ ಹಲವರ ಜಾಲತಾಣ ಹಾಗೂ ಟ್ವಿಟರ್ ಖಾತೆಗಳನ್ನು ಶ್ರೀಕೃಷ್ಣ ಹ್ಯಾಕ್ ಮಾಡಿದ್ದ’ ಎಂಬ ಮಾಹಿತಿ ಪಟ್ಟಿಯಲ್ಲಿ ದಾಖಲಾಗಿದೆ.
‘ದೆಹಲಿಯ ‘ನೆಟ್4ಇಂಡಿಯಾ’ ಕಂಪನಿಯು ಜಾಲತಾಣಗಳ ಡೊಮೇನ್ (ಯುಆರ್‌ಎಲ್ ಹೆಸರು) ಹಾಗೂ ಹೋಸ್ಟಿಂಗ್ (ಜಾಲತಾಣವನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ವ್ಯವಸ್ಥೆ) ಸೇವೆ ನೀಡುತ್ತಿದೆ. ರಾಹುಲ್ ಗಾಂಧಿ, ವಿಜಯ್ ಮಲ್ಯ ಹಾಗೂ ಬರ್ಖಾ ದತ್ ಅವರ ಜಾಲತಾಣಗಳನ್ನು ‘ನೆಟ್4ಇಂಡಿಯಾ’ ಕಂಪನಿ ನಿರ್ವಹಣೆ ಮಾಡುತ್ತಿತ್ತು.'
'2016ರ ಡಿಸೆಂಬರ್‌ನಲ್ಲಿ 'ನೆಟ್4ಇಂಡಿಯಾ' ದತ್ತಾಂಶ ಕೇಂದ್ರದ ಮುಖ್ಯ ಸರ್ವರ್ ಅನ್ನು ಹ್ಯಾಕ್ ಮಾಡಿದ್ದ ಶ್ರೀಕೃಷ್ಣ, ದತ್ತಾಂಶ ಕದ್ದಿದ್ದ. ರಿಮೋಟ್ ಕೋಡ್ ಎಕ್ಸಿಕ್ಯೂಷನ್ ತಂತ್ರಜ್ಞಾನದ ಮೂಲಕ ಆರೋಪಿ ಈ ಕೃತ್ಯ ಎಸಗಿದ್ದ’ ಎಂಬ ಸಂಗತಿ ಆರೋಪ ಪಟ್ಟಿಯಲ್ಲಿದೆ.
‘ರಾಹುಲ್ ಗಾಂಧಿ, ವಿಜಯ್ ಮಲ್ಯ ಹಾಗೂ ಬರ್ಖಾ ದತ್ ಜಾಲತಾಣಗಳ ‘ಡ್ಯಾಶ್ ಬೋರ್ಡ್’ಗಳನ್ನು ಆರೋಪಿ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದ. ಜಾಲತಾಣದಲ್ಲಿದ್ದ ಟ್ವಿಟರ್ ಖಾತೆ ವಿವರ ಹಾಗೂ ‘ಡಿಎನ್‌ಎಸ್ ಅಡ್ರೆಸ್’ ದತ್ತಾಂಶ ಕದ್ದಿದ್ದ. ಅದೇ ದತ್ತಾಂಶ ಬಳಸಿಕೊಂಡು ಡ್ಯಾಶ್‌ಬೋರ್ಡ್ ಹಾಗೂ ಟ್ವಿಟರ್ ಖಾತೆಗಳ ಪಾಸ್‌ವರ್ಡ್ ಬದಲಾಯಿಸಿದ್ದ.’
‘ಲಿಜಿಯೊನ್’ ಹೆಸರಿನಿಂದ ಗುರುತಿಸಿಕೊಂಡಿದ್ದ ಶ್ರೀಕೃಷ್ಣ, ಸ್ಕೈಪೇ ಮೂಲಕ ‘ನೆಟ್4ಇಂಡಿಯಾ’ಗೆ ಸಂದೇಶ ಕಳುಹಿಸಿದ್ದ. ಬಿಟ್ ಕಾಯಿನ್ ರೂಪದಲ್ಲಿ ಹಣಕ್ಕೆ ಒತ್ತಾಯಿಸಿದ್ದ. ಹಣ ಕೊಡದಿದ್ದರೆ, ಎಲ್ಲ ದತ್ತಾಂಶಗಳನ್ನು ಅಳಿಸಿ ಹಾಕುವುದಾಗಿ ಬೆದರಿಸಿದ್ದ. ಕಂಪನಿ ಅಧಿಕಾರಿಗಳು ಹಣ ಕೊಟ್ಟ ಬಗ್ಗೆಯೂ ಮಾಹಿತಿ ಇದೆ. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗಲೇ ಅಧಿಕಾರಿಗಳು, ದೆಹಲಿಯ ಆರ್ಥಿಕ ಅಪರಾಧ ದಳದ (ಇಒಎನ್) ಠಾಣೆಗೆ ದೂರು ನೀಡಿದ್ದರು. ಆರೋಪಿ ‘ಲಿಜಿಯೋನ್’ ಹೆಸರಿನಲ್ಲೇ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಶ್ರೀಕೃಷ್ಣನ ಸುಳಿವೇ ಸಿಕ್ಕಿರಲಿಲ್ಲ’ ಎಂಬ ಮಾಹಿತಿಯೂ ದೋಷಾರೋಪ ಪಟ್ಟಿಯಲ್ಲಿದೆ.
‘ಲ್ಯಾಪ್‌ಟಾಪ್ ಜೊತೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದ ಶ್ರೀಕೃಷ್ಣ, ಕ್ಷಣಮಾತ್ರದಲ್ಲಿ ಸರ್ವರ್ ಹಾಗೂ ಜಾಲತಾಣಗಳನ್ನು ಹ್ಯಾಕ್ ಮಾಡುವಲ್ಲಿ ಪರಿಣಿತನಾಗಿದ್ದ. ಎನ್‌ಡಿಟಿವಿ ವಾಹಿನಿ ಜಾಲತಾಣವನ್ನೂ ಹ್ಯಾಕ್ ಮಾಡಿ ಹಣಕ್ಕೆ ಬೇಡಿಕೆ ಇರಿಸಿದ್ದ’ ಎಂಬ ಸಂಗತಿಯೂ ಸಿಸಿಬಿ ಪೊಲೀಸರ ಆರೋಪ ಪಟ್ಟಿಯಲ್ಲಿದೆ.
‘ನೆಟ್4ಇಂಡಿಯಾ’ ಕಂಪನಿ ಮೂಲಕವೇ ಎನ್‌ಡಿಟಿವಿ ವಾಹಿನಿ ಜಾಲತಾಣ ನಿರ್ವಹಣೆ ಮಾಡಲಾಗುತ್ತಿತ್ತು. ಕಂಪನಿ ಸರ್ವರ್ ಹ್ಯಾಕ್ ಮಾಡಿದ್ದ ಆರೋಪಿ, ಜಾಲತಾಣ ಹಾಗೂ ಟ್ವಿಟರ್ ಖಾತೆಗಳ ಮಾಹಿತಿ ಕದ್ದಿದ್ದ. ಯೂಸರ್‌ನೇಮ್ ಹಾಗೂ ಪಾಸ್‌ವರ್ಡ್ ಬದಲಾಯಿಸಿ, ಸಂದೇಶವನ್ನೂ ಪ್ರಕಟಿಸಿದ್ದ’ ಎಂಬ ಮಾಹಿತಿಯೂ ಇದೆ.
‘ಡಾರ್ಕ್‌ನೆಟ್ ಮೂಲಕ ಡ್ರಗ್ಸ್ ಖರೀದಿ’
‘ಕೆಂಪೇಗೌಡ ನಗರ ಠಾಣೆಯಲ್ಲಿ ದಾಖಲಾಗಿರುವ ಡ್ರಗ್ಸ್ ಪ್ರಕರಣದಲ್ಲಿ ಶ್ರೀಕೃಷ್ಣ ಸಹ ಆರೋಪಿ. ಡಾರ್ಕ್‌ನೆಟ್ ಮೂಲಕ ವಿದೇಶದಲ್ಲಿರುವ ಪೆಡ್ಲರ್‌ಗಳನ್ನು ಸಂಪರ್ಕಿಸುತ್ತಿದ್ದ ಶ್ರೀಕೃಷ್ಣ, ಅವರಿಂದ ಡ್ರಗ್ಸ್ ತರಿಸಿ ಇತರೆ ಆರೋಪಿಗಳಿಗೆ ನೀಡುತ್ತಿದ್ದ. ತಾನು ಡ್ರಗ್ಸ್ ಸೇವಿಸುತ್ತಿದ್ದ. ಹಣ ವರ್ಗಾವಣೆಯನ್ನು ಬಿಟ್ ಕಾಯಿನ್ ಮೂಲಕವೇ ಮಾಡುತ್ತಿದ್ದ’ ಎಂಬ ಅಂಶ ಆರೋಪ ಪಟ್ಟಿಯಲ್ಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.