ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕನ ಡಿಪ್ಸ್‌ ಸವಾಲು ಗೆದ್ದ ರಾಹುಲ್‌

ಜನಸಾಗರದಲ್ಲಿ ತೇಲಿದ ಭಾರತ್‌ ಜೋಡೊ ಯಾತ್ರೆ l ಮಹಿಳಾ ಕೂಲಿ ಕಾರ್ಮಿಕರ ಕೈಹಿಡಿದು ಹೆಜ್ಜೆ
Last Updated 11 ಅಕ್ಟೋಬರ್ 2022, 18:34 IST
ಅಕ್ಷರ ಗಾತ್ರ

ಚಳ್ಳಕೆರೆ (ಚಿತ್ರದುರ್ಗ): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆ ಮಂಗಳವಾರ ಜನಸಾಗರದಲ್ಲಿ ತೇಲಿತು. ಯಾತ್ರೆಯ ನಡುವೆ ರಾಹುಲ್‌ ಗಾಂಧಿ ಬಾಲಕನೊಂದಿಗೆ ಡಿಪ್ಸ್‌ ಹೊಡೆದು ದೈಹಿಕ ಕ್ಷಮತೆ ಪ್ರದರ್ಶಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ರಾಹುಲ್‌ಗೆ ಸಾಥ್‌ ನೀಡಿ ಗಮನ ಸೆಳೆದರು.

ಹಿರಿಯೂರು ತಾಲ್ಲೂಕಿನ ಹರ್ತಿ ಕೋಟೆಯಿಂದ ಆರಂಭವಾದ 12ನೇ ದಿನದ ಪಾದಯಾತ್ರೆ 24 ಕಿ.ಮೀ. ಸಾಗಿ ಚಳ್ಳಕೆರೆ ತಲುಪಿತು. ಯಾತ್ರೆಯು ಕಾಂಗ್ರೆಸ್‌ ಶಾಸಕ ಟಿ.ರಘುಮೂರ್ತಿ ಪ್ರತಿನಿಧಿಸುತ್ತಿರುವ ಕ್ಷೇತ್ರ ತಲುಪಿದಾಗ ಸ್ವಾಗತಕ್ಕೆ ಕಾದುನಿಂತಿದ್ದ ಜನಸಾಗರದ ಹುರುಪು ಇಮ್ಮಡಿಯಾಗಿತ್ತು.

ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿ ಸಮೀಪ ಯಾತ್ರೆ ಸಾಗುವಾಗ ಬಾಲಕ ನೊಬ್ಬ ರಾಹುಲ್‌ ಅವರ ಗಮನ ಸೆಳೆ ದಿದ್ದೇ ತಡ ಆತನನ್ನು ತಮ್ಮ ಸಮೀಪಕ್ಕೆ ಕರೆದು ಕೆಲ ಹೊತ್ತು ಮಾತುಕತೆ ನಡೆಸಿದರಲ್ಲದೆ, ಆತನಿಂದ ಬಲಪ್ರದರ್ಶನದ ಸವಾಲು ಸ್ವೀಕರಿಸಿ ಕಸರತ್ತು ಪ್ರದರ್ಶನಕ್ಕೆ ಮುಂದಾದರು. ಬಾಲಕನ ಮಾರ್ಗದರ್ಶನದಲ್ಲಿ ಹೆದ್ದಾರಿಯ ಸರ್ವಿಸ್‌ ರಸ್ತೆಯಲ್ಲಿಯೇ ಡಿಪ್ಸ್‌ ಹೊಡೆದರು. ಡಿ.ಕೆ.ಶಿವಕುಮಾರ್‌ ಸಹ ತಮ್ಮ ನಾಯಕನೊಟ್ಟಿಗೆ ಬಲ ಪ್ರದರ್ಶಿಸಿದರು. ಆಗ ಸುತ್ತಲಿದ್ದ ಜನಸಮೂಹದ ಕರತಾಡನ ಮುಗಿಲು ಮುಟ್ಟಿತು.

ಸೋಮವಾರ ರಾತ್ರಿಯಿಡೀ ಸುರಿದ ಮಳೆ ಮಂಗಳವಾರ ಬೆಳಿಗ್ಗೆ ಕೊಂಚ ಬಿಡುವು ನೀಡಿತಾದರೂ, ನಿತ್ಯ ಬೆಳಿಗ್ಗೆ 6.30ಕ್ಕೆ ಆರಂಭವಾಗು ತ್ತಿದ್ದ ಪಾದಯಾತ್ರೆ ಒಂದು ಗಂಟೆ ತಡವಾಗಿ ಶುರುವಾಯಿತು. ಸಂಜೆ ಯಾತ್ರೆ ಅಂತ್ಯವಾಗುವ ಹೊತ್ತಿನವರೆಗೂ ಬಿಡುವು ನೀಡಿದ್ದ ಮಳೆ ಮತ್ತೆ ಜಿಟಿಜಿಟಿ ರೂಪದಲ್ಲಿ ಬರತೊಡಗಿತು. ಅದನ್ನು ಲೆಕ್ಕಿಸದೇ ರಾಹುಲ್‌ ಜನರನ್ನು ಉದ್ದೇಶಿಸಿ ಮಾತನಾಡಿದರು.

ಹರ್ತಿಕೋಟೆ ಬಳಿ ಕುತೂಹಲದಿಂದ ಯಾತ್ರೆ ವೀಕ್ಷಿಸುತ್ತಿದ್ದ ಚಿಕ್ಕಮಕ್ಕಳನ್ನು ಬಳಿಗೆ ಕರೆದ ರಾಹುಲ್‌, ಬಿಗಿದಪ್ಪಿದರಲ್ಲದೆ, ಅವರ ಶಿಕ್ಷಣದ ಮಾಹಿತಿ ಪಡೆದರು. ಗೊಲ್ಲಹಳ್ಳಿ ಸಮೀಪ ಹೆದ್ದಾರಿ ಕಾಮಗಾರಿ ನಡೆಸುತ್ತಿದ್ದ ಮಹಿಳೆಯರನ್ನು ಕರೆದು ಶ್ರಮದ ಬಗ್ಗೆ ವಿಚಾರಿಸಿದರು. ಮಹಿಳಾ ಕೂಲಿ ಕಾರ್ಮಿಕರ ಕೈಹಿಡಿದು ಹೆಜ್ಜೆಹಾಕಿದರು. ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದ ಬಾಲಕನೊಬ್ಬನ ಚಪ್ಪಲಿ ಕಳಚಿದಾಗ ರಾಹುಲ್‌ ನೆರವಿಗೆ ಧಾವಿಸಿದರು. ಬಾಲಕನ ಕಾಲು ಹಿಡಿದು ಚಪ್ಪಲಿ ಸರಿಪಡಿಸಿದ್ದು, ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.

ಸಂಜೆ ಯಾತ್ರೆ ಪುನರಾರಂಭ ವಾಗುವ ಹೊತ್ತಿಗೆ ರಾಜ್ಯದ ವಿವಿಧೆಡೆ ಯಿಂದ ಜನಸಾಗರ ಹರಿದುಬಂದಿತ್ತು. ಭಾರಿ ಸಂಖ್ಯೆಯ ಜನರನ್ನು ಕಂಡು ಪುಳಕಿತಗೊಂಡಂತೆ ಕಂಡುಬಂದ ರಾಹುಲ್‌, ಉತ್ಸಾಹದಿಂದಲೇ ಹೆಜ್ಜೆ ಹಾಕಿದರು. ಮಧ್ಯಾಹ್ನದ ಬಳಿಕ ಅವರ ಹೆಜ್ಜೆಯ ಗತಿಯಲ್ಲಿ ವೇಗವಿತ್ತು. ಪಾದಯಾತ್ರೆ ಸಾಗುವ ಮಾರ್ಗದ ಎರಡೂ ಬದಿಯಲ್ಲಿ ನಿಂತಿದ್ದ ಮಹಿಳೆಯರು ಅಲ್ಲಲ್ಲಿ ಆರತಿ ಬೆಳಗಿ ರಾಹುಲ್‌ ಅವರನ್ನು ಹರಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಾಷ್ಟ್ರ ನಾಯಕರನ್ನು ಕಣ್ತುಂಬಿಕೊಳ್ಳುವ ಕಾತುರದಿಂದ ಕಾಯುತ್ತಿದ್ದವರು ಘೋಷಣೆಗಳನ್ನು ಕೂಗಿ ಬೆಂಬಲಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್‌ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್‌, ದಿಗ್ವಿಜಯ್‌ ಸಿಂಗ್‌, ಕನ್ಹಯ್ಯ ಕುಮಾರ್‌, ವೀರಪ್ಪ ಮೊಯಿಲಿ ಸೇರಿದಂತೆ ಅನೇಕ ಗಣ್ಯರು ಪಾದಯಾತ್ರೆ ಯಲ್ಲಿ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT