ಭಾನುವಾರ, ಏಪ್ರಿಲ್ 11, 2021
26 °C
ಉತ್ತರ ಕೊಡಗಿನಲ್ಲಿ ಅಪಾರ ನಷ್ಟ, ಹಾನಿ ಪೀಡತ ಪ್ರದೇಶಕ್ಕೆ ಅಧಿಕಾರಿಗಳ ದೌಡು

ಆಲಿಕಲ್ಲು ಹೊಡೆತಕ್ಕೆ ರೈತರು ಕಂಗಾಲು

ಆದಿತ್ಯ ಕೆ.ಎ. / ನಯನತಾರಾ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ / ಶನಿವಾರಸಂತೆ: ಕೊಡಗು ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಹಾಗೂ ಸಂಜೆ ಸುರಿದ ಆಲಿಕಲ್ಲು ಮಳೆಯಿಂದ ಅಪಾರ ನಷ್ಟವುಂಟಾಗಿದೆ. ಅದರಲ್ಲೂ ಉತ್ತರ ಕೊಡಗಿನಲ್ಲಿ ಆಲಿಕಲ್ಲಿನ ಹೊಡೆತಕ್ಕೆ ಬೆಳೆಗಾರರು ಕಂಗಾಲಾಗಿದ್ದಾರೆ.

ಅದರಲ್ಲೂ ಕೆಲವು ಭಾಗದಲ್ಲಿ ಸುರಿದ ಆಲಿಕಲ್ಲಿನ ರಾಶಿ ಶನಿವಾರ ಸಂಜೆಯಾದರೂ ಕರಗಿರಲಿಲ್ಲ! ಅಂಕನಹಳ್ಳಿ ಶಾಲೆಯ ಆವರಣದಲ್ಲಿ ಬಿದ್ದಿದ್ದ ದೊಡ್ಡ ಗಾತ್ರದ ಆಲಿಕಲ್ಲಿನ ರಾಶಿ ನೋಡಲು ಶನಿವಾರ ದೂರದ ಊರುಗಳಿಂದ ಜನರು ಧಾವಿಸಿದ್ದರು. ದಪ್ಪ ಗಾತ್ರ ಆಲಿಕಲ್ಲು ಹಿಡಿದು ಫೋಟೊ ತೆಗೆದುಕೊಂಡರು.

ವರ್ಷಾನುಗಟ್ಟಲೇ ಶ್ರಮಿಸಿ ಬೆಳೆದಿದ್ದ ತೋಟಗಾರಿಕೆ ಬೆಳೆಗಳು ಕ್ಷಣಮಾತ್ರದಲ್ಲಿ ಆಲಿಕಲ್ಲಿನ ಹೊಡೆತಕ್ಕೆ ಮಣ್ಣು ಪಾಲಾಗಿವೆ ಎಂದು ರೈತರು ನೋವು ತೋಡಿಕೊಂಡರು. ಹಿಂದೆ ಯಾವಾಗಲೂ ಈ ರೀತಿಯ ಆಲಿಕಲ್ಲು ಬಿದಿದ್ದ ನೆನಪು ಇಲ್ಲ ಎಂದು ಹಲವರು ಹೇಳಿದರು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರ ಸೂಚನೆಯ ಮೇರೆಗೆ ಶನಿವಾರ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಕಾಫಿ ಮಂಡಳಿ ಅಧಿಕಾರಿಗಳು ಹಾನಿ ಪೀಡಿತ ದೌಡಾಯಿಸಿದ್ದು ಹಾನಿಯ ವಿವರ ಕಲೆಹಾಕಿದರು. 

ಅಂಕನಹಳ್ಳಿ, ಗಂಗಾವರ, ಸೀಗೆಮರೂರು, ಮೆಣಸ, ಬೆಟ್ಟದಳ್ಳಿ, ಮನೆಹಳ್ಳಿ, ನಾಗವಾರ, ಮೈಲಾಪುರ, ಬಡುಬನಹಳ್ಳಿ, ಅಮ್ಮಳ್ಳಿ, ನಿಡ್ತ, ದೊಡ್ಡಳ್ಳಿ, ಮುಳ್ಳೂರು, ಸಿಡಿಗಳಲೆ, ಕೈಸರವಳ್ಳಿ ಗ್ರಾಮಗಳಲ್ಲಿ ಜೋಳ 155 ಎಕರೆ, ಕಾಳು ಮೆಣಸು 400, ಹಸಿರು ಮೆಣಸಿನಕಾಯಿ 123 ಎಕರೆ, ಬಾಳೆ 95 ಎಕರೆ, ಶುಂಠಿ 129, ಸಿಹಿಗೆಣಸು 112 ಎಕರೆ, ಕಾಫಿ 1,450 ಎಕರೆ, ಅಡಿಕೆ 198 ಎಕರೆಯಷ್ಟು ನಷ್ಟ ಹೊಂದಿದೆ. ಇದು ಪ್ರಾಥಮಿಕ ಅಂದಾಜಾಗಿದ್ದು ಹಾನಿ ಪ್ರಮಾಣ ಇನ್ನೂ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮೇಲ್ಚಾವಣಿ ಕೆಳಗೆ ಬಿದ್ದು ಹಾನಿಯಾಗಿದೆ. ನಿಡ್ತ, ಅಂಕನಹಳ್ಳಿ, ಬೆಟ್ಟದಳ್ಳಿ, ಮೆಣಸ, ಗಂಗಾವರ ಗ್ರಾಮಗಳಲ್ಲಿ ಹಸಿರು ಮೆಣಸಿನಕಾಯಿ ಗಿಡಗಳು ಸಂಪೂರ್ಣ ನೆಲಕಚ್ಚಿವೆ. ಕಾಫಿ ಗಿಡ, ಕಾಳುಮೆಣಸು ಕಡ್ಡಿ, ಎಲೆಗಳೂ ಉದುರಿ ಬಿದ್ದಿವೆ.

‘ಜೀವನದಲ್ಲಿ ಇದೇ ಮೊದಲ ಬಾರಿ ಆಲಿಕಲ್ಲು ಮಳೆ ಧಾರಾಕಾರವಾಗಿ ಸುರಿದಿದ್ದನ್ನ ನೋಡಿದ್ದು, ಕೆಲವು ಗ್ರಾಮಗಳ ರಸ್ತೆ, ಮನೆಯಂಗಳದಲ್ಲಿ ಆಲಿಕಲ್ಲು ಬಿದ್ದಿದ್ದು ಕಾಶ್ಮೀರದ ಹಿಮಪಾತವನ್ನು ನೆನಪಿಸಿತು. ಆಲಿಕಲ್ಲು ಮಳೆಯಿಂದ ಬೆಳೆ ಹಾನಿಯಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಶಿಡಿಗಳಲೆ ಗ್ರಾಮದ ಕೃಷಿಕ ನಿವೃತ್ತ ಪ್ರಾಂಶುಪಾಲ ಎಸ್.ಎಂ.ಉಮಾಶಂಕರ್ ಆತಂಕದಿಂದ ನುಡಿದರು.

ಕಂದಾಯ ಪರಿವೀಕ್ಷಕ ಬಿ.ಆರ್.ಮಂಜುನಾಥ್, ತೋಟಗಾರಿಕಾ ಇಲಾಖೆಯ ಕೆ.ಎಸ್.ಸಿಂಧೂ, ಕೃಷಿ ಇಲಾಖೆಯ ಮನಸ್ವಿ, ಕಾಫಿ ಬೋರ್ಡ್ ಇಲಾಖೆಯ ಅಧಿಕಾರಿ ವಿಶ್ವನಾಥ್, ಗ್ರಾಮ ಲೆಕ್ಕಾಧಿಕಾರಿ ವಿಶ್ವವಾಣಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಇನ್ನು ಮಡಿಕೇರಿ ಸುತ್ತಮುತ್ತ ಶುಕ್ರವಾರ ಸಂಜೆ ಮಳೆ ಅಬ್ಬರಿಸಿ ಆತಂಕ ಸೃಷ್ಟಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು