ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಕಾಲೀನ ಸರಕಾದರೆ ಮಾತ್ರ ಭಾಷೆಗೆ ಉಳಿವು- ಪ್ರೊ.ಬಿ.ಕೆ. ತುಳಸಿಮಾಲಾ ಅಭಿಮತ

ಗು.ವಿ.ವಿ ನೀಡಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ
Last Updated 21 ಜನವರಿ 2022, 16:23 IST
ಅಕ್ಷರ ಗಾತ್ರ

ಕಲಬುರಗಿ: ‘ಜಗತ್ತು ಸಾಗುವ ಸಮಕಾಲೀನ ಸ್ಥಿತಿಗೆ ನಾವು ನಮ್ಮ ಭಾಷೆಯನ್ನು ವಗ್ಗಿಸದಿದ್ದರೆ ಅದು ನಶಿಸುತ್ತ ಹೋಗುತ್ತದೆ. ಭಾಷೆಯ ಬೆಳವಣಿಗೆ ವಿಚಾರದಲ್ಲಿ ನಾವು ಮಡಿವಂತಿಕೆ ಬಿಡಲೇಬೇಕು’ ಎಂದುವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲಾ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ನೀಡಲಾದ 2020ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಶುಕ್ರವಾರ ಪ್ರದಾನ ಮಾಡಿ ಅವರು ಮಾತನಾಡಿದರು.

‘ದೇಶದಲ್ಲಿ ವೇಗವಾಗಿ ಪ್ರಗತಿ ಹೊಂದುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ. ಈ ಪ್ರಗತಿಯು ಭಾಷೆಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಚಿಂತನೆ ಅಗತ್ಯ. ರಾಜ್ಯವು ಅಭಿವೃದ್ಧಿಯತ್ತ ಸಾಗಿದರೆ ಭಾಷೆಯೂ ಅಭಿವೃದ್ಧಿಯಾಗುತ್ತದೆಯೇ? ಅಥವಾ ಕನ್ನಡವನ್ನು ಹಿಂದಿಟ್ಟು ನಮ್ಮ ಬದುಕು ವೇಗವಾಗಿ ಸಾಗುತ್ತಿದೆಯೇ? ಅಭಿವೃದ್ಧಿಯ ಪಥದಲ್ಲಿ ಭಾಷೆಯನ್ನೂ ಜೊತೆಜೊತೆಗೆ ಕೊಂಡೊಯ್ಯುವುದು ಹೇಗೆ ಎಂಬ ಜಿಜ್ಞಾಸೆ ಈಗಿನ ಚರ್ಚಾ ವಿಷಯವಾಗಬೇಕು’ ಎಂದರು.

‘ಕನ್ನಡದ ಬಗ್ಗೆ ಭಾವೋದ್ವೇಗದಿಂದ ಮಾತನಾಡುತ್ತೇವೆ. ಆದರೆ, ಅಷ್ಟರಮಟ್ಟಿಗೆ ಪಾಲನೆ ಮಾಡುವುದಿಲ್ಲ. ಸಾವಿರಾರು ವರ್ಷಗಳ ಇತಿಹಾಸವಿದ್ದರೂ ಇನ್ನೂ ನಾವು ಕನ್ನಡವನ್ನು ನಮ್ಮ ಬದುಕಿನ ಅವಿಭಾಜ್ಯ ಅಂಗ ಎಂದು ಪರಿಗಣಿಸಿಲ್ಲ. ಸಾಹಿತ್ಯ ಭಾಷೆಯಾಗಿ ಬೆಳೆದಷ್ಟು ಕನ್ನಡವು, ವಿಜ್ಞಾನದ ಭಾಷೆಯಾಗಲಿಲ್ಲ. ತಾಂತ್ರಿಕ, ತಾತ್ವಿಕ, ಅನ್ವಯಿಕ, ಕಾನೂನು, ಆಡಳಿತ, ಜ್ಞಾನವೃದ್ಧಿ, ಸಂಶೋಧನೆ ಸೇರಿದಂತೆ ನಾನಾಕ್ಷೇತ್ರಗಳಲ್ಲಿ ಕನ್ನಡವನ್ನು ನಾವಿನ್ನು ಏಕೆ ಪ್ರಭಾವಿ ಮಾಧ್ಯಮ ಮಾಡಿಲ್ಲ ಎಂಬ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡಬೇಕಿದೆ’ ಎಂದರು.

‘ಜಗತ್ತಿನ ಪ್ರಭಾವಿ ಭಾಷೆಗಳಲ್ಲಿ ಕನ್ನಡವೂ ಒಂದು ಎಂದು ವಿಶ್ವಸಂಸ್ಥೆಯೇ ಒಪ್ಪಿಕೊಂಡಿದೆ. ಜಗತ್ತಿನ ಶೇ 3.61ರಷ್ಟು ಜನ ಕನ್ನಡ ಮಾತನಾಡುತ್ತಾರೆ. ಭಾಷೆಗಳ ಪ್ರಭಾವದ ಸರಣಿಯಲ್ಲಿ ನಮಗೆ 27ನೇ ಸ್ಥಾನವಿದೆ. ದೇಶದಲ್ಲಿ 8ನೇ ಪ್ರಭಾವಿ ಭಾಷೆಯಾಗಿದೆ.ಜಗತ್ತಿನಲ್ಲಿ ಪ್ರತಿ ಎರಡು ನಿಮಿಷಕ್ಕೆ ಒಂದು ಮಾತೃಭಾಷೆ ಇಲ್ಲವಾಗುತ್ತದೆ ಎಂಬುದು ವಿಶ್ವಸಂಸ್ಥೆಯದ್ದೇ ವರದಿ. ಆಯಾ ಕಾಲಗುಣಕ್ಕೆ, ಅಭಿವೃದ್ಧಿ ವೇಗಕ್ಕೆ ಭಾಷೆಯನ್ನು ವಗ್ಗಿಸದಿರುವುದೇ ಈ ರೀತಿ ನಶಿಸುವಿಕೆಗೆ ಕಾರಣ ಎಂದೂ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕನ್ನಡಿಗರು ಕೂಡ ಅಪ್ಡೇಟ್‌ ಆಗದೇ ಇದ್ದಲ್ಲಿ ನಮ್ಮ ಅಸ್ಮಿತೆಗೂ ಧಕ್ಕೆ ಬರುವ ದಿನಗಳು ದೂರವಿಲ್ಲ’ ಎಂದೂ ಅವರು ಎಚ್ಚರಿಸಿದರು.

‘2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6.11 ಕೋಟಿ ಜನಸಂಖ್ಯೆ ಇದೆ. ಇದರಲ್ಲಿ ಶೇ 70ರಷ್ಟು ಮಾತ್ರ ಕನ್ನಡ ಮಾತನಾಡುವವರಿದ್ದಾರೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಶೇ 48ರಷ್ಟು ಮಾತ್ರ ಕನ್ನಡ ಬಳಕೆಯಲ್ಲಿದೆ. ಉಳಿದ ಶೇ 52ರಷ್ಟು ಮಂದಿ ಅನ್ಯಭಾಷೆ ಬಳಸುತ್ತಾರೆ’ ಎಂದರು.

ಕುಲಪತಿ ಪ್ರೊ.ದಯಾನಂದ ಅಗಸರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ವಿ.ವಿ ಸಿಂಡಿಕೇಟ್ ಸದಸ್ಯ ಸಂಗಮೇಶ ಪೂಜಾರಿ, ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಪ್ರೊ.ಶಿವಾಜಿ ವಾಘಮೋರೆ, ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ, ಪ್ರಸಾರಾಂಗ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ವೇದಿಕೆ ಮೇಲಿದ್ದರು.

*

ಪ್ರಶಸ್ತಿ ಪುರಷ್ಕೃತರು

ಸಿ.ಎಸ್‌.ಆನಂದ,ಪ್ರಭುಲಿಂಗ ನಿಲೂರೆ, ಡಾ.ಮಲ್ಲಿನಾಥ ಎಸ್.ತಳವಾರ,ಡಾ.ಪದ್ಮಾಕರ ಅಶೋಕಕುಮಾರ ಮಟ್ಟಿ,ಈರಣ್ಣ ಬೆಂಗಾಲಿ, ಡಾ.ಬಸವರಾಜ ಸಬರದ,ಶ್ರೀನಿವಾಸ ಸಿರನೂರಕರ್,ಡಾ.ಸುರೇಶ ಎಲ್.ಜಾಧವ,ಡಾ.ಚನ್ನಬಸವಯ್ಯ ಹಿರೇಮಠ,ಡಾ.ಪ್ರೇಮಾ ಅಪಚಂದ, ಡಾ.ಮುಮ್ತಾಜ್ ಬೇಗಂ, ಡಾ.ಎಂ.ನಾಗರಾಜ,ಶಕೀಲ್.ಐ.ಎಸ್,ಗಿರೀಶ ಜಕಾಪುರೆ, ಡಾ.ಅನೀಸ್ ಸಿದ್ದಿಖಿ, ಡಾ.ಗುರುಲಿಂಗಪ್ಪ ಧಬಾಲೆ, ಪಾರ್ವತಿ ಡಿ. ಬಿರಾದಾರ, ಗಿರೀಶ ಬಿ.ಕುಲಕರ್ಣಿ, ಗೌತಮ ಈರಣ್ಣ, ಹಣಮಂತ ಡಿ. ಬಾಡದ್, ಮಲ್ಲಪ್ಪ ಕೇರಿ,ಶರಣಬಸಪ್ಪ ವಡ್ಡನಕೇರಿ,ದಾವಲಸಾಬ್‌ ಅತ್ತಾರ ಅವರಿಗೆ ಪ್ರಶಸ್ತಿ ಪತ್ರ, ನಗದು ಹಾಗೂ ವಿವಿಧ ಪದಕಗಳನ್ನು ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT